×
Ad

Pune | ಚೇತನ್ ಹಣ ನೀಡಲಿಲ್ಲ; ಕೇತನ್ ಹಿಂತಿರುಗಲಿಲ್ಲ: ಲೋಹಗಡ್ ಕೋಟೆಯ ಸಿಬ್ಬಂದಿ ಬಿಚ್ಚಿಟ್ಟ ಕೊಲೆ ರಹಸ್ಯ!

33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ ಹೂಡಿ ಧರಿಸಿದ್ದ ಆರೋಪಿ

Update: 2026-06-25 15:13 IST

ಮೃತ ಕೇತನ್‌ ಅಗರ್ವಾಲ್‌ | ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ (Photo source: X)

ಪುಣೆ: ಜೂನ್ 18ರಂದು ಲೋಹಗಡ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಟಿಕೆಟ್ ಕೌಂಟರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಧೀರಜ್ ಜಾಧವ್, ಪ್ರಕರಣದ ಮೂವರು ಪ್ರಮುಖ ಪಾತ್ರಧಾರಿಗಳನ್ನು ಕೊನೆಯ ಬಾರಿ ನೋಡಿದವರಲ್ಲಿ ಒಬ್ಬರಾಗಿದ್ದಾರೆ. ಅವರು ನೀಡಿರುವ ಮಾಹಿತಿ, ಹತ್ಯೆಯ ಹಿಂದಿನ ಸಂಚಿನ ಕುರಿತು ತನಿಖೆಗೆ ಮಹತ್ವದ ಸುಳಿವು ನೀಡಿದೆ ಎಂದು times of india ವರದಿ ಮಾಡಿದೆ.

ಜಾಧವ್ ಅವರ ಹೇಳಿಕೆಯ ಪ್ರಕಾರ, ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ಮೊದಲು ಒಟ್ಟಿಗೆ ಕೋಟೆಗೆ ಬಂದಿದ್ದರು. ಪ್ರವೇಶ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಲು ಅವರು ಪ್ರಯತ್ನಿಸಿದಾಗ, ಕೋಟೆಯ ಮೇಲ್ಭಾಗದಲ್ಲಿ ಮಾತ್ರ ಮೊಬೈಲ್ ನೆಟ್ವರ್ಕ್ ಲಭ್ಯವಿರುವುದಾಗಿ ಸಿಬ್ಬಂದಿ ತಿಳಿಸಿದ್ದರು. ಕ್ಯೂಆರ್ ಕೋಡ್ನ ಚಿತ್ರವನ್ನು ತೆಗೆದುಕೊಂಡು ಮೇಲ್ಭಾಗದಲ್ಲಿ ಪ್ರವೇಶ ಶುಲ್ಕ ಪಾವತಿಸಿ, ಹಿಂದಿರುಗುವಾಗ ಅದರ ಪುರಾವೆ ತೋರಿಸುವಂತೆ ಸೂಚಿಸಲಾಗಿತ್ತು.

ಕೆಲವೇ ನಿಮಿಷಗಳ ಬಳಿಕ ಮತ್ತೊಬ್ಬ ವ್ಯಕ್ತಿ ಒಬ್ಬನೇ ಟಿಕೆಟ್ ಕೌಂಟರ್ ಗೆ ಬಂದಿದ್ದ. ಬಳಿಕ ಆತನೇ ಸಿಯಾ ಗೋಯಲ್ ಅವರ ಪ್ರೇಮಿ ಹಾಗೂ ಪ್ರಕರಣದ ಸಹಸಂಚುಕೋರ ಎಂದು ಪೊಲೀಸರು ಆರೋಪಿಸಿರುವ ಚೇತನ್ ಚೌಧರಿ ಎಂಬುದು ತಿಳಿದುಬಂದಿದೆ.

ಹೆಡ್ಫೋನ್ ಧರಿಸಿ, ಹೂಡಿಯನ್ನು ಮುಖದವರೆಗೆ ಎಳೆದುಕೊಂಡಿದ್ದ ಚೇತನ್ ಟಿಕೆಟ್ ಕೌಂಟರ್ ನ ಹಿಂಭಾಗದ ಮೂಲಕ ಮುಂದೆ ಸಾಗಲು ಯತ್ನಿಸಿದ್ದ. ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ, ತಾನು ವ್ಯಾಯಾಮಕ್ಕಾಗಿ ಮೇಲಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಹಿಂದಿರುಗುವಾಗ ಪ್ರವೇಶ ಶುಲ್ಕ ಪಾವತಿಸುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದಾನೆ ಎಂದು ANI ವರದಿ ಮಾಡಿದೆ.

ಆದರೆ, ಚೇತನ್ ಪ್ರವೇಶ ಶುಲ್ಕವನ್ನು ಎಂದಿಗೂ ಪಾವತಿಸಲಿಲ್ಲ. ಕೇತನ್ ಅಗರ್ವಾಲ್ ಕೂಡ ಜೀವಂತವಾಗಿ ಕೋಟೆಯಿಂದ ಹಿಂದಿರುಗಲಿಲ್ಲ.

ಜಾಧವ್ ಅವರ ಹೇಳಿಕೆಯು ಈಗಾಗಲೇ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳಿಗೆ ಮತ್ತಷ್ಟು ಪೂರಕವಾಗಿದೆ. ಕೋಟೆಗೆ ಚೇತನ್ ಆಗಮಿಸಿದ್ದು ಆಕಸ್ಮಿಕವಲ್ಲ; ಅದು ಪೂರ್ವನಿಯೋಜಿತ, ಸಂಘಟಿತ ಹಾಗೂ ಎಚ್ಚರಿಕೆಯಿಂದ ರೂಪಿಸಲಾದ ಯೋಜನೆಯ ಭಾಗವಾಗಿತ್ತು ಎಂಬ ಅನುಮಾನವನ್ನು ಇದು ಬಲಪಡಿಸಿದೆ. ಪೊಲೀಸರು ತಿಳಿಸಿರುವಂತೆ, ಸಿಯಾ ಮತ್ತು ಕೇತನ್ ಬರುವ ಮೊದಲುವೇ ಚೇತನ್ ಕೋಟೆಗೆ ತಲುಪಿ, ಅವರಿಗಾಗಿ ಕಾಯುತ್ತಿದ್ದ ಹಾಗೂ ಬಳಿಕ ಅವರನ್ನು ಹಿಂಬಾಲಿಸಿದ್ದ.

ಸುಮಾರು 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ ಚೇತನ್ ಹೂಡಿ ಧರಿಸಿದ್ದ. ಮುಖವನ್ನು ಮರೆಮಾಚುವಂತೆ ಅದನ್ನು ಕೆಳಕ್ಕೆ ಎಳೆದುಕೊಂಡಿದ್ದ. ಟಿಕೆಟ್ ಕೌಂಟರ್ ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸಿಯಾ ಹಿಂದಿರುಗಿ ನೋಡುವುದು ಹಾಗೂ ಅದೇ ಕ್ಷಣದಲ್ಲಿ ಚೇತನ್ ಹಠಾತ್ತನೆ ಕುಳಿತುಕೊಳ್ಳುವುದು ದಾಖಲಾಗಿದೆ. ಈ ಚಲನವಲನದಿಂದ ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದು, ಒಬ್ಬರ ಚಲನವಲನವನ್ನು ಮತ್ತೊಬ್ಬರು ಗಮನಿಸುತ್ತಿದ್ದರು ಎಂಬ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಕೋಟೆಯ ಏಕಾಂತ ಬಂಡೆಯ ಅಂಚಿನಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಸೇರಿ ಕೇತನ್ ಅಗರ್ವಾಲ್ ಅವರನ್ನು ಸುಮಾರು 400 ಅಡಿ ಆಳದ ಕಮರಿಗೆ ತಳ್ಳಿದ್ದಾರೆ ಎನ್ನಲಾಗಿದೆ.

ಘಟನೆಯ ಬಳಿಕ ಸಿಯಾ, ಫೊಟೋಗೆ ಪೋಸ್ ನೀಡುವ ವೇಳೆ ಕೇತನ್ ಕಾಲು ಜಾರಿ ಬಿದ್ದಿದ್ದಾರೆ ಎಂದು ಅವರ ಕುಟುಂಬಕ್ಕೆ ತಿಳಿಸಿದ್ದರು. ಮರುದಿನ ಕೇತನ್ ಅವರ ಜನ್ಮದಿನದಂದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಶ್ರದ್ಧಾಂಜಲಿಯನ್ನೂ ಪ್ರಕಟಿಸಿದ್ದರು.

ಆದರೆ, ಕೇತನ್ ಅವರ ಕುಟುಂಬ ಈ ವಿವರಣೆಯನ್ನು ಒಪ್ಪಿರಲಿಲ್ಲ. ಅನುಭವಿ ಚಾರಣಿಗರಾಗಿದ್ದ ಕೇತನ್ ಸುಮ್ಮನೆ ಕಾಲು ಜಾರಿ ಬೀಳುವವರಲ್ಲ ಎಂದು ಕುಟುಂಬ ವಾದಿಸಿತ್ತು. ಕುಟುಂಬದ ಔಪಚಾರಿಕ ದೂರಿನ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು.

ಸದ್ಯ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರೂ ಜೂನ್ 29ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News