×
Ad

Tamil Nadu | ಟಿವಿಕೆ ʼವಿಜಯ್ʼಯಾತ್ರೆಗೆ ಅಡ್ಡಗಾಲು ಹಾಕಲು ಡಿಎಂಕೆ–ಎಐಎಡಿಎಂಕೆ ನಡುವೆ ರಹಸ್ಯ ಮಾತುಕತೆ?: ವರದಿ

Update: 2026-05-07 00:02 IST

DMK ಮುಖ್ಯಸ್ಥ ಎಂ ಕೆ ಸ್ಟಾಲಿನ್‌ AIADMK ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ | Photo: India Today

ಚೆನ್ನೈ, ಮೇ 6: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗಮನಾರ್ಹ ಜನಬೆಂಬಲ ಪಡೆದುಕೊಂಡ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳ ಕುರಿತ ಚರ್ಚೆಗಳು ಜೋರಾಗಿವೆ. ಟಿವಿಕೆ ಸರ್ಕಾರ ರಚಿಸುವುದನ್ನು ತಡೆಯುವ ಉದ್ದೇಶದಿಂದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಡುವೆ ಚುನಾವಣೋತ್ತರ ಹೊಂದಾಣಿಕೆ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಊಹಾಪೋಹಗಳು ಕೇಳಿ ಬಂದಿದೆ.

ಈ ಕುರಿತು ಫೇಸ್‌ ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ರಾಜಕೀಯ ವಿಶ್ಲೇಷಕ ಸುಜಿತ್‌ ನಾಯರ್‌, ವಿವಿರವಾದ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಮತದಾರರು ಈ ಚುನಾವಣೆಯಲ್ಲಿ ನಿರ್ಣಾಯಕ ಹಾಗೂ ಐತಿಹಾಸಿಕ ತೀರ್ಪು ನೀಡಿದ್ದಾರೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ವಿಜಯ್ ಅವರನ್ನು ಬೆಂಬಲಿಸುವವರಾಗಲಿ ಅಥವಾ ವಿರೋಧಿಸುವವರಾಗಲಿ, ಮತದಾರರು ರಾಜಕೀಯ ಬದಲಾವಣೆಯ ಪರ ತೀರ್ಪು ನೀಡಿದ್ದಾರೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಟಿವಿಕೆ ಸರ್ಕಾರ ರಚಿಸದಂತೆ ಮಾಡಲು ಮಾತ್ರ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ವದಂತಿಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಆದರೆ, ಈ ಸಂಬಂಧ ಯಾವುದೇ ಪಕ್ಷವೂ ಅಧಿಕೃತ ಹೇಳಿಕೆ ನೀಡಿಲ್ಲ. ಇವು ಕೇವಲ ರಾಜಕೀಯ ಮಟ್ಟದ ಊಹಾಪೋಹಗಳಾಗಿದ್ದು, ವಾಸ್ತವ ರೂಪ ಪಡೆಯದಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ನೈತಿಕ ಹಕ್ಕು ಜನರ ತೀರ್ಪಿನಿಂದ ಬರುತ್ತದೆ. ಚುನಾವಣಾ ಫಲಿತಾಂಶದ ನಂತರ ರಾಜಕೀಯ ಸಮೀಕರಣಗಳ ಮೂಲಕ ಆ ತೀರ್ಪನ್ನು ಬದಲಿಸಲು ಯತ್ನಿಸುವುದು ಕಾನೂನುಬದ್ಧವಾಗಿದ್ದರೂ, ಅದನ್ನು ಜನರು ರಾಜಕೀಯ ಅವಕಾಶವಾದಿತನವೆಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಡಿಎಂಕೆಗೆ ಇಂತಹ ಬೆಳವಣಿಗೆಗಳು ವಿಶೇಷ ಮಹತ್ವ ಪಡೆದಿವೆ. ಸಾಮಾಜಿಕ ನ್ಯಾಯ, ಸೈದ್ಧಾಂತಿಕ ರಾಜಕೀಯ ಹಾಗೂ ತತ್ವಬದ್ಧ ವಿರೋಧ ಪಕ್ಷದ ರಾಜಕಾರಣವನ್ನು ಹಲವು ದಶಕಗಳಿಂದ ಮುಂದಿಟ್ಟುಕೊಂಡು ಬಂದಿರುವ ಪಕ್ಷವಾಗಿ ಡಿಎಂಕೆ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದೆ. ಎಐಎಡಿಎಂಕೆಗಿಂತ ಟಿವಿಕೆಗೆ ಡಿಎಂಕೆ ಸೈದ್ಧಾಂತಿಕವಾಗಿ ಹೆಚ್ಚು ಹತ್ತಿರವಾಗಿದೆ ಎಂಬ ಅಭಿಪ್ರಾಯವೂ ಕೆಲ ವಲಯಗಳಲ್ಲಿ ವ್ಯಕ್ತವಾಗಿದೆ. ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ತನ್ನ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ, ಅದು ಪಕ್ಷದ ರಾಜಕೀಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ಎಐಎಡಿಎಂಕೆಯೂ ಇದೇ ರೀತಿಯ ಪ್ರಶ್ನೆಗಳನ್ನು ಎದುರಿಸಬೇಕಾಗಬಹುದು. ಡಿಎಂಕೆ ವಿರೋಧದ ರಾಜಕೀಯವನ್ನೇ ತನ್ನ ಗುರುತಾಗಿಸಿಕೊಂಡಿರುವ ಪಕ್ಷವು, ಇದೇ ಡಿಎಂಕೆಯೊಂದಿಗೆ ಕೈಜೋಡಿಸಿದರೆ ತನ್ನದೇ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಅಸಮಾಧಾನಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಳಿಕ ಶಿವಸೇನೆ, ಕಾಂಗ್ರೆಸ್ ಹಾಗೂ ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿ ಸೇರಿಕೊಂಡು ಸರ್ಕಾರ ರಚಿಸಿದ್ದ ಬೆಳವಣಿಗೆಯನ್ನೂ ಕೆಲ ರಾಜಕೀಯ ವಿಶ್ಲೇಷಕರು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. ದೀರ್ಘಕಾಲದ ಸೈದ್ಧಾಂತಿಕ ಪ್ರತಿಸ್ಪರ್ಧಿಗಳು ಅಧಿಕಾರ ಸಮೀಕರಣಕ್ಕಾಗಿ ಒಂದಾಗುವಾಗ, ಚುನಾವಣಾ ಭರವಸೆಗಳು ಮತ್ತು ರಾಜಕೀಯ ನಂಬಿಕೆಗಳು ಎರಡನೇ ಸ್ಥಾನಕ್ಕೆ ಸರಿಯುತ್ತವೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಬೆಳವಣಿಗೆಗಳು ರಾಜಕೀಯದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಸಿನಿಕತನವನ್ನು ಮತ್ತಷ್ಟು ಗಾಢಗೊಳಿಸುತ್ತವೆ. ಅಧಿಕಾರ ಸಮೀಕರಣಗಳು ಮುಖ್ಯವಾದಾಗ ಸಿದ್ಧಾಂತಗಳನ್ನು ಬದಿಗಿಡಲಾಗುತ್ತದೆ ಎಂಬ ಭಾವನೆ ಮತದಾರರಲ್ಲಿ ಹೆಚ್ಚುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News