‘ಪಿಎಫ್‌ಐ ಪ್ರಕರಣ ಕಲ್ಪನೆಯ ಮೇಲೆ ನಿರ್ಮಿತ; ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲಾಗಿದೆ’: ಹಿರಿಯ ವಕೀಲ ಎಸ್. ಬಾಲನ್ ಆರೋಪ
Photo Credit : India Today
ಹೊಸದಿಲ್ಲಿ, ಜು. 12: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಅದರ 20 ಸದಸ್ಯರ ವಿರುದ್ಧ ದಿಲ್ಲಿಯ ವಿಶೇಷ NIA ನ್ಯಾಯಾಲಯವು ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಗಳನ್ನು ರೂಪಿಸಿದ ಬೆನ್ನಲ್ಲೇ, ಪಿಎಫ್‌ಐ ಪರ ಹಾಜರಾದ ಹಿರಿಯ ವಕೀಲ ಎಸ್. ಬಾಲನ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣವು "ಕಲ್ಪನೆಯ ಮೇಲೆ ನಿರ್ಮಿಸಲ್ಪಟ್ಟಿದ್ದು, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸೃಷ್ಟಿಸಲಾಗಿದೆ" ಎಂದು ಅವರು ಆರೋಪಿಸಿದ್ದಾರೆ.
ಪಿಎಫ್‌ಐ ಸಂಸ್ಥಾಪಕ ಅಧ್ಯಕ್ಷ ಇ. ಅಬೂಬಕರ್ ಸೇರಿದಂತೆ ಸಂಘಟನೆಯ 20 ಆರೋಪಿಗಳ ವಿರುದ್ಧ ವಿಶೇಷ NIA ನ್ಯಾಯಾಲಯವು ಶನಿವಾರ ಔಪಚಾರಿಕವಾಗಿ ಆರೋಪಗಳನ್ನು ರೂಪಿಸಿತು. ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ರಾಷ್ಟ್ರದ ವಿರುದ್ಧ ಯುದ್ಧ ಸಾರಲು ಸಂಚು ರೂಪಿಸಿದ ಆರೋಪಗಳನ್ನು ಹೊರಿಸಲಾಗಿದೆ. ಪ್ರಕರಣದ ವಿಚಾರಣೆ ಜುಲೈ 29ರಂದು ಆರಂಭವಾಗಲಿದ್ದು, ಅಂದು NIA ತನ್ನ ಸಾಕ್ಷ್ಯಗಳನ್ನು ಮಂಡಿಸುವ ನಿರೀಕ್ಷೆಯಿದೆ.
2047ರೊಳಗೆ ಭಾರತದ ಜಾತ್ಯತೀತ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸುವುದು, ಯುವಕರನ್ನು ಮೂಲಭೂತವಾದಿಗಳನ್ನಾಗಿ ರೂಪಿಸಿ ತರಬೇತಿ ನೀಡುವುದು ಹಾಗೂ ದೇಶದಲ್ಲಿ ಇಸ್ಲಾಮಿಕ್ ಖಲೀಫತ್ ಸ್ಥಾಪಿಸುವ ಉದ್ದೇಶದಿಂದ ಆರೋಪಿಗಳು ಸಂಚು ರೂಪಿಸಿದ್ದರು, ಎಂದು NIA ಆರೋಪಿಸಿದೆ.
ನ್ಯಾಯಾಲಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಎಸ್. ಬಾಲನ್, ಪ್ರಕರಣದ ಮೂಲಾಧಾರವನ್ನೇ ಪ್ರಶ್ನಿಸಿದರು. "ಎಫ್‌ಐಆರ್‌ನ ಕಾಲಂ ಸಂಖ್ಯೆ 4ರಲ್ಲಿ ಘಟನೆಯ ಸ್ಥಳವನ್ನು ಉಲ್ಲೇಖಿಸಿಲ್ಲ. ಘಟನೆಯ ದಿನಾಂಕವನ್ನೂ ಖಾಲಿ ಬಿಡಲಾಗಿದೆ. ಇದು ರಾಜ್ಯವು ತನಗೆ ತಿಳಿದಿರುವ ಕಾರಣಗಳಿಗಾಗಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರ್ಮಿಸಿರುವ ಪ್ರಕರಣ" ಎಂದು ಅವರು ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿತ ಸಂಘಟನೆಯಾಗಿದ್ದು, ಅದರ ಎಲ್ಲ ಚಟುವಟಿಕೆಗಳು ಮತ್ತು ಹಣಕಾಸಿನ ವ್ಯವಹಾರಗಳು ಬಹಿರಂಗವಾಗಿಯೇ ನಡೆದಿವೆ ಎಂದು ಅವರು ವಾದಿಸಿದರು.
"ಇದು ಜಾತ್ಯತೀತ ಸಂಘಟನೆಯಾಗಿದ್ದರೂ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಬಿಂಬಿಸಲಾಗಿದೆ. ಆರೋಪಿಗಳನ್ನು ಬಂಧಿಸಿದಾಗ ಪಿಎಫ್‌ಐ ಕಾನೂನುಬದ್ಧ ಸಂಘಟನೆಯಾಗಿತ್ತು. ಬಳಿಕ ಅದನ್ನು ನಿಷೇಧಿಸಲಾಯಿತು. ನಿಷೇಧದ ನಂತರವೂ ಅದನ್ನು ಭಯೋತ್ಪಾದಕ ಸಂಘಟನೆ ಎಂದು ಅಲ್ಲ, ಕಾನೂನುಬಾಹಿರ ಸಂಘಟನೆ ಎಂದು ಮಾತ್ರ ಘೋಷಿಸಲಾಗಿದೆ" ಎಂದು ಬಾಲನ್ ಹೇಳಿದರು.
ನಿಷೇಧಕ್ಕೂ ಮುನ್ನ ಸಂಘಟನೆ ನಡೆಸಿದ ಎಲ್ಲ ಚಟುವಟಿಕೆಗಳು ಕಾನೂನುಬದ್ಧವಾಗಿದ್ದವು. ದಿಲ್ಲಿಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದಿರುವುದಕ್ಕೆ ಸಾಕ್ಷ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಒಂದೇ ಆರೋಪಗಳ ಆಧಾರದಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕ ಆರೋಪಪಟ್ಟಿಗಳನ್ನು ಸಲ್ಲಿಸಿರುವ ಕ್ರಮವನ್ನೂ ಬಾಲನ್ ಪ್ರಶ್ನಿಸಿದರು.
"ಆರೋಪಿಗಳು ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದರೂ ಒಂದೇ ಆರೋಪಗಳ ಆಧಾರದಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಎಲ್ಲ ಪ್ರಕರಣಗಳಲ್ಲೂ ಒಂದೇ ದಾಖಲೆಗಳನ್ನು ಬಳಸಲಾಗಿದೆ. ಚೆನ್ನೈನಲ್ಲಿ ಸಲ್ಲಿಸಿದ ದಾಖಲೆಗಳೇ ಪಾಟ್ನಾದಲ್ಲೂ, ದಿಲ್ಲಿಯಲ್ಲೂ ಸಲ್ಲಿಕೆಯಾಗಿವೆ. ಇದನ್ನೇ 'ಏಕರೂಪತೆಯ ಸಿದ್ಧಾಂತ' ಎಂದು ಕರೆಯುತ್ತೇವೆ. ಒಂದೇ ಕೃತ್ಯಕ್ಕೆ ಆರು ಆರೋಪಪಟ್ಟಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಆದರೆ ಈ ಪ್ರಕರಣದಲ್ಲಿ ಯಾವುದೇ ನಿರ್ದಿಷ್ಟ ಘಟನೆ ನಡೆದಿರುವ ಆರೋಪವಿಲ್ಲದಿದ್ದರೂ ಆರು ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ" ಎಂದು ಅವರು ಹೇಳಿದರು.
ಪ್ರಾಸಿಕ್ಯೂಷನ್‌ನ ವಾದಗಳು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಪ್ರತಿಪಾದಿಸಿದ ಬಾಲನ್, "ಇದೆಲ್ಲವೂ ಕಾಲ್ಪನಿಕ. ಇದು ಕಲ್ಪನೆಯ ಮೇಲೆ ನಿರ್ಮಿಸಲಾದ ಪ್ರಕರಣ" ಎಂದು ಆರೋಪಿಸಿದರು.