Kerala ಸಿಎಂ ಹುದ್ದೆಗೆ ರೇಸ್: ಬೆಂಬಲಿಗರು ಬೀದಿಗಿಳಿದು, ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿ ಅಭಿಯಾನ
ವಿ.ಡಿ. ಸತೀಶನ್, ರಮೇಶ್ ಚೆನ್ನಿತಲ , ಕೆ.ಸಿ. ವೇಣುಗೋಪಾಲ್ |Photo Credit : PTI
ತಿರುವನಂತಪುರ, ಮೇ 8: ಕೇರಳದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸುವುದು ಈಗ ಕಾಂಗ್ರೆಸ್ ಹೈಕಮಾಂಡ್ ನ ಅಂಗಳದಲ್ಲಿದೆ. ಈ ನಡುವೆ ಪ್ರಮುಖ ಸ್ಪರ್ಧಿಗಳಾದ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತಲ ಅವರ ಬೆಂಬಲಿಗರು ರಾಜ್ಯಾದ್ಯಂತ ತಮ್ಮ ನಾಯಕರ ಪರವಾಗಿ ಬೀದಿಗಿಳಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಭರ್ಜರಿ ಅಭಿಯಾನ ಆರಂಭಿಸಿದ್ದಾರೆ.
►ಫ್ಲೆಕ್ಸ್-ಪೋಸ್ಟರ್ ಸಮರ
ಗುರುವಾರ ಚುನಾಯಿತ ಶಾಸಕರೊಂದಿಗೆ ಚರ್ಚಿಸಲು ಕೇಂದ್ರ ವೀಕ್ಷಕರು ಇಲ್ಲಿಗೆ ಆಗಮಿಸಿದ್ದ ಸಂದರ್ಭದಲ್ಲಿ ಇಂದಿರಾ ಭವನ ಸಮೀಪ ಸಂಸದ ವೇಣುಗೋಪಾಲ್ ಅವರ ಪರ ಆರು ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಲಾಗಿತ್ತು. ಅವುಗಳ ಪೈಕಿ ಒಂದರ ಮೇಲೆ ಗ್ರೀಸ್ ಆಯಿಲ್ ಸುರಿಯಲಾಗಿದೆ ಎಂದು ಆರೋಪಿಸಲಾಗಿದೆ. ವೇಣುಗೋಪಾಲ್ ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.
ಸತೀಶನ್ ಪರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನಗಳು ನಡೆದಿದ್ದು, ಕಣ್ಣೂರು ಜಿಲ್ಲೆಯ ಅಲಪ್ಪುಳ ಮತ್ತು ಇರಿಕ್ಕೂರ್ ನಲ್ಲಿ ವೇಣುಗೋಪಾಲ್ ಮತ್ತು ಸತೀಶನ್ ಪರ ಪೋಸ್ಟರ್ ಗಳು ಕಾಣಿಸಿಕೊಂಡಿವೆ.
►ಚೆನ್ನಿತಲ ಹಿಂದೆ ಸಾಮಾಜಿಕ ಮಾಧ್ಯಮ
ಫ್ಲೆಕ್ಸ್ ಬೋರ್ಡ್ ಸಮರದಲ್ಲಿ ಚೆನ್ನಿತಲ ತೀರ ಹಿಂದೆ ಇದ್ದಾರಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
►ಮಿತ್ರಪಕ್ಷಗಳಿಂದ ಸತೀಶನ್ ಪರ ಒಲವು
ಹೆಚ್ಚಿನ ಯುಡಿಎಫ್ ಮಿತ್ರಪಕ್ಷಗಳು ಸತೀಶನ್ ಪರ ಒಲವು ಹೊಂದಿದ್ದರೂ, ಈ ಸಂಬಂಧ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದರಿಂದ ದೂರ ಇವೆ.
►ಪೈಪೋಟಿ ಸಹಜ: ಮುರಳೀಧರನ್
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಟ್ಟಿಯೂರಕಾವು ಶಾಸಕ ಕೆ. ಮುರಳೀಧರನ್ ಅವರು, ಕಾಂಗ್ರೆಸ್ ನಂತಹ ಪ್ರಜಾಸತ್ತಾತ್ಮಕ ಪಕ್ಷದಲ್ಲಿ ಇಂತಹ ಪೈಪೋಟಿಗಳು ಸಹಜ. ಮುಖ್ಯಮಂತ್ರಿಯ ಹೆಸರು ಅಂತಿಮಗೊಂಡ ಬಳಿಕ ಪಕ್ಷವು ಆ ನಿರ್ಧಾರಕ್ಕೆ ಬದ್ಧವಾಗಿರುತ್ತದೆ ಎಂದು ಹೇಳಿದರು.