ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಶಿಕ್ಷಣ ವ್ಯವಸ್ಥೆಗೆ ಬೆಂಬಲ ನೀಡಿ: ಸಲ್ಮಾನ್ ಖಾನ್

ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಮೌನ ಮುರಿದ ಬಾಲಿವುಡ್ ನಟ

Update: 2026-07-22 23:59 IST

ನಟ ಸಲ್ಮಾನ್ ಖಾನ್ |Photo Credit: X \ Salmankhan

ಮುಂಬೈ: ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದು, ಚಳುವಳಿಯು ಶಾಂತಿಯುತವಾಗಿ ಆರಂಭವಾಗಿ ಹಿಂಸಾತ್ಮಕ ತಿರುವು ಪಡೆದಿರುವುದು ತನಗೆ ತುಂಬಾ ಬೇಸರ ತಂದಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆ ಮೌನ ಮುರಿದ ಸಲ್ಮಾನ್‌ ಖಾನ್ ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಚಳುವಳಿ ಹಿಂಸಾತ್ಮಕ ತಿರುವು ಪಡೆದಿರುವುದು, ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ತನಗೆ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ವಿಷಯವಾಗಿದ್ದು, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದ ವಿದ್ಯಾರ್ಥಿಗಳು ಒಗ್ಗೂಡಿರುವುದು ಹಾಗೂ ಅವರಿಗೆ ಪೋಷಕರು ಬೆಂಬಲ ನೀಡಿರುವುದು ಸಂತೋಷದ ಸಂಗತಿ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ತೋರಿಸಿರುವ ಸಮರ್ಪಣೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವನ್ನು ಉಲ್ಲೇಖಿಸಿರುವ ಸಲ್ಮಾನ್ ಖಾನ್ ತಮ್ಮ ಭವಿಷ್ಯ ಹಾಗೂ ಉತ್ತಮ, ವಿದ್ಯಾವಂತ ಭಾರತವನ್ನು ನಿರ್ಮಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ತೋರಿಸುತ್ತಿರುವ ಬದ್ಧತೆ ಪ್ರಶಂಸನೀಯವಾಗಿದೆ ಎಂದು ಹೇಳಿದ್ದಾರೆ.

ಈ ಆಂದೋಲನ ಮತ್ತು ಪ್ರತಿಭಟನೆ ಸರಿಯಾದ ಮಾರ್ಗದಲ್ಲಿದ್ದು, ವಿದ್ಯಾರ್ಥಿಗಳು ಅದನ್ನು ಶಾಂತಿಯುತವಾಗಿ ನಡೆಸಿದ್ದಾರೆ. ಅವರು ತೋರಿಸಿರುವ ಧೈರ್ಯ ಶ್ಲಾಘನೀಯವಾಗಿದೆ. ಶಿಕ್ಷಣದ ಬಗ್ಗೆ ಪ್ರೇರಣೆ ಮತ್ತು ಬದ್ಧತೆ ಹೊಂದಿರುವ ಈ ಪೀಳಿಗೆ ಭಾರತಕ್ಕೆ ಹೆಮ್ಮೆ ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಇದನ್ನು ರಾಜಕೀಯವಾಗಿ ಬಳಸಬಾರದು ಎಂದು ಸಲ್ಮಾನ್ ಖಾನ್ ಉಲ್ಲೇಖಿಸಿದ್ದಾರೆ. ಈ ಹೋರಾಟದ ಸಂಪೂರ್ಣ ಶ್ರೇಯಸ್ಸು ವಿದ್ಯಾರ್ಥಿಗಳಿಗೇ ಸಲ್ಲಬೇಕು. ಸರ್ಕಾರವು ಅವರಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವೂ ತಮಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರವು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಬೆಂಬಲ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಸಕಾರಾತ್ಮಕ ನಿರ್ಧಾರ ಹೊರಬರಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿರುವ ಅವರು, ಶಿಕ್ಷಣ ಪಡೆಯಲು ಬಯಸುವ ಎಲ್ಲರಿಗೂ ದೇವರು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.

ಶಿಕ್ಷಣವೇ ಮುಂದಿನ ಟ್ರೆಂಡ್ ಮತ್ತು ಫ್ಯಾಷನ್ ಆಗಬೇಕು. ವರ್ಷದಿಂದ ವರ್ಷಕ್ಕೆ ಶಿಕ್ಷಣದತ್ತ ಹೆಚ್ಚಿನ ಒಲವು ಬೆಳೆಯಬೇಕು. ಜಗತ್ತಿನ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಭಾರತಕ್ಕೆ ಬರಬೇಕು ಮತ್ತು ಭಾರತವು ಜಾಗತಿಕ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಳ್ಳಬೇಕು ಎಂಬುದು ತಮ್ಮ ಆಶಯ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News