'ಬಿಜೆಪಿ, ಕಾಂಗ್ರೆಸ್‌ ಗೆ ಮಾತ್ರ ಮಾತನಾಡಲು ಅವಕಾಶ; ನಮಗೇಕಿಲ್ಲ?': NEET ಚರ್ಚೆ ವೇಳೆ ಲೋಕಸಭೆಯಲ್ಲಿ ಅಖಿಲೇಶ್ ಯಾದವ್ ಆಕ್ಷೇಪ

Update: 2026-07-22 16:44 IST

ಅಖಿಲೇಶ್ ಯಾದವ್ | Photo Credit : PTI

ಹೊಸದಿಲ್ಲಿ: ನೀಟ್- ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜುಲೈ 20 ರ ಯುವಜನ ಪ್ರತಿಭಟನೆಯ ಮೇಲಿನ ಪೊಲೀಸ್ ದೌರ್ಜನ್ಯದ ಕುರಿತು ಮಾತನಾಡಲು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿ, ತಮಗೆ ನೀಡದಿರುವ ಸ್ಪೀಕರ್ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸರ್ಕಾರವೇನಾದರೂ ಕಾಂಗ್ರೆಸ್‌ ಜೊತೆಗೆ ಒಪ್ಪಂದ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದರು.

ಬುಧವಾರ ಲೋಕಸಭೆ ಅಧಿವೇಶನ ಆರಂಭವಾಗುತ್ತಿದ್ದಂತೆಯೇ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷಗಳಿಂದ ತೀವ್ರ ಗದ್ದಲ ಉಂಟಾಯಿತು. ಸಭೆಯನ್ನು ಮುಂದೂಡಿದರೂ ವಿಪಕ್ಷಗಳು ಪಟ್ಟು ಸಡಿಲಿಸಲು ನಿರಾಕರಿಸಿದಾಗ, ಸ್ಪೀಕರ್ ಓಂ ಬಿರ್ಲಾ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಿದರು.

ಇದರಿಂದ ತೀವ್ರ ಅಸಮಾಧಾನಗೊಂಡಂತೆ ಕಂಡುಬಂದ ಅಖಿಲೇಶ್, ತಕ್ಷಣ ಎದ್ದು ನಿಂತು ಮಧ್ಯಪ್ರವೇಶಿಸಿದರು.

“ಇದು ಸಮಾಜವಾದಿ ಪಕ್ಷ, ಕಾಂಗ್ರೆಸ್ ಅಥವಾ ಬಿಜೆಪಿಗೆ ಸಂಬಂಧಿಸಿದ ವಿಷಯವಲ್ಲ. ಬದಲಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಸಂಬಂಧಿಸಿದ ವಿಷಯ” ಎಂದು ಹೇಳಿದರು.

“ನೀವು ಅವರಿಗೂ (ಕಾಂಗ್ರೆಸ್) ಮತ್ತು ಇವರಿಗೂ (ಬಿಜೆಪಿ) ಮಾತನಾಡಲು ಅವಕಾಶ ನೀಡಿದ್ದೀರಿ. ನಮ್ಮ ಕಥೆ ಏನು? ಸರ್ಕಾರವೇನಾದರೂ ಒಪ್ಪಂದ ಮಾಡಿಕೊಂಡಿದೆಯೇ? ನೀವೇನಾದರೂ ಒಂದು ರೀತಿಯ ಆಂತರಿಕ ತಿಳುವಳಿಕೆಗೆ ಬಂದಿದ್ದೀರಾ?" ಎಂದು ಅಖಿಲೇಶ್ ಪ್ರಶ್ನಿಸಿದರು.

ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದ ಅಖಿಲೇಶ್, ವಿದ್ಯಾರ್ಥಿಗಳ ಕಳವಳಗಳನ್ನು ಮತ್ತು ಸಮಸ್ಯೆಗಳನ್ನು ಹೀಗೆಯೇ ನಿರ್ಲಕ್ಷಿಸುವುದು ಮುಂದುವರಿದರೆ ಅವರು ಮತ್ತೆ ರಸ್ತೆಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News