ಉತ್ತರಾಖಂಡದಲ್ಲಿ ಜಾಗ ಖರೀದಿಗೆ ಸಿಎಂ ಸಹಾಯ ಯಾಚಿಸಿದ ಕ್ರಿಕೆಟಿಗ ರಿಷಬ್ ಪಂತ್; ಮುಖ್ಯಮಂತ್ರಿ ಪ್ರತಿಕ್ರಿಯೆ ಏನು?

Update: 2026-08-08 13:12 IST

ಉತ್ತರಾಖಂಡ ಮುಖ್ಯಮಂತ್ರಿ‌ ಪುಷ್ಕರ್ ಸಿಂಗ್ ಧಾಮಿ / ಕ್ರಿಕೆಟಿಗ ರಿಷಬ್ ಪಂತ್ (Photo: PTI)

ಡೆಹ್ರಾಡೂನ್:‌ ತವರು ರಾಜ್ಯವಾದ ಉತ್ತರಾಖಂಡದಲ್ಲಿ ಮನೆ ಖರೀದಿಸಲು ಪ್ರಯತ್ನಿಸುತ್ತಿರುವ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್, ಜಮೀನು ಖರೀದಿಗೆ ಸಹಾಯ ಮಾಡುವಂತೆ ಉತ್ತರಾಖಂಡ ಮುಖ್ಯಮಂತ್ರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಮಾತೃಭೂಮಿಗೆ ಕೊಡುಗೆ ನೀಡುವ ಪಂತ್ ಅವರ ಉದ್ದೇಶವನ್ನು ಪ್ರಶಂಸಿಸಿದ್ದಾರೆ.

ಪಂತ್ 2025-26 ನೇ ಹಣಕಾಸು ವರ್ಷದಲ್ಲಿ ಉತ್ತರಾಖಂಡದ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರರೆಂದು ವರದಿಯಾದ ಕೆಲವೇ ದಿನಗಳಲ್ಲಿ ಅವರ ಈ ಮನವಿ ಬಂದಿದೆ.

ಈ ಬಗ್ಗೆ ಎಕ್ಸ್ ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ ಪಂತ್ , ದಿಲ್ಲಿಯಿಂದ ತಮ್ಮ ನೆಲೆಯನ್ನು ಉತ್ತರಾಖಂಡಕ್ಕೆ ಬದಲಾಯಿಸಲು ಮತ್ತು ಅಲ್ಲಿ ತಮ್ಮ ಮೊದಲ ಸ್ವಂತ ಮನೆ ನಿರ್ಮಿಸಲು ಸೂಕ್ತವಾದ ಜಮೀನನ್ನು ಹುಡುಕಲು ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿರುವುದಾಗಿ ಬರೆದಿದ್ದಾರೆ.

“ನನ್ನ ಬೇರುಗಳೊಂದಿಗೆ ಮರುಸಂಪರ್ಕ ಸಾಧಿಸುವ ಮತ್ತು ಸ್ವಂತ ರಾಜ್ಯಕ್ಕೆ ಕೊಡುಗೆ ನೀಡುವ ಬಯಕೆಯಿಂದ ಈ ವಿನಂತಿ ಮಾಡುತ್ತಿದ್ದೇನೆ. ಆದರೆ ಇಲ್ಲಿ ವಾಸಿಸಲು ಅನುಕೂಲಕರವಾದ ಮತ್ತು ದೊಡ್ಡದಾದ ಜಮೀನು ಸಿಗುತ್ತಿಲ್ಲ. ನನಗೆ ಉತ್ತರಾಖಂಡವೆಂದರೆ ತುಂಬಾ ಪ್ರೀತಿ" ಎಂದು ಪಂತ್ ಹೇಳಿದ್ದಾರೆ.

“ಸರ್ಕಾರದಿಂದ ಯಾವುದೇ ಉಚಿತ ಭೂಮಿಯನ್ನು ತಾನು ಕೋರುತ್ತಿಲ್ಲ” ಎಂದು ಪಂತ್ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪಂತ್ ಮನವಿಯನ್ನು ಸ್ವಾಗತಿಸಿದ ಸಿಎಂ ಧಾಮಿ:

ಉತ್ತರಾಖಂಡಕ್ಕೆ ಹಿಂತಿರುಗುವ ಪಂತ್ ಅವರ ಬಯಕೆಯನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಧಾಮಿ, ರಾಜ್ಯದ ಕೀರ್ತಿಯನ್ನು ಹೆಚ್ಚಿಸುವಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

"ಪ್ರಿಯ ರಿಷಬ್, ನೀವು ಉತ್ತರಾಖಂಡದ ಹೆಮ್ಮೆ. ನಿಮ್ಮ ಅದ್ಭುತ ಪ್ರದರ್ಶನ ಮತ್ತು ಸಾಧನೆಗಳ ಮೂಲಕ ನೀವು ದೇಶ ಮತ್ತು ಜಗತ್ತಿನಲ್ಲಿ ಈ ರಾಜ್ಯದ ಹೆಸರನ್ನು ಬೆಳಗಿದ್ದೀರಿ. ನಿಮ್ಮ ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ಇಲ್ಲಿಗೆ ಹಿಂತಿರುಗಿ ಕೊಡುಗೆ ನೀಡುವ ನಿಮ್ಮ ಭಾವನೆ ಅತ್ಯಂತ ಶ್ಲಾಘನೀಯ" ಎಂದು ಧಾಮಿ ಹೇಳಿದ್ದಾರೆ.

"ನೀವು ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಿ ನಿಯಮಗಳ ಪ್ರಕಾರ ಎಲ್ಲಾ ರೀತಿಯ ಸಾಧ್ಯ ಸಹಕಾರವನ್ನು ಖಚಿತಪಡಿಸಿಕೊಳ್ಳುತ್ತಾರೆ" ಎಂದು ಮುಖ್ಯಮಂತ್ರಿ ಅಧಿಕೃತ ಸಹಾಯದ ಭರವಸೆ ನೀಡಿದ್ದಾರೆ.

ಪಂತ್ ಮತ್ತು ಉತ್ತರಾಖಂಡ ನಂಟು

ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ನಲ್ಲಿ ಜನಿಸಿದ ಪಂತ್ ತಮ್ಮ ಕ್ರಿಕೆಟ್ ಪ್ರಯಾಣವನ್ನು ತವರು ರಾಜ್ಯದಿಂದಲೇ ಆರಂಭಿಸಿದ್ದರು. ಬಳಿಕ ವೃತ್ತಿಪರ ಕ್ರಿಕೆಟ್ ನಲ್ಲಿ ಮುಂದುವರಿಯಲು ದಿಲ್ಲಿಗೆ ತೆರಳಿದ ಅವರು, ದೇಶೀಯ ಕ್ರಿಕೆಟ್ ನಲ್ಲಿ ದಿಲ್ಲಿಯನ್ನು ಪ್ರತಿನಿಧಿಸುತ್ತಿದ್ದರು.

2025-26 ನೇ ಹಣಕಾಸು ವರ್ಷದಲ್ಲಿ ಉತ್ತರಾಖಂಡದ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರರಾದ ಅವರು , ಸುಮಾರು 23.84 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಪಂತ್ ಅವರ ಆದಾಯವು ಬಿಸಿಸಿಐ ಒಪ್ಪಂದ, ಮ್ಯಾಚ್ ಫೀಸ್, ಐಪಿಎಲ್ ಗಳಿಕೆ ಮತ್ತು ವಾಣಿಜ್ಯ ಒಪ್ಪಂದಗಳಿಂದ ಬರುತ್ತದೆ. ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡವು 27 ಕೋಟಿ ರೂ.ಗಳಿಗೆ ಖರೀದಿಸಿತ್ತು ಮತ್ತು ಅವರು ಹಲವಾರು ಪ್ರಮುಖ ಬ್ರ್ಯಾಂಡ್ ಗಳ ರಾಯಭಾರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News