×
Ad

ರೆಪೊ ದರ ಯಥಾಸ್ಥಿತಿಯಲ್ಲಿ ಮುಂದುವರಿಕೆ : ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

ಜಿಡಿಪಿ ಬೆಳವಣಿಗೆ ಅಂದಾಜು 6.6%ಕ್ಕೆ ಇಳಿಕೆ

Update: 2026-06-05 10:36 IST

Photo |NDTV

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ (RBI) ರೆಪೊ ದರವನ್ನು ಶೇ 5.25ರಲ್ಲೇ ಕಾಯ್ದುಕೊಳ್ಳಲು ಶುಕ್ರವಾರ ನಿರ್ಧರಿಸಿದೆ. ಜೊತೆಗೆ, ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಶೇ 6.6ಕ್ಕೆ ಇಳಿಸಿದೆ.

ಏರುತ್ತಿರುವ ಕಚ್ಚಾ ತೈಲ ಬೆಲೆಗಳು, ಪೂರೈಕೆಯಲ್ಲಿನ ಅಡಚಣೆಗಳು ಹಾಗೂ ಜಾಗತಿಕ ಭೌಗೋಳಿಕ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಿರುವುದಾಗಿ RBI ತಿಳಿಸಿದೆ.

ಹಣಕಾಸು ನೀತಿ ಸಮಿತಿ (MPC)ಯ ಎಲ್ಲ ಆರು ಸದಸ್ಯರು ರೆಪೊ ದರವನ್ನು ಶೇ 5.25ರಲ್ಲೇ ಕಾಯ್ದುಕೊಳ್ಳುವ ಪರವಾಗಿ ಸರ್ವಾನುಮತದಿಂದ ಮತ ಚಲಾಯಿಸಿದರು. ಕೇಂದ್ರ ಬ್ಯಾಂಕ್ ತನ್ನ ‘ತಟಸ್ಥ’ ಹಣಕಾಸು ನೀತಿ ನಿಲುವನ್ನು ಮುಂದುವರಿಸಿದ್ದು, ಭವಿಷ್ಯದ ನಿರ್ಧಾರಗಳು ಆರ್ಥಿಕ ದತ್ತಾಂಶ ಮತ್ತು ಜಾಗತಿಕ ಬೆಳವಣಿಗೆಗಳನ್ನು ಅವಲಂಬಿಸಿರಲಿವೆ ಎಂದು ತಿಳಿಸಿದೆ.

ಈ ನಿರ್ಧಾರವನ್ನು ಅರ್ಥಶಾಸ್ತ್ರಜ್ಞರು ವ್ಯಾಪಕವಾಗಿ ನಿರೀಕ್ಷಿಸಿದ್ದರು. ಹಣಕಾಸು ನೀತಿ ಪರಿಶೀಲನೆಯ ನಿರ್ಧಾರವನ್ನು ಪ್ರಕಟಿಸಿದ RBI ಗವರ್ನರ್ ಸಂಜಯ್ ಮಲ್ಹೋತ್ರಾ, ಎಪ್ರಿಲ್‌ ನಲ್ಲಿ ನಡೆದ ಹಿಂದಿನ ನೀತಿ ಸಭೆಯ ಬಳಿಕ ಜಾಗತಿಕ ಪರಿಸ್ಥಿತಿ ಮತ್ತಷ್ಟು ಸವಾಲಿನಿಂದ ಕೂಡಿದೆ ಎಂದು ಹೇಳಿದರು.

‘ಎಪ್ರಿಲ್‌ ನಲ್ಲಿ ನಡೆದ ಕೊನೆಯ ನೀತಿ ಸಭೆಯ ನಂತರ ಜಾಗತಿಕ ವಾತಾವರಣ ಹದಗೆಟ್ಟಿದೆ. ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ, ಇಂಧನ ಬೆಲೆಗಳ ಏರಿಕೆ ಹಾಗೂ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳು ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಿಸಿವೆ’ ಎಂದು ಅವರು ಉಲ್ಲೇಖಿಸಿದರು.

ಈ ಬೆಳವಣಿಗೆಗಳು ಹಣದುಬ್ಬರ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯ ನಿಲುವು ಅಗತ್ಯವಾಗಿದೆ. ಜಾಗತಿಕ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ಶೇ 6.6ಕ್ಕೆ ಪರಿಷ್ಕರಿಸಲಾಗಿದೆ ಎಂದು RBI ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News