Photo: PTI

ಕೊಚ್ಚಿ: ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸಿ, ಆರೋಪಿಗಳನ್ನು ಜೈಲಿಗೆ ಕಳುಹಿಸುವುದಾಗಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.

"ಇನ್ನೂ ಆರು ತಿಂಗಳಲ್ಲಿ ಈ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತೇನೆ. ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತೇನೆ. ನಾವು ಈ ಪ್ರಕರಣಗಳನ್ನು ಗಂಭೀರವಾಗಿ ಹಿಂಬಾಲಿಸುತ್ತಿದ್ದೇವೆ. ಇದನ್ನು ಖಂಡಿತವಾಗಿಯೂ ಮಾಡುತ್ತೇವೆ. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದವರ ಸಿದ್ಧಾಂತವನ್ನೇ ಹೊಂದಿರುವವರೇ ಈ ಹತ್ಯೆಗಳ ಹಿಂದಿದ್ದಾರೆ" ಎಂದು ಅವರು ಹೇಳಿದ್ದಾರೆ.

ರವಿವಾರ ಕೊಚ್ಚಿಯ ಮರೈನ್ ಡ್ರೈವ್ನಲ್ಲಿ ಮುಸ್ಲಿಂ ಯೂತ್ ಲೀಗ್ (MYL) ಕೇರಳ ರಾಜ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಖರ್ಗೆ ಮಾತನಾಡಿದರು. MYL ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಜ್ ಅವರು ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಮತ್ತು ನರೇಂದ್ರ ದಾಭೋಳ್ಕರ್ ಅವರ ಹತ್ಯೆಗಳನ್ನು ಪ್ರಸ್ತಾಪಿಸಿದಾಗ ಖರ್ಗೆ ಈ ಭರವಸೆ ನೀಡಿದರು.

ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿರುವವರೇ ಈ ಹತ್ಯೆಗಳ ಹಿಂದೆ ಇದ್ದಾರೆ ಎಂದು ಆರೋಪಿಸಿದ ಅವರು, ಪ್ರಗತಿಪರ ಧ್ವನಿ ಎತ್ತುವ ಮತ್ತು ತಮ್ಮ ಸಿದ್ಧಾಂತವನ್ನು ಪ್ರಶ್ನಿಸುವವರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸಲಾಗಿದೆ ಎಂದು ಹೇಳಿದರು.

►ವರ್ಷಗಳಾದರೂ ಮುಗಿಯದ ಹತ್ಯೆ ಪ್ರಕರಣಗಳು

2013ರ ಆಗಸ್ಟ್ ನಲ್ಲಿ ಪುಣೆಯಲ್ಲಿ ವಿಚಾರವಾದಿ ನರೇಂದ್ರ ದಾಭೋಳ್ಕರ್ ಅವರನ್ನು ಹತ್ಯೆ ಮಾಡಲಾಗಿತ್ತು. 2015ರ ಫೆಬ್ರವರಿಯಲ್ಲಿ ಕೊಲ್ಲಾಪುರದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ನಾಯಕ ಗೋವಿಂದ ಪಾನ್ಸರೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಅದೇ ವರ್ಷದ ಆಗಸ್ಟ್ ನಲ್ಲಿ ಧಾರವಾಡದ ತಮ್ಮ ನಿವಾಸದಲ್ಲಿ ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. 2017ರ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನ ತಮ್ಮ ನಿವಾಸದ ಹೊರಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಈ ಪ್ರಕರಣಗಳ ವಿಚಾರಣೆ ಹಲವು ವರ್ಷಗಳಿಂದ ಮುಂದುವರಿದಿದೆ. ಸಾಕ್ಷಿಗಳ ವಿಚಾರಣೆ ಮತ್ತು ಪದೇಪದೇ ಸಲ್ಲಿಕೆಯಾಗುತ್ತಿರುವ ಕಾನೂನು ಅರ್ಜಿಗಳಿಂದಾಗಿ ನ್ಯಾಯಾಂಗ ಪ್ರಕ್ರಿಯೆ ವಿಳಂಬವಾಗಿದೆ. ಪ್ರಕರಣಗಳ ಆರೋಪಿಗಳ ಪೈಕಿ ಹಲವರು ಜಾಮೀನು ಪಡೆದು ಹೊರಗಿದ್ದಾರೆ.

►ಸಂವಿಧಾನ ದುರ್ಬಲಗೊಳಿಸುವ ಯತ್ನ: RSS, ಬಿಜೆಪಿ ವಿರುದ್ಧ ವಾಗ್ದಾಳಿ

ತಮ್ಮ ಭಾಷಣದಲ್ಲಿ RSS ಮತ್ತು ಬಿಜೆಪಿ (BJP) ವಿರುದ್ಧವೂ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವವನ್ನು ದುರ್ಬಲಗೊಳಿಸಲು ಈ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿದ ಅವರು, ಆದಿವಾಸಿಗಳು, ದಲಿತರು, ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಯುವಜನರು ಸೇರಿದಂತೆ ಎಲ್ಲ ಸಮುದಾಯಗಳೂ ಭಾರತದ ಅಸ್ತಿತ್ವದ ಭಾಗವಾಗಿದ್ದಾರೆ ಎಂದು ಹೇಳಿದರು.

"ಸಂವಿಧಾನವು ಒಂದು ಸಮುದಾಯಕ್ಕೆ ಅಥವಾ ಒಬ್ಬ ವ್ಯಕ್ತಿಗೆ ಮಾತ್ರ ನೀಡಿರುವ ಭರವಸೆಯಲ್ಲ. ಭಾರತದ ಪ್ರತಿಯೊಬ್ಬ ಮಗ ಮತ್ತು ಮಗಳಿಗೂ ನೀಡಿರುವ ಭರವಸೆಯಾಗಿದೆ" ಎಂದು ಹೇಳಿದರು.

►RSS ಹಣಕಾಸಿನ ಮೂಲದ ಬಗ್ಗೆ ಪ್ರಶ್ನೆ

RSS ನ ಅಧಿಕೃತ ನೋಂದಣಿ ಮತ್ತು ಆರ್ಥಿಕ ಪಾರದರ್ಶಕತೆಯ ಬಗ್ಗೆ ಪ್ರಶ್ನಿಸಿದ ಖರ್ಗೆ, ಸಂಘಟನೆ ಹಣವನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ತನ್ನ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸುತ್ತದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದರು. ದೇಶದ ಕಾನೂನುಗಳನ್ನು RSS ಪಾಲಿಸುವಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ RSS ನ ಪಾತ್ರವನ್ನೂ ಟೀಕಿಸಿದ ಅವರು, ರಾಷ್ಟ್ರಧ್ವಜದ ಕುರಿತು ಸಂಘಟನೆಯ ಐತಿಹಾಸಿಕ ನಿಲುವನ್ನು ಪ್ರಶ್ನಿಸಿದರು. ವಿ.ಡಿ. ಸಾವರ್ಕರ್ ಅವರು ಬ್ರಿಟಿಷರಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಳ ಬಗ್ಗೆಯೂ ಪ್ರಸ್ತಾಪಿಸಿದರು.

►ಚಿತ್ತಾಪುರದ ಪಥಸಂಚಲನ ವಿವಾದ ಪ್ರಸ್ತಾಪ

ತಮ್ಮ ಚಿತ್ತಾಪುರ ಕ್ಷೇತ್ರದಲ್ಲಿ RSS ನಡೆಸುವ ರೂಟ್ ಮಾರ್ಚ್ (ಪಥಸಂಚಲನ) ಕುರಿತ ವಿವಾದವನ್ನೂ ಖರ್ಗೆ ಪ್ರಸ್ತಾಪಿಸಿದರು.

ಪಥಸಂಚಲನ ನಡೆಸುವ ಮೊದಲು ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಸಾಕು ಎಂಬ ನಿಲುವನ್ನು RSS ಹೊಂದಿತ್ತು. ಆದರೆ, ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರಿಂದ ಅನುಮತಿ ಪಡೆಯಲೇಬೇಕು ಎಂದು ತಾವು ಪಟ್ಟುಹಿಡಿದಿದ್ದಾಗಿ ಹೇಳಿದರು.

ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಪಥಸಂಚಲನಕ್ಕೆ ಅನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ನ್ಯಾಯಾಲಯ ಎತ್ತಿಹಿಡಿದಿದೆ ಎಂದು ಖರ್ಗೆ ತಿಳಿಸಿದರು.

ಭಾಷಣದ ಕೊನೆಯಲ್ಲಿ ಕೇರಳವನ್ನು ಪ್ರಗತಿಪರ ರಾಜ್ಯ ಎಂದು ಹೇಳಿದ ಅವರು, ವಿಭಜಕ ರಾಜಕೀಯವನ್ನು ವಿರೋಧಿಸಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಂತೆ ಜನರಿಗೆ ಕರೆ ನೀಡಿದರು.

"ಭಾರತದ ಸಂವಿಧಾನವನ್ನು ಪಾಲಿಸಿ, ಅರ್ಥಮಾಡಿಕೊಳ್ಳಿ. ಯಾವುದೇ ಧರ್ಮಗ್ರಂಥವೂ ನನ್ನ ಧರ್ಮವೇ ಶ್ರೇಷ್ಠ ಎಂದು ಹೇಳುವುದಿಲ್ಲ. ಪ್ರತಿಯೊಂದು ಧರ್ಮವೂ ಎಲ್ಲರೂ ಸಮಾನರು ಎಂಬ ಸಂದೇಶವನ್ನೇ ಸಾರುತ್ತದೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor