ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಪಾರದರ್ಶಕತೆ ಇಲ್ಲ: ರಾಹುಲ್ ಗಾಂಧಿ ಆರೋಪ
"ವಿರೋಧ ಪಕ್ಷದ ನಾಯಕ ‘ರಬ್ಬರ್ ಸ್ಟ್ಯಾಂಪ್’ ಅಲ್ಲ"
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪಕ್ಷಪಾತದಿಂದ ಕೂಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ‘ರಬ್ಬರ್ ಸ್ಟ್ಯಾಂಪ್’ ಅಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸಮ್ಮತಿ ಪತ್ರ ಸಲ್ಲಿಸಿರುವ ರಾಹುಲ್ ಗಾಂಧಿ, ಅದನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಅಂತಿಮ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಕುರಿತು ನಿರ್ಣಾಯಕ ಮಾಹಿತಿಯನ್ನು ತಮಗೆ ನಿರಾಕರಿಸಲಾಗಿದೆ. ಇದು ಆಯ್ಕೆ ಪ್ರಕ್ರಿಯೆಯ ಅಣಕ ಎಂದು ಅವರು ಟೀಕಿಸಿದ್ದಾರೆ.
‘ಪದೇ ಪದೇ ಲಿಖಿತ ಮನವಿ ಮಾಡಿದರೂ ಅರ್ಹ ಅಭ್ಯರ್ಥಿಗಳ ಸಂಪೂರ್ಣ ವರದಿಯನ್ನು ನನಗೆ ಒದಗಿಸಲಿಲ್ಲ. ಸಭೆಯ ಸಮಯದಲ್ಲಿಯೇ ಮೊದಲ ಬಾರಿಗೆ 69 ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವಂತೆ ನಿರೀಕ್ಷಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.
‘ಪ್ರತಿ ಅಭ್ಯರ್ಥಿಯ ಇತಿಹಾಸ ಮತ್ತು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ದಾಖಲೆಗಳ ಸಮಗ್ರ ಪರಿಶೀಲನೆ ಅತ್ಯಗತ್ಯ. ಆದರೆ, ಸರ್ಕಾರದ ಆದ್ಯತೆಯ ಅಭ್ಯರ್ಥಿಯೇ ಆಯ್ಕೆಯಾಗುವಂತೆ ಈ ಪ್ರಕ್ರಿಯೆಯನ್ನು ರೂಪಿಸಲಾಗಿದೆ’ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷ ಮೇ 5ರಂದು ನಡೆದ ಸಭೆಯಲ್ಲಿಯೂ ತಾವು ಅಸಮ್ಮತಿ ದಾಖಲಿಸಿದ್ದಾಗಿ ರಾಹುಲ್ ತಿಳಿಸಿದ್ದಾರೆ. ‘ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆ ನಡೆಸುವಂತೆ ಕೋರಿ ಕಳೆದ ವರ್ಷದ ಅಕ್ಟೋಬರ್ 21ರಂದು ಪ್ರಧಾನಿ ಅವರಿಗೆ ಪತ್ರ ಬರೆದಿದ್ದೆ. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸಿಬಿಐ ನಿರ್ದೇಶಕರಾದ ಪ್ರವೀಣ್ ಸೂದ್ ಅವರ ಅಧಿಕಾರಾವಧಿ ಮೇ 24ರಂದು ಅಂತ್ಯಗೊಳ್ಳಲಿದ್ದು, ಹೊಸ ನಿರ್ದೇಶಕರ ಆಯ್ಕೆ ಕುರಿತು ಚರ್ಚಿಸಲು ಪ್ರಧಾನಿ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. ಸಭೆಯಲ್ಲಿ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ರಾಹುಲ್ ಗಾಂಧಿ ಭಾಗವಹಿಸಿದ್ದರು.
ಪರಾಗ್ ಜೈನ್, ಶತ್ರುಜಿತ್ ಕಪೂರ್, ಯೋಗೇಶ್ ಗುಪ್ತಾ, ಜಿ.ಪಿ. ಸಿಂಗ್ ಹಾಗೂ ಪ್ರವೀರ್ ರಂಜನ್ ಅವರ ಹೆಸರುಗಳು ಹೊಸ ಸಿಬಿಐ ನಿರ್ದೇಶಕರ ಹುದ್ದೆಗೆ ಮುಂಚೂಣಿಯಲ್ಲಿವೆ ಎಂದು ವರದಿಯಾಗಿದೆ.
I have written to the Prime Minister recording my dissent from the CBI Director selection process.
— Rahul Gandhi (@RahulGandhi) May 12, 2026
I cannot abdicate my constitutional duty by participating in a biased exercise.
The Leader of Opposition is not a rubber stamp. pic.twitter.com/WfSt5gGPPR