NEET–UG ಫಲಿತಾಂಶ ಪ್ರಕಟ: 11.21 ಲಕ್ಷ ಅಭ್ಯರ್ಥಿಗಳು ಉತ್ತೀರ್ಣ
715 ಅಂಕಗಳೊಂದಿಗೆ ಆರ್ಯನ್ ಗುಪ್ತಾ, ಪನ್ಶುಲ್ ಬನ್ಸಾಲ್ ಗೆ ಅಗ್ರಸ್ಥಾನ; 138 ಮಂದಿಗೆ 690ಕ್ಕೂ ಹೆಚ್ಚು ಅಂಕ
ಸಾಂದರ್ಭಿಕ ಚಿತ್ರ | Photo credit: PTI
ಹೊಸದಿಲ್ಲಿ, ಜು.16: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗುರುವಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ NEET–UG 2026ರ ಫಲಿತಾಂಶವನ್ನು ಪ್ರಕಟಿಸಿದೆ. ದೇಶದಾದ್ಯಂತ MBBS, BDS, ಆಯುಷ್ ಹಾಗೂ ಇತರ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ವೈದ್ಯಕೀಯ ಪ್ರವೇಶ ಮತ್ತು ಕೌನ್ಸೆಲಿಂಗ್ ವೇಳಾಪಟ್ಟಿಗೆ ಯಾವುದೇ ವಿಳಂಬವಾಗದಂತೆ ಫಲಿತಾಂಶವನ್ನು ಸಕಾಲದಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಯನ್ನು ಅಧಿಕೃತ ವೆಬ್ಸೈಟ್ neet.nta.nic.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅಖಿಲ ಭಾರತ ಶ್ರೇಯಾಂಕ (AIR), ರಾಜ್ಯವಾರು ಟಾಪರ್ ಗಳು, ವರ್ಗವಾರು ಟಾಪರ್ಗಳು, ಅರ್ಹತಾ ಕಟ್ಆಫ್ಗಳು ಹಾಗೂ ಭಾಷಾವಾರು ಪರೀಕ್ಷಾರ್ಥಿಗಳ ವಿವರಗಳನ್ನೂ NTA ಪ್ರಕಟಿಸಿದೆ.
ಜೂನ್ 21ರಂದು ನಡೆದ NEET–UG–2026ರ ಮರುಪರೀಕ್ಷೆಯಲ್ಲಿ ದೇಶದ 551 ನಗರಗಳು ಹಾಗೂ ವಿದೇಶಗಳ 14 ನಗರಗಳಲ್ಲಿನ 5,440 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ, ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಅರ್ಹ ಅಭ್ಯರ್ಥಿಗಳಲ್ಲಿ 58 ಪ್ರತಿಶತಕ್ಕೂ ಹೆಚ್ಚು ಮಹಿಳೆಯರು ಇದ್ದು, ಪುರುಷ ಅಭ್ಯರ್ಥಿಗಳಿಗಿಂತ ಮಹಿಳೆಯರ ಅರ್ಹತಾ ಪ್ರಮಾಣ ಹೆಚ್ಚಾಗಿದೆ ಎಂದು NTA ತಿಳಿಸಿದೆ. ಪಂಜಾಬ್ ನ ಆರ್ಯನ್ ಗುಪ್ತಾ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್ ತಲಾ 720ಕ್ಕೆ 715 ಅಂಕ ಗಳಿಸಿ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ.
NTA ಬಿಡುಗಡೆ ಮಾಡಿದ ಅಂಕಿ–ಅಂಶಗಳ ಪ್ರಕಾರ, 700ಕ್ಕೂ ಹೆಚ್ಚು ಅಂಕಗಳನ್ನು 19 ಅಭ್ಯರ್ಥಿಗಳು, 690ಕ್ಕೂ ಹೆಚ್ಚು ಅಂಕಗಳನ್ನು 138 ಅಭ್ಯರ್ಥಿಗಳು, 650 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು 1,492 ಅಭ್ಯರ್ಥಿಗಳು, 600 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು 10,160 ಅಭ್ಯರ್ಥಿಗಳು ಹಾಗೂ 500 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು 90,780 ಅಭ್ಯರ್ಥಿಗಳು ಗಳಿಸಿದ್ದಾರೆ.
690ಕ್ಕೂ ಹೆಚ್ಚು ಅಂಕ ಗಳಿಸಿದ 138 ಅಭ್ಯರ್ಥಿಗಳಲ್ಲಿ 93 ಶೇ.ಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ NEET ಪರೀಕ್ಷೆ ಬರೆದವರು ಆಗಿದ್ದು, ಅವರೆಲ್ಲರೂ 17ರಿಂದ 19 ವರ್ಷ ವಯೋಮಾನದವರಾಗಿದ್ದಾರೆ ಎಂದು NTA ತಿಳಿಸಿದೆ.
ಒಟ್ಟು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 1.7 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಲಕ್ಷದ್ವೀಪದಲ್ಲಿ 43 ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
17 ರಾಜ್ಯಗಳ ಟಾಪರ್ ಗಳು 700 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, 26 ರಾಜ್ಯಗಳ ಟಾಪರ್ ಗಳು 690ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
►ವರ್ಗವಾರು ಅರ್ಹತೆ
ಪ್ರಮುಖ ವರ್ಗಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ ಹೀಗಿದೆ:
ಸಾಮಾನ್ಯ – 2.91 ಲಕ್ಷ
OBC (NCL) – 5.12 ಲಕ್ಷ
SC– 1.59 ಲಕ್ಷ
ST – 63,716
ಸಾಮಾನ್ಯ–EWS – 95,026
PWBD – 3,666
PWD– 303
ವರ್ಗವಾರು ಕಟ್ಆಫ್ ಅಂಕಗಳು ಹಾಗೂ ಅರ್ಹತಾ ಶೇಕಡಾವಾರು ವಿವರಗಳನ್ನೂ NTA ಪ್ರಕಟಿಸಿದೆ. ಅಂತಿಮ ಉತ್ತರ ಕೀ ಬಿಡುಗಡೆಯಾದ ಒಂದು ದಿನದ ಬಳಿಕ ಫಲಿತಾಂಶ ಪ್ರಕಟಿಸಲಾಗಿದೆ. ಇದಕ್ಕೂ ಮುನ್ನ ಭೌತಶಾಸ್ತ್ರ ವಿಭಾಗದ ಎರಡು ಪ್ರಶ್ನೆಗಳಲ್ಲಿ NTA ತಿದ್ದುಪಡಿ ಮಾಡಿತ್ತು. ಒಂದು ಪ್ರಶ್ನೆಯನ್ನು ಕೈಬಿಡಲಾಗಿದ್ದು, ಮತ್ತೊಂದು ಪ್ರಶ್ನೆಗೆ ಎರಡು ಉತ್ತರಗಳನ್ನು ಸರಿಯಾದ ಉತ್ತರಗಳೆಂದು ಪರಿಗಣಿಸಲಾಗಿತ್ತು. ಮೌಲ್ಯಮಾಪನ ನೀತಿಯಂತೆ ಇದರ ಪರಿಣಾಮ ಎಲ್ಲ ಅಭ್ಯರ್ಥಿಗಳಿಗೆ 8 ಬೋನಸ್ ಅಂಕಗಳನ್ನು ನೀಡಲಾಗಿದೆ.
ಪರೀಕ್ಷಾ ಪ್ರಕ್ರಿಯೆಯಲ್ಲಿ ಜೂನ್ 25ರಂದು ತಾತ್ಕಾಲಿಕ ಆನ್ಸರ್ ಕೀ ಪ್ರಕಟಿಸಲಾಗಿತ್ತು. ಜುಲೈ 13ರಿಂದ 15ರವರೆಗೆ OMR ಪ್ರತಿಕ್ರಿಯೆ ಹಾಳೆಗಳನ್ನು ಅಭ್ಯರ್ಥಿಗಳಿಗೆ ಸಿಗುವಂತೆ ಮಾಡಲಾಗಿತ್ತು. ಜುಲೈ 16ರಂದು ಅಂತಿಮ ಆನ್ಸರ್ ಕೀ ಬಿಡುಗಡೆಗೊಂಡು, ಅದೇ ದಿನ ಫಲಿತಾಂಶವೂ ಪ್ರಕಟವಾಗಿದೆ.
►ಕೌನ್ಸೆಲಿಂಗ್ ಪ್ರಕ್ರಿಯೆ
ಫಲಿತಾಂಶ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳು ಈಗ MBBS, BDS, ಆಯುಷ್ ಹಾಗೂ ಇತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
15 ಶೇ. ಅಖಿಲ ಭಾರತ ಕೋಟಾ ಸೀಟುಗಳ ಕೌನ್ಸೆಲಿಂಗ್ ಅನ್ನು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ನಡೆಸಲಿದ್ದು, ಉಳಿದ ರಾಜ್ಯ ಕೋಟಾದ ಸೀಟುಗಳನ್ನು ಆಯಾ ರಾಜ್ಯಗಳ ಕೌನ್ಸೆಲಿಂಗ್ ಪ್ರಾಧಿಕಾರಗಳು ಭರ್ತಿ ಮಾಡಲಿವೆ. ಕೌನ್ಸೆಲಿಂಗ್ಗೆ ಸಂಬಂಧಿಸಿದ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ಅವಲಂಬಿಸುವಂತೆ NTA ಅಭ್ಯರ್ಥಿಗಳಿಗೆ ಸೂಚಿಸಿದೆ.