ಪೆಲೆಟ್ ಗನ್ ಬಳಕೆ ಮಾನವ ಹಕ್ಕು ಉಲ್ಲಂಘನೆಯಲ್ಲ; RTI ಉತ್ತರದಲ್ಲಿ ತಿಳಿಸಿದ CRPF: TMC ನಾಯಕ ಸಾಕೇತ್ ಗೋಖಲೆ
Photo Credit : PTI
ಹೊಸದಿಲ್ಲಿ: ದಿಲ್ಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲ ಎಂದು CRPF ಹೇಳಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ನಾಯಕ ಸಾಕೇತ್ ಗೋಖಲೆ ಸೋಮವಾರ ಆರೋಪಿಸಿದ್ದಾರೆ ಎಂದು deccanherald.com ವರದಿ ಮಾಡಿದೆ.
ಜುಲೈ 20ರಂದು ದಿಲ್ಲಿಯಲ್ಲಿ ಪ್ರತಿಭಟನಾಕಾರರ ಮೇಲೆ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಪೆಲೆಟ್ ಗುಂಡು ಹಾರಿಸಿರುವ ಕುರಿತು ಮಾಹಿತಿ ಕೋರಿ ಗೋಖಲೆ ಅವರು ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಗೆ ಮಾಹಿತಿ ಹಕ್ಕು ಕಾಯ್ದೆ(RTI)ಯಡಿ ಅರ್ಜಿ ಸಲ್ಲಿಸಿದ್ದರು. RAF, CRPFನ ಭಾಗವಾಗಿದೆ.
ಜುಲೈ 20ರಂದು ಕಾಕ್ರೋಚ್ ಜನತಾ ಪಕ್ಷ(CJP)ದ ಕರೆಯ ಮೇರೆಗೆ ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ನಡೆಸಿದ್ದರು. ತಾವು ಸಲ್ಲಿಸಿದ್ದ RTI ಅರ್ಜಿಗೆ CRPF ನೀಡಿದ ಉತ್ತರದ ಪ್ರತಿಯನ್ನು ಗೋಖಲೆ ಹಂಚಿಕೊಂಡಿದ್ದಾರೆ.
‘ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅರ್ಜಿಯಲ್ಲಿ ಮಾಡಿರುವ ಆರೋಪಗಳಿಗೆ RTI ಕಾಯ್ದೆಯ ವಿನಾಯಿತಿ ಅನ್ವಯಿಸುವುದಿಲ್ಲ’ ಎಂದು CRPF ತನ್ನ ಉತ್ತರದಲ್ಲಿ ತಿಳಿಸಿದೆ.
‘ಭ್ರಷ್ಟಾಚಾರ ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದರಿಂದ CRPFಗೆ RTI ಕಾಯ್ದೆಯಡಿ ವಿನಾಯಿತಿ ಇದ್ದರೂ, ಭ್ರಷ್ಟಾಚಾರ ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳಿಗೆ ಆ ವಿನಾಯಿತಿ ಅನ್ವಯಿಸುವುದಿಲ್ಲ. ಆದರೆ, ದಿಲ್ಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿರುವ ಕುರಿತು ನಾನು ಕೇಳಿದ ಮಾಹಿತಿಯನ್ನು CRPF ನೀಡಲಿಲ್ಲ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ, ಮೇಲ್ಮನವಿ ಪ್ರಾಧಿಕಾರವೂ ಇದೇ ಕಾರಣ ನೀಡಿ ಮಾಹಿತಿಯನ್ನು ನಿರಾಕರಿಸಿತು’ ಎಂದು ಗೋಖಲೆ ಹೇಳಿದ್ದಾರೆ. ಕೇಂದ್ರ ಸರ್ಕಾರವು ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಸಿರುವುದನ್ನು ನಿರಾಕರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
‘ಮೊದಲು ಮೋದಿ–ಶಾ ಸರ್ಕಾರ ಪೆಲೆಟ್ ಗುಂಡು ಹಾರಿಸಿರುವುದನ್ನೇ ನಿರಾಕರಿಸಿತು. ಬಳಿಕ ಪೆಲೆಟ್ ಗುಂಡು ಹಾರಿಸಿರುವುದು ಬಹಿರಂಗವಾದಾಗ, ಅದರಿಂದ ಗಾಯಗೊಂಡವರ ಒಟ್ಟು ಸಂಖ್ಯೆಯ ವಿವರಗಳನ್ನು ನೀಡಲು ನಿರಾಕರಿಸಿತು. ಈಗ ಭಾರತದ ರಾಜಧಾನಿಯಲ್ಲಿ ನಿರಾಯುಧ ಯುವಕರ ಮೇಲೆ ಪೆಲೆಟ್ ಗುಂಡು ಹಾರಿಸಿರುವುದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಮಿತ್ ಶಾ ಅವರ ಅಧೀನದಲ್ಲಿರುವ CRPF ಹೇಳುತ್ತಿರುವುದು ದಿಗ್ಭ್ರಮೆ ಮೂಡಿಸಿದೆ. ಅಂತರರಾಷ್ಟ್ರೀಯ ಕಾನೂನಿನಡಿ ಪೆಲೆಟ್ ಗುಂಡು ಹಾರಿಸುವುದನ್ನು ನಿಷೇಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ವಾದವನ್ನು ಒಪ್ಪಿಕೊಳ್ಳುವುದು ಆಘಾತಕಾರಿ. ಈ ವಿಷಯದಲ್ಲಿ ನ್ಯಾಯಾಲಯದ ಅಭಿಪ್ರಾಯ ತಿಳಿದುಕೊಳ್ಳಲು CRPFನ RTI ಉತ್ತರವನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸುತ್ತೇನೆ’ ಎಂದು ಗೋಖಲೆ ತಿಳಿಸಿದ್ದಾರೆ.
ಈ ಹಿಂದೆ, RTI ಅರ್ಜಿಗಳಿಗೆ ಲೇಡಿ ಹಾರ್ಡಿಂಜ್ ಆಸ್ಪತ್ರೆ ಮತ್ತು ಸಫ್ದರ್ಜಂಗ್ ಆಸ್ಪತ್ರೆಗಳು ನೀಡಿದ ಉತ್ತರಗಳನ್ನು ಉಲ್ಲೇಖಿಸಿದ್ದ ಗೋಖಲೆ, ಜುಲೈ 20ರಂದು ಪೆಲೆಟ್ ಗುಂಡಿನಿಂದ ಗಾಯಗೊಂಡು ಕ್ರಮವಾಗಿ ಒಂಭತ್ತು ಮತ್ತು ಒಬ್ಬ ವ್ಯಕ್ತಿ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದ್ದರು.
ಜುಲೈ 20ರಂದು ನಡೆದ ಪ್ರತಿಭಟನೆಯ ವೇಳೆ ಪೆಲೆಟ್, ಗುಂಡು ಅಥವಾ ಇತರ ಪ್ರೊಜೆಕ್ಟೈಲ್ ಗಳಿಂದ ಗಾಯಗೊಂಡವರ ಕುರಿತು RTI ಕಾಯ್ದೆಯಡಿ ಮಾಹಿತಿ ಕೇಳಲಾಗಿತ್ತು. ಆದರೆ, ಗಾಯಗೊಂಡವರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವ ನಿಬಂಧನೆಗಳನ್ನು ಉಲ್ಲೇಖಿಸಿ ಏಮ್ಸ್ ಆ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿತ್ತು.
ಸೌಜನ್ಯ: deccanherald.com