CEC ಜ್ಞಾನೇಶ್ ಕುಮಾರ್ ಅವರ ಆದೇಶಗಳನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್ ಗೆ ಅರ್ಜಿ
► SIRನಲ್ಲಿ ಕೈಬಿಟ್ಟ ಮತದಾರರ ಹೆಸರು ಮರುಸ್ಥಾಪನೆಗೆ ಮನವಿ ► SIR ನಡೆದ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮುಂದೂಡಲೂ ಕೋರಿಕೆ
Photo Credit : barandbench
ಮುಂಬೈ, ಸೆ.24: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಪ್ರತಿಯೊಬ್ಬ ಮತದಾರರ ಹೆಸರನ್ನು ಮರುಸ್ಥಾಪಿಸುವಂತೆ ಕೋರಿ ಬಾಂಬೆ ಹೈಕೋರ್ಟ್ನ ಕೊಲ್ಲಾಪುರ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು barandbench.com ವರದಿ ಮಾಡಿದೆ.
ಭಾರತೀಯ ಚುನಾವಣಾ ಆಯೋಗ (ECI) ಮತ್ತು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ಕಳೆದ ಹತ್ತು ತಿಂಗಳಲ್ಲಿ ಹೊರಡಿಸಿರುವ 14 ಆಡಳಿತಾತ್ಮಕ ಆದೇಶಗಳನ್ನು ರದ್ದುಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ಈ ಆದೇಶಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ಇತ್ತೀಚೆಗೆ ವರದಿ ಮಾಡಿತ್ತು.
ಚುನಾವಣಾ ಆಯೋಗದ ವಿವಿಧ ನಿರ್ಧಾರಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ತಿಳಿಸಿತ್ತು.
CEC ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಅವರ ಮೇಲ್ವಿಚಾರಣೆಯಲ್ಲಿ SIRನ ರಾಷ್ಟ್ರವ್ಯಾಪಿ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ.
ಜ್ಞಾನೇಶ್ ಕುಮಾರ್ ಅವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದ್ದರಿಂದ, ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅವಧಿಯಲ್ಲಿ ಕೈಗೊಂಡ ಕ್ರಮಗಳಿಗೆ ಕಾನೂನು ರಕ್ಷಣೆ ನೀಡಬಾರದು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಮಹಾರಾಷ್ಟ್ರದ ಮೂವರು ನಿವಾಸಿಗಳು ಸಲ್ಲಿಸಿರುವ ಈ ಅರ್ಜಿಯಲ್ಲಿ, ECI ಮತ್ತು CEC ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.
ಮತದಾರರ ನೋಂದಣಿ, ಮತದಾರರ ಹೆಸರುಗಳನ್ನು ಕೈಬಿಡುವುದು ಮತ್ತು ಮರುಸ್ಥಾಪಿಸುವುದು, ಮತದಾರರ ಪಟ್ಟಿಯ ದತ್ತಾಂಶ, ಮತದಾರರ ನೋಂದಣಿ ಅಧಿಕಾರಿಗಳ ಕಾರ್ಯನಿರ್ವಹಣೆ ಹಾಗೂ ತಂತ್ರಾಂಶಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಣೆಗಳನ್ನು ಎತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯಿದೆ, 2023’ರ ಸೆಕ್ಷನ್ 18ಕ್ಕೆ ಅನುಗುಣವಾಗಿ ಚುನಾವಣಾ ಆಯೋಗವು ತನ್ನ ಕಾರ್ಯಗಳನ್ನು ನಿರ್ವಹಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ವರ್ಷದ ಜುಲೈನಲ್ಲಿ ‘ಫಾರ್ಮ್ 6’ಗೆ ಮಾಡಲಾದ ಕೆಲವು ಬದಲಾವಣೆಗಳನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
► ಚುನಾವಣೆ ಮುಂದೂಡಲು ಮನವಿ
14 ಆಡಳಿತಾತ್ಮಕ ಆದೇಶಗಳನ್ನು ರದ್ದುಗೊಳಿಸುವಂತೆ, ಮಹಾರಾಷ್ಟ್ರದಲ್ಲಿ SIR ಪ್ರಕ್ರಿಯೆಗೆ ತಡೆ ನೀಡುವಂತೆ ಹಾಗೂ SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳನ್ನು ಮರುಸ್ಥಾಪಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಕಾನೂನಿಗೆ ಅನುಗುಣವಾಗಿ ಹೊಸ ಮತ್ತು ಕಾನೂನುಬದ್ಧ ಮತದಾರರ ಪಟ್ಟಿಗಳಿಗೆ ಅನುಮೋದನೆ ದೊರೆಯುವವರೆಗೆ, SIR ಪ್ರಕ್ರಿಯೆ ನಡೆದಿರುವ ಎಲ್ಲ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವಂತೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದಲ್ಲದೆ, ಇತ್ತೀಚಿನ SIR ಪ್ರಕ್ರಿಯೆಯಲ್ಲಿ ದತ್ತಾಂಶ ಅಳಿಸಲಾಗಿರುವುದು ಮತ್ತು ತಂತ್ರಾಂಶದಲ್ಲಿ ಉಂಟಾದ ತೊಂದರೆಗಳ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯನ್ನು ರಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲರಾದ ಅಸಿಮ್ ಸರೋದೆ, ಶ್ರಿಯಾ ಅವಲೆ, ಸಕ್ಲೇನ್ ಮುಜಾವರ್, ಸುದರ್ಶನ್ ಕೆಲ್ಗಾನೆ, ಆರ್ಯ ರಾಜೇಭೋಸಲೆ, ತೃಪ್ತಿ ಗಾಯಕ್ವಾಡ್, ಪ್ರೇರಣಾ ಬನ್ಸೋಡೆ, ರಿಷಿಕೇಶ್ ಪಾಲ್ವಡೆ ಮತ್ತು ಸಚಿನ್ ಬನೈತ್ ಅವರು ವಾದ ಮಂಡಿಸುತ್ತಿದ್ದಾರೆ.