Screengrab: X.com/INCIndia

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. ತಮ್ಮ ಫೋನ್‌ ನಲ್ಲೇ ಇದಕ್ಕೆ ಸಂಬಂಧಿಸಿದ ಸಾಕ್ಷ್ಯವಿದೆ ಎಂದು ಹೇಳಿದ ಅವರು, ಹಲವು ಪ್ರಮುಖ ವಿಷಯಗಳ ಕುರಿತು ಪ್ರಧಾನಿಯವರೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ 'ಆಸ್ಕ್ ಮಿ' ಸಂವಾದದಲ್ಲಿ ಬೆಂಬಲಿಗರ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್ ಗಾಂಧಿ, ತಮ್ಮ ಮೊಬೈಲ್ ಫೋನ್ ತೋರಿಸಿ, "ಇದಕ್ಕೆ ಬೇಕಾದ ಸಾಕ್ಷ್ಯ ಇಲ್ಲಿದೆ, ಈ ಫೋನ್‌ನಲ್ಲಿದೆ. ಪ್ರಧಾನಿಯವರೇ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿರುವುದರಿಂದ ಅವರಿಗೆ ಈ ವಿಷಯ ಚೆನ್ನಾಗಿ ಗೊತ್ತು" ಎಂದು ಹೇಳಿದರು.

ಪೆಗಾಸಸ್ ಬಗ್ಗೆಯೂ ಈ ಹಿಂದೆ ಆರೋಪ

ರಾಹುಲ್ ಗಾಂಧಿ ಈ ಹಿಂದೆಯೂ ತಮ್ಮ ಹಾಗೂ ಹಲವು ರಾಜಕಾರಣಿಗಳ ಮೊಬೈಲ್ ಫೋನ್‌ಗಳಲ್ಲಿ 'ಪೆಗಾಸಸ್' (Pegasus) ಬೇಹುಗಾರಿಕೆ ತಂತ್ರಾಂಶ ಅಳವಡಿಸಲಾಗಿದೆ ಎಂದು ಆರೋಪಿಸಿದ್ದರು. ಇದರ ಮೂಲಕ ಕೇಂದ್ರ ತನಿಖಾ ಸಂಸ್ಥೆಗಳು ಫೋನ್ ಸಂಭಾಷಣೆಗಳ ಮೇಲೆ ನಿಗಾ ಇರಿಸುತ್ತಿವೆ ಎಂದು ಅವರು ಹೇಳಿದ್ದರು.

"ನನ್ನ ಫೋನ್‌ನಲ್ಲೇ ಪೆಗಾಸಸ್ ಇತ್ತು. ಅನೇಕ ರಾಜಕಾರಣಿಗಳ ಫೋನ್‌ ಗಳಲ್ಲಿ ಪೆಗಾಸಸ್ ಇದೆ. ಗುಪ್ತಚರ ಇಲಾಖೆಯ ಅಧಿಕಾರಿಗಳು ನನಗೆ ಕರೆ ಮಾಡಿ, 'ದಯವಿಟ್ಟು ಫೋನ್‌ನಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದಿರಿ, ಏಕೆಂದರೆ ನಾವು ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡುತ್ತಿದ್ದೇವೆ' ಎಂದು ಹೇಳಿದ್ದರು" ಎಂದು 2023ರಲ್ಲಿ ಆರೋಪಿಸಿದ್ದರು.

ಈ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

12 ದಿನಗಳಲ್ಲಿ ಏಳನೇ ಬಾರಿ ಚರ್ಚೆಗೆ ಸವಾಲು

ಪ್ರಧಾನಿಯವರೊಂದಿಗೆ ಮುಖಾಮುಖಿ ಚರ್ಚೆ ನಡೆದರೆ 'ಯಾರು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿದ್ದಾರೆ' ಮತ್ತು 'ಯಾರು ದೇಶವಿರೋಧಿ' ಎಂಬ ಪ್ರಶ್ನೆಗಳಿಗೆ ಶಾಶ್ವತವಾಗಿ ಉತ್ತರ ಸಿಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಳೆದ 12 ದಿನಗಳಲ್ಲಿ ಪ್ರಧಾನಿ ಮೋದಿಯವರಿಗೆ ಅವರು ಚರ್ಚೆಗೆ ಸವಾಲು ಹಾಕುತ್ತಿರುವುದು ಇದು ಏಳನೇ ಬಾರಿಯಾಗಿದೆ. ಚುನಾವಣಾ ಪ್ರಕ್ರಿಯೆ, ವಿದೇಶಿ ಪ್ರಭಾವ ಮತ್ತು ರಾಷ್ಟ್ರೀಯ ಭದ್ರತೆಯಂತಹ ವಿಷಯಗಳ ಕುರಿತು ಮುಕ್ತ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ನಾಯಕ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor