POCSO ಪ್ರಕರಣ| ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಪುತ್ರನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಹೈಕೋರ್ಟ್
ತಡರಾತ್ರಿವರೆಗೂ ಪ್ರಕರಣದ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್
Photo| livelaw
ಹೈದರಾಬಾದ್: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಸಾಯಿ ಬಗೀರತ್ ಗೆ ನಿರೀಕ್ಷಣಾ ಜಾಮೀನು ನೀಡಲು ತೆಲಂಗಾಣ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಟಿ. ಮಾಧವಿ ದೇವಿ ಅವರನ್ನೊಳಗೊಂಡ ರಜಾ ಪೀಠವು ತಡರಾತ್ರಿ ತನಕ ನಡೆದ ಸುದೀರ್ಘ ವಿಚಾರಣೆ ಬಳಿಕ ಬಗೀರತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತು. ಆದರೆ, ಅಂತಿಮ ತೀರ್ಪು ಪ್ರಕಟವಾಗುವವರೆಗೆ ಬಂಧಿಸದಂತೆ ಆದೇಶ ನೀಡುವಂತೆ ಆರೋಪಿ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು.
“ಈ ಹಂತದಲ್ಲಿ ಯಾವುದೇ ತಾತ್ಕಾಲಿಕ ಆದೇಶ ನೀಡಬಾರದು ಎಂದು ನಾನು ಭಾವಿಸುತ್ತೇನೆ. ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲಿಸಿದ್ದೇನೆ. ಅದನ್ನು ಗಮನಿಸಿದ ಬಳಿಕ ತಾತ್ಕಾಲಿಕ ಪರಿಹಾರ ನೀಡಲು ಒಲವು ತೋರುವುದಿಲ್ಲ” ಎಂದು ನ್ಯಾಯಮೂರ್ತಿ ಹೇಳಿದರು.
ರಾತ್ರಿ 9 ಗಂಟೆ ಸುಮಾರಿಗೆ ವಿಚಾರಣೆ ಆರಂಭವಾಗಿ ಸುಮಾರು 11.30ರ ವೇಳೆಗೆ ಮುಕ್ತಾಯವಾಯಿತು. ಆರಂಭದಲ್ಲಿ ಅದೇ ದಿನ ಆದೇಶ ನೀಡಲು ಉದ್ದೇಶಿಸಿದ್ದಾಗಿ ತಿಳಿಸಿದ ನ್ಯಾಯಮೂರ್ತಿ, ವಕೀಲರು ಮಂಡಿಸಿದ ವಿವರವಾದ ವಾದಗಳನ್ನು ಪರಿಗಣಿಸಲು ಹೆಚ್ಚಿನ ಸಮಯ ಅಗತ್ಯವಿದೆ ಎಂದು ಹೇಳಿದರು.
ಬಗೀರತ್ ವಿರುದ್ಧ ಮೇ 8ರಂದು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಬಳಿಕ ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿದ ನಂತರ ಪೊಕ್ಸೊ ಕಾಯ್ದೆಯ ಸೆಕ್ಷನ್ 5ರಡಿ ‘ತೀವ್ರ ಲೈಂಗಿಕ ದೌರ್ಜನ್ಯ’ ಆರೋಪವನ್ನೂ ಸೇರಿಸಲಾಗಿದೆ.
ಬಗೀರತ್ ಮತ್ತು ಸಂತ್ರಸ್ತೆಯ ನಡುವೆ 2025ರ ಜೂನ್‌ನಿಂದ ಪರಿಚಯವಿತ್ತು ಎಂದು ತಿಳಿಸಲಾಗಿದೆ. ಅಕ್ಟೋಬರ್ ಮತ್ತು ಡಿಸೆಂಬರ್ 2025ರ ನಡುವೆ ಕನಿಷ್ಠ ನಾಲ್ಕು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಆರೋಪಿ ಪರ ಹಿರಿಯ ವಕೀಲ ಎಸ್. ನಿರಂಜನ್ ರೆಡ್ಡಿ ಆರೋಪಗಳನ್ನು ತಳ್ಳಿ ಹಾಕಿದರು. ಐದು ವರ್ಷಗಳ ಹಿಂದೆ ದಾಖಲಾಗಿದ್ದ ಅಪ್ರಾಪ್ತ ವಯಸ್ಕ ವಾಹನ ಚಾಲನೆ ಪ್ರಕರಣದ ಆರೋಪಪಟ್ಟಿಯಲ್ಲಿ ಸಂತ್ರಸ್ತೆಯ ವಯಸ್ಸು 15 ವರ್ಷ ಎಂದು ಉಲ್ಲೇಖಿಸಿರುವುದರಿಂದ ಆಕೆಯ ವಯಸ್ಸಿನ ವಿಚಾರವೇ ವಿವಾದಾಸ್ಪದವಾಗಿದೆ ಎಂದು ಅವರು ವಾದಿಸಿದರು. ಹೀಗಾಗಿ ಪೋಕ್ಸೊ ಪ್ರಕರಣ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದರು.
ವಿಚಾರಣೆ ವೇಳೆ, ಬಗೀರತ್ ಮತ್ತು ಯುವತಿ ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿದ್ದರು ಎಂದು ರೆಡ್ಡಿ ಪುನರುಚ್ಚರಿಸಿದರು. ಆರಂಭಿಕ ದೂರಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿರಲಿಲ್ಲ; ನಂತರ ಸೇರಿಸಲಾಗಿದೆ ಎಂದು ಅವರು ವಾದಿಸಿದರು.
“ಮೇ 8ರಂದು ನೀಡಿದ ದೂರಿನಲ್ಲಿ ಅಂತಹ ಆರೋಪಗಳಿಲ್ಲ. ಎಫ್‌ಐಆರ್ ದಾಖಲಾದ ನಂತರ ಹೆಚ್ಚುವರಿ ಹೇಳಿಕೆ ನೀಡಲಾಗಿದೆ. ನನ್ನ ಕಕ್ಷಿದಾರರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಸ್ವಯಂಪ್ರೇರಿತ ಹೇಳಿಕೆಯೇ?” ಎಂದು ಪ್ರಶ್ನಿಸಿತು.
“ಘಟನೆಯ ಗಂಭೀರತೆಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. ಇದು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗಬಹುದು” ಎಂದು ರೆಡ್ಡಿ ಉತ್ತರಿಸಿದರು.
ಪಬ್ಲಿಕ್ ಪ್ರಾಸಿಕ್ಯೂಟರ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದರು. ಸಂತ್ರಸ್ತೆ ಪ್ರಸ್ತುತ 17 ವರ್ಷದ ಅಪ್ರಾಪ್ತ ವಯಸ್ಕಳಾಗಿರುವುದರಿಂದ ಆರೋಪಿ ಜಾಮೀನಿಗೆ ಅರ್ಹನಲ್ಲ ಎಂದು ಅವರು ವಾದಿಸಿದರು.
ಸಂತ್ರಸ್ತೆಯ ತಾಯಿ ಪರ ವಕೀಲರು, ಮದುವೆಯಾಗುವ ಭರವಸೆಯಿಂದ ಸಂಬಂಧ ಬೆಳೆಸಿದ ಬಳಿಕ ಬಗೀರತ್ ಹಿಂದೆ ಸರಿದಿದ್ದಾನೆ ಎಂದು ಆರೋಪಿಸಿದರು. ಒಂದು ಸಂದರ್ಭದಲ್ಲಿ ಯುವತಿಯನ್ನು ಮದ್ಯಪಾನ ಮಾಡಿಸಿ, ಆಕೆಯ ಮೇಲೆ ದೈಹಿಕ ದೌರ್ಜನ್ಯ ಎಸಗಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
“ಅವಳು ಎದ್ದಾಗ ಸಂಪೂರ್ಣ ಬೆತ್ತಲೆಯಾಗಿದ್ದಳು. ವಿರೋಧಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ದೌರ್ಜನ್ಯ ನಡೆದಿದೆ. ಇಂತಹ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ವಕೀಲರು ವಾದಿಸಿದರು.
ಆರೋಪಿ ಕುಟುಂಬವು ಪ್ರಕರಣ ಹಿಂಪಡೆಯುವಂತೆ ಒತ್ತಡ ಹೇರಲು ಯತ್ನಿಸಿದೆ ಹಾಗೂ ಬಗೀರತ್‌ಗೆ ರಕ್ಷಣೆ ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯೂ ಇದೆ ಎಂದು ದೂರಿದರು. ಬಗೀರತ್ ಅವರ ತಂದೆ ಪ್ರಭಾವಿ ರಾಜಕೀಯ ವ್ಯಕ್ತಿಯಾಗಿರುವುದರಿಂದ ಸಂತ್ರಸ್ತೆ ಕುಟುಂಬ ಭಯಭೀತವಾಗಿದೆ ಎಂದೂ ಹೇಳಿದರು.
ಆದರೆ, “ನ್ಯಾಯಾಲಯ ಸಮಾಜ ಏನು ಯೋಚಿಸುತ್ತದೆ ಎಂಬುದನ್ನು ನೋಡಬಾರದು; ಕಾನೂನನ್ನು ಮಾತ್ರ ಗಮನಿಸುತ್ತದೆ” ಎಂದು ನ್ಯಾಯಮೂರ್ತಿ ಪ್ರತಿಕ್ರಿಯಿಸಿದರು.
ವಿಚಾರಣೆ ವೇಳೆ ಇಬ್ಬರ ನಡುವಿನ ವೈಯಕ್ತಿಕ ಸಂದೇಶಗಳು ಮತ್ತು ಸಂಬಂಧದ ಸ್ವರೂಪದ ಕುರಿತೂ ಚರ್ಚೆ ನಡೆಯಿತು. ಕೆಲ ಸಂದೇಶಗಳನ್ನು ಉಲ್ಲೇಖಿಸಿದ ವೇಳೆ, “ಇವು ಸಿನಿಮಾ ಸಂಭಾಷಣೆಗಳಂತಿವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಬಗೀರತ್ ವಿರುದ್ಧ ಇನ್ನೂ ಎರಡು ಎಫ್‌ಐಆರ್‌ಗಳಿವೆ ಎಂದು ದೂರುದಾರರ ಪರ ವಕೀಲರು ಹೇಳಿದಾಗ, “ಅವು ಈ ಪ್ರಕರಣಕ್ಕೆ ಸಂಬಂಧಪಟ್ಟಿಲ್ಲ” ಎಂದು ನ್ಯಾಯಾಲಯ ಹೇಳಿತು. ಆ ಪ್ರಕರಣಗಳು ಈಗಾಗಲೇ ರದ್ದಾಗಿವೆ ಎಂದು ರೆಡ್ಡಿ ತಿಳಿಸಿದರು.
ಪ್ರಕರಣದ ವಿಚಾರಣೆ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ವೈಯಕ್ತಿಕ ದಾಳಿ ಮತ್ತು ‘ಮಸಿ ಬಳಿಯುವ ಅಭಿಯಾನ’ ಕುರಿತು ನ್ಯಾಯಾಲಯ ಗಂಭೀರ ಅಸಮಾಧಾನ ವ್ಯಕ್ತಪಡಿಸಿತು.
“ಸಾಮಾಜಿಕ ಮಾಧ್ಯಮದಲ್ಲಿ ನನ್ನ ವಿರುದ್ಧವೂ ಆರೋಪಗಳು ಹರಿದಾಡುತ್ತಿವೆ. ಇದು ನೋವುಂಟುಮಾಡುವ ಸಂಗತಿ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಮೂರ್ತಿ ಮಾಧವಿ ದೇವಿ ಹೇಳಿದರು.