ಬುಶ್ರಾ ಬಾನು| Photo Credit : X

ಹೊಸದಿಲ್ಲಿ: ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುವ ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಹಾಗೂ ‘ಜಝಾಕಲ್ಲಾಹ್’ ಎಂಬ ಪದಗಳನ್ನು ಬಳಸಿದ ಪಶ್ಚಿಮ ಬಂಗಾಳ ಕೇಡರ್ ನ ಐಪಿಎಸ್ ಅಧಿಕಾರಿ ಡಾ. ಬುಶ್ರಾ ಬಾನು ಅವರ ವರ್ಗಾವಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.

ಬುಶ್ರಾ ಬಾನು ಅವರ ವಿರುದ್ಧ ಬಲಪಂಥೀಯ ಗುಂಪೊಂದು ದೂರು ಸಲ್ಲಿಸಿದ ಬೆನ್ನಲ್ಲೇ ಅವರನ್ನು ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ 4ನೇ ಬೆಟಾಲಿಯನ್ನ ಡೆಪ್ಯುಟಿ ಕಮಾಂಡೆಂಟ್ ಆಗಿ ವರ್ಗಾಯಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅಧಿಕೃತ ಆದೇಶದಲ್ಲಿ ‘ಸಾರ್ವಜನಿಕ ಹಿತದೃಷ್ಟಿಯಿಂದ’ ಎಂದು ಮಾತ್ರ ಕಾರಣ ನೀಡಲಾಗಿದೆ. ಆದರೆ, ಬಲಪಂಥೀಯರ ವಿರೋಧದ ಬೆನ್ನಲ್ಲೇ ವರ್ಗಾವಣೆ ಶಿಕ್ಷೆ ನೀಡಲಾಗಿದೆಯೇ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ, ಹಿರಿಯ ಪೊಲೀಸ್‌ ಅಧಿಕಾರಿಗಳು ತಮ್ಮ ಸೇವಾ ಸಮವಸ್ತ್ರದಲ್ಲೇ ಧಾರ್ಮಿಕ ಗುರುತಿನೊಂದಿಗೆ ಕಾಣಿಸಿಕೊಂಡಾಗ ಉಂಟಾಗದ ಆಕ್ರೋಶ, ವರ್ಗಾವಣೆ ಶಿಕ್ಷೆ ಮುಸ್ಲಿಂ ಅಧಿಕಾರಿಯ ವಿಚಾರದಲ್ಲಿ ಯಾಕೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಮಹುವಾ ಮೊಯಿತ್ರಾ ಆಕ್ರೋಶ:

ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಮಹುವಾ ಮೊಯಿತ್ರಾ ಅವರು ಎಕ್ಸ್ ನಲ್ಲಿ ಬುಶ್ರಾ ಬಾನು ಅವರ ವರ್ಗಾವಣೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ‘ಪ್ರಾರ್ಥನಾ ಕೊಠಡಿ’ ನಿರ್ಮಿಸುವ ಮೂಲಕ ಒಂದು ಬಿಜೆಪಿ ಸರ್ಕಾರ ತನ್ನ ಜಾತ್ಯತೀತ ನಿಲುವನ್ನು ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ‘ಅಸ್ಸಲಾಮು ಅಲೈಕುಮ್’ ಮತ್ತು ‘ಜಝಾಕಲ್ಲಾಹ್’ ಎಂದಿದ್ದಕ್ಕಾಗಿ ಮುಸ್ಲಿಂ ಮಹಿಳಾ ಐಪಿಎಸ್ ಅಧಿಕಾರಿ ಡಾ. ಬುಶ್ರಾ ಬಾನು ಅವರನ್ನು ಬದಿಗೆ ಸರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘ಗೋದಿ ಮೀಡಿಯಾ’ ಮೂಲಕ ಹರಡಲಾಗುತ್ತಿರುವ ದ್ವೇಷಕ್ಕೆ ಇದು ಮತ್ತಷ್ಟು ಉತ್ತೇಜನ ನೀಡುತ್ತಿದೆ ಎಂದು ಟೀಕಿಸಿರುವ ಮೊಯಿತ್ರಾ, ‘ನಾವು ಬುಶ್ರಾ ಅವರೊಂದಿಗಿದ್ದೇವೆ’ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಮುಸ್ಲಿಂ ಗುರುತನ್ನೇ ಅಳಿಸಬೇಕೇ?’

ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಫಾತಿಮಾ ಖಾನ್ ಎಂಬವರು, "ಬುಶ್ರಾ ಬಾನು ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವುದು ಅಥವಾ ಪೊಲೀಸ್ ಅಧಿಕಾರಿಯಾಗಿರುವುದು ಸಾಕಾಗುವುದಿಲ್ಲ; ‘ಉತ್ತಮ ಮುಸ್ಲಿಂ’ ಎಂದು ಪರಿಗಣಿಸಲು ತಮ್ಮ ಮುಸ್ಲಿಂ ಗುರುತನ್ನೇ ಸಂಪೂರ್ಣವಾಗಿ ಅಳಿಸಬೇಕೆಂಬ ನಿರೀಕ್ಷೆ ಇದೆ" ಎಂದು ಟೀಕಿಸಿದ್ದಾರೆ.

‘ರಾಜ್ಯಕ್ಕೆ ವಿದ್ಯಾವಂತ ಮುಸ್ಲಿಮರು ಬೇಡ, ವಿಧೇಯ ಮುಸ್ಲಿಮರು ಬೇಕು’ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

‘ಇದು ಕಳವಳಕಾರಿ’

ಟೀಂ ಇಂಡಿಯಾ ಮಾಜಿ ನಾಯಕ, ತೆಲಂಗಾಣ ಸಚಿವ ಮಹಮ್ಮದ್ ಅಝರುದ್ದೀನ್ ಕೂಡಾ ಇದನ್ನು ಖಂಡಿಸಿದ್ದು, ‘ಅಸ್ಸಲಾಮು ಅಲೈಕುಮ್’ ಮತ್ತು ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕಾಗಿ ದೂರು ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂಬ ವರದಿಗಳು ಗಂಭೀರವಾಗಿ ಕಳವಳಕಾರಿ ಎಂದು ಹೇಳಿದ್ದಾರೆ.

‘ಅಭಿವಂದನೆಯೇ ಸರ್ಕಾರಿ ನೌಕರನ ವಿರುದ್ಧ ಕ್ರಮಕ್ಕೆ ಕಾರಣವಾಗುವುದಾದರೆ, ಅಲ್ಪಸಂಖ್ಯಾತರಿಗೆ ನಾವು ಯಾವ ಸಂದೇಶ ನೀಡುತ್ತಿದ್ದೇವೆ?’ ಎಂದು ಪ್ರಶ್ನಿಸಿರುವ ಅವರು, ಭಾರತದ ಶಕ್ತಿ ವೈವಿಧ್ಯತೆಯಲ್ಲಿದೆ; ವ್ಯಕ್ತಿಯ ಧಾರ್ಮಿಕ ಗುರುತನ್ನು ನಿಯಂತ್ರಿಸುವುದರಲ್ಲಿ ಅಲ್ಲ ಎಂದು ಹೇಳಿದ್ದಾರೆ.

West Bengal: IPS officer Bushra Bano was transferred after a video in which she was heard saying “Assalamualaikum, InshaAllah, JazakAllah.”

Uttar Pradesh: Sambhal’s then CO Anuj Chaudhary participated in a religious Rath Yatra in uniform, carrying a mace — and was later promoted… pic.twitter.com/WBqND7EbOM

— Muslim Voice Cell (@MuslimVoiceCell) September 15, 2026

‘ಎರಡು ಮಾನದಂಡ’ದ ಪ್ರಶ್ನೆ

‘ಗಿಮೊ’ ಎಂಬ ಎಕ್ಸ್ ಬಳಕೆದಾರರು, ಮುಸ್ಲಿಂ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ವಿಡಿಯೊದಲ್ಲಿ ‘ಅಸ್ಸಲಾಮು ಅಲೈಕುಮ್’ ಎಂದಿದ್ದಕ್ಕೆ ಇಷ್ಟೊಂದು ಆಕ್ಷೇಪ ಏಕೆ ಎಂಬ ಪ್ರಶ್ನೆ ಎತ್ತಿದ್ದಾರೆ.

ಹಿಂದೂ ಪೊಲೀಸ್ ಅಧಿಕಾರಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಪಾಲ್ಗೊಂಡಿರುವ ಹಲವು ಉದಾಹರಣೆಗಳಿದ್ದರೂ, ಅದೇ ರೀತಿಯ ಆಕ್ಷೇಪಣೆ ಕಂಡುಬರುವುದಿಲ್ಲ. ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ ಸಿ.ವಿ. ಆನಂದ್ ಅವರು ಡಿಜಿಪಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಕಚೇರಿಯಲ್ಲಿ ವೈದಿಕ ಮಂತ್ರೋಚ್ಚಾರಣೆ ನಡೆದಿದ್ದ ಘಟನೆಯನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

ಮಾಜಿ ಸಂಸದ ಜವಾಹರ್ ಸಿರ್ಕಾರ್ ಕೂಡ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡಿದ ನಂತರವೂ ದೇಶದ ರಾಜಕೀಯ ವ್ಯವಸ್ಥೆಯಿಂದ ‘ವಿಷಕಾರಿ’ ಪರಿಣಾಮಗಳನ್ನು ತೊಡೆದುಹಾಕಿ ಮತ್ತೆ ಜಾತ್ಯತೀತತೆಯತ್ತ ಮರಳಲು ಹಲವು ವರ್ಷಗಳು ಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನುಜ್ ಚೌಧರಿ ಪ್ರಕರಣ ಮುನ್ನೆಲೆಗೆ

ಬುಶ್ರಾ ಬಾನು ಪ್ರಕರಣದೊಂದಿಗೆ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಅವರ ಹಿಂದಿನ ಘಟನೆಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹೋಲಿಸಲಾಗುತ್ತಿದೆ.

2025ರಲ್ಲಿ ಹೋಳಿ ಮತ್ತು ರಮಝಾನ್ ಒಂದೇ ಸಂದರ್ಭದಲ್ಲಿ ಬಂದಾಗ ಮುಸ್ಲಿಮರಿಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಧಾರ್ಮಿಕ ರಥಯಾತ್ರೆಯೊಂದರಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಪಾಲ್ಗೊಂಡು ಗದೆ ಹಿಡಿದಿದ್ದ ಅವರ ಹಿಂದಿನ ಘಟನೆಯನ್ನೂ ಈಗ ಮತ್ತೆ ಪ್ರಸ್ತಾಪಿಸಲಾಗುತ್ತಿದೆ.

2025ರ ಮಾರ್ಚ್ ನಲ್ಲಿ ಸಂಭಲ್ ನ ಅಂದಿನ ಸರ್ಕಲ್ ಆಫೀಸರ್ ಆಗಿದ್ದ ಅನುಜ್ ಚೌಧರಿ, ಹೋಳಿ ವರ್ಷಕ್ಕೊಮ್ಮೆ ಬರುತ್ತದೆ, ಆದರೆ ಶುಕ್ರವಾರದ ನಮಾಝ್ ವರ್ಷಕ್ಕೆ 52 ಬಾರಿ ಬರುತ್ತದೆ; ಹೋಳಿಯ ಬಣ್ಣಗಳಿಂದ ಅಸೌಕರ್ಯವಿದ್ದವರು ಆ ದಿನ ಮನೆಯಿಂದ ಹೊರಬರಬಾರದು ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಗದೆ ಹಿಡಿದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪ: ಜನವರಿ 2025ರ ವರದಿಗಳ ಪ್ರಕಾರ, ಸಮವಸ್ತ್ರದಲ್ಲಿದ್ದ ಅನುಜ್ ಚೌಧರಿ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡು ‘ಹನುಮಂತನ ಗದೆ’ ಹಿಡಿದಿರುವ ವಿಡಿಯೊಗಳು ಹರಿದಾಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor