Photo Credit : PTI 

ಹೊಸದಿಲ್ಲಿ: ಸಂಸತ್ತಿನ 2026ರ ಮುಂಗಾರು ಅಧಿವೇಶನ ಅಧಿಕೃತವಾಗಿ ಮುಕ್ತಾಯಗೊಳ್ಳದೆ 100 ದಿನ ಕಳೆದಿದ್ದು, ಹೊಸ ದಾಖಲೆ ನಿರ್ಮಿಸಿದೆ. ಆ. 13ರಂದು ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದರೂ, ಉಭಯ ಸದನಗಳ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

2008ರಲ್ಲಿ ಸಂಸತ್ತಿನ ಅಧಿವೇಶನ 87 ದಿನಗಳ ಕಾಲ ಅಧಿಕೃತವಾಗಿ ಮುಕ್ತಾಯಗೊಳ್ಳದೆ ಉಳಿದಿತ್ತು.

ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕಾಗಿ ವಿಶೇಷ ಅಥವಾ ವಿಸ್ತೃತ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಮಸೂದೆಯ ಮೂಲಕ ಲೋಕಸಭೆಯ ಸದಸ್ಯ ಬಲವನ್ನು ಈಗಿರುವ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಕ್ಷೇತ್ರ ಮರುವಿಂಗಡಣೆ (Delimitation) ಪ್ರಸ್ತಾಪಿಸಲಾಗಿದೆ. 2029ರ ಲೋಕಸಭಾ ಚುನಾವಣೆಗೆ ಮುನ್ನ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ದಕ್ಷಿಣ ರಾಜ್ಯಗಳ ಆತಂಕವನ್ನು ನಿವಾರಿಸಲು ಪ್ರತಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾಪವೂ ಸರ್ಕಾರದ ಪರಿಶೀಲನೆಯಲ್ಲಿದೆ ಎನ್ನಲಾಗಿದೆ. 1971ರ ಜನಗಣತಿಯ ಆಧಾರದಲ್ಲಿ ರಾಜ್ಯಗಳ ನಡುವಿನ ಹಾಲಿ ಕ್ಷೇತ್ರಗಳ ಅನುಪಾತವನ್ನು ಉಳಿಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ. ಆದರೆ, ಈ ಕುರಿತು ಅಂತಿಮ ನಿರ್ಧಾರವಾಗಿಲ್ಲ.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಲೋಕಸಭೆಯ ಸದಸ್ಯ ಬಲವನ್ನು ಮುಂದಿನ 25 ವರ್ಷಗಳವರೆಗೆ 543ಕ್ಕೆ ಸೀಮಿತಗೊಳಿಸಬೇಕು. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಾತಿನಿಧ್ಯದಲ್ಲೂ ಬದಲಾವಣೆ ಮಾಡಬಾರದು ಎಂಬುದು ಪ್ರತಿಪಕ್ಷಗಳ ಬೇಡಿಕೆಯಾಗಿದೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ ಲೋಕಸಭೆಯ ಮೂರನೇ ಎರಡರಷ್ಟು ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್‌ ಫೈಝಲ್‌ , ವಾರ್ತಾ ಭಾರತಿ

contributor