E20 ಇಂಧನ ನೀತಿ ವಿರುದ್ಧ ಪಂಜಾಬ್ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕಾರ

Update: 2026-08-04 19:30 IST

 ಹರ್‌ಪಾಲ್ ಸಿಂಗ್ ಚೀಮಾ| Photo Credit : PTI   

ಚಂಡಿಗಢ, ಆ. 5: ಪಂಜಾಬ್ ವಿಧಾನ ಸಭೆ ಮುಂಗಾರು ಅಧಿವೇಶನದ ಎರಡನೇ ದಿನವಾದ ಮಂಗಳವಾರ ಕೇಂದ್ರ ಸರಕಾರದ ಇ20 ಎಥೆನಾಲ್ ಮಿಶ್ರಿತ ಇಂಧನ ನೀತಿಯ ವಿರುದ್ಧ ನಿರ್ಣಯ ಅಂಗೀಕರಿಸಿದೆ.

ಈ ನೀತಿಯಿಂದ ಹಳೆಯ ವಾಹನಗಳಿಗೆ ಆಗುವ ಹಾನಿಯ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.

ಇ20 ಪೆಟ್ರೋಲ್‌ಗಾಗಿ ವಿನ್ಯಾಸಗೊಳಿಸದ ಅಥವಾ ಪ್ರಮಾಣೀಕರಿಸದ ವಾಹನಗಳಿಗೆ ಇ20 ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಿ ದೇಶಾದ್ಯಂತ ಜಾರಿಗೊಳಿಸುವುದನ್ನು ಸ್ಥಗಿತಗೊಳಿಸುವಂತೆ ಆಮ್ ಆದ್ಮಿ ಪಕ್ಷ (ಎಎಪಿ) ಸರಕಾರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಇ20 ಪೆಟ್ರೋಲ್ ಲಕ್ಷಾಂತರ ವಾಹನ ಮಾಲಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸರಕಾರ ತಿಳಿಸಿದೆ.

ರಾಜ್ಯ ಹಣಕಾಸು ಸಚಿವ ಹರ್‌ಪಾಲ್ ಸಿಂಗ್ ಚೀಮಾ ಅವರು ಸದನದಲ್ಲಿ ಈ ನಿರ್ಣಯವನ್ನು ಮಂಡಿಸಿದರು. ಎಥೆನಾಲ್ ಮುಕ್ತ ಪೆಟ್ರೋಲ್ ಮತ್ತು ಇ20 ಪೆಟ್ರೋಲ್ ನಡುವೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇ20 ಇಂಧನಕ್ಕಾಗಿ ವಿನ್ಯಾಸಗೊಳಿಸದ ವಾಹನಗಳ ಮಾಲಿಕರಿಗೆ ಯಾವುದೇ ಒತ್ತಾಯ ಮಾಡಬಾರದು. ಈ ಇಂಧನಕ್ಕೆ ವಾಹನಗಳು ಹೊಂದಿಕೊಳ್ಳುತ್ತವೆ ಎಂದು ಪ್ರಮಾಣೀಕರಿಸುವವರೆಗೆ ಇಂಧನ ಬಳಸುವಂತೆ ಅವರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒತ್ತಾಯಿಸಬಾರದು ಎಂದು ಅವರು ಪ್ರತಿಪಾದಿಸಿದರು.

ಇ20 ಇಂಧನ ನೀತಿ ಜಾರಿಯನ್ನು 2030ರ ಗುರಿಯನ್ನು ಬಿಟ್ಟು ಈಗಲೇ ಜಾರಿಗೆ ತರಲು ಕಾರಣವೇನು ಎಂದು ಚೀಮಾ ಪ್ರಶ್ನಿಸಿದರು. ಚರ್ಚೆಯ ಸಂದರ್ಭ ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿರುವವರು ಸದನದಲ್ಲೂ ಇದ್ದಾರೆ ಎಂದು ಹೇಳುವ ಮೂಲಕ ಚೀಮಾ ಎಥೆನಾಲ್ ತಯಾರಕರನ್ನು ಕುಟುಕಿದರು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಹಾಗೂ ಕೈಗಾರಿಕೋದ್ಯಮಿ ರಾಣಾ ಗುರ್ಜಿತ್ ಸಿಂಗ್, ‘‘ನಾನು ಕರ್ಮ ಯೋಗಿ, ದರೋಡೆಕೋರನಲ್ಲ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News