Uttar Pradesh | ಉದ್ಘಾಟನೆಗೊಂಡ ಕೇವಲ 12 ದಿನಗಳಲ್ಲೇ 4700 ಕೋಟಿ ರೂ. ವೆಚ್ಚದ ಲಕ್ನೋ-ಕಾನ್ಪುರ ಎಕ್ಸ್‌ಪ್ರೆಸ್‌ವೇ ನಲ್ಲಿ ಬಿರುಕು!

Update: 2026-07-27 13:53 IST

Photo: X/ @mediacellsp

ಲಕ್ನೋ: ಅದ್ಧೂರಿಯಾಗಿ ಉದ್ಘಾಟನೆಗೊಂಡ ಕೇವಲ 12 ದಿನಗಳಲ್ಲೇ 4700 ಕೋಟಿ ರೂ. ವೆಚ್ಚದ ಲಕ್ನೋ-ಕಾನ್ಪುರ ಎಕ್ಸ್ಪ್ರೆಸ್ವೇ ಯ ಹಲವು ಕಡೆಗಳಲ್ಲಿ ಹಾನಿಗೊಳಗಾಗಿದ್ದು, ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಕೊರಾರಿ ಗ್ರಾಮದ ಬಳಿ ನೂತನ ಲಕ್ನೋ-ಕಾನ್ಪುರ ಎಕ್ಸ್ಪ್ರೆಸ್ವೇಯ ಒಂದು ಭಾಗ ಹಾನಿಗೊಳಗಾಗಿದ್ದನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ವೀಡಿಯೋ ತುಣುಕು ಮೂಲಕ ಬಹಿರಂಗಪಡಿಸಿದ್ದರು. ಅದನ್ನು ಪಕ್ಷದ ಮೀಡಿಯಾ ಸೆಲ್ ಮರುಪೋಸ್ಟ್ ಮಾಡುವ ಮೂಲಕ ನಿರ್ಮಾಣದ ಗುಣಮಟ್ಟವನ್ನು ಪ್ರಶ್ನಿಸಿದೆ.

ಜುಲೈ 13ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಈ ಯೋಜನೆಯನ್ನು ಉದ್ಘಾಟಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ NHAI ಪ್ರಾಧಿಕಾರದ ಯೋಜನಾ ನಿರ್ದೇಶಕ ನಕುಲ್ ಪ್ರಕಾಶ್ ವರ್ಮಾ, "ಸುಮಾರು 40 ಮೀಟರ್ ವ್ಯಾಪ್ತಿಯಲ್ಲಿ ಮೇಲ್ಮೈ ಭಾಗಕ್ಕೆ ಮಾತ್ರ ಹಾನಿಯಾಗಿದೆ. ಕೆಳಗಿನ ಮಣ್ಣು ಕುಸಿದು ಇಡೀ ರಸ್ತೆಯೇ ಕೆಳಗೆ ಕುಸಿದಾಗ ಮಾತ್ರ ಅದನ್ನು ಸಂಪೂರ್ಣ ಕುಸಿತ ಎಂದು ಕರೆಯಲಾಗುತ್ತದೆ" ಎಂದು ಹೇಳಿದ್ದಾರೆ.

ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಎಚ್ಚೆತ್ತ ಪ್ರಾಧಿಕಾರವು ಸಂಜೆಯ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದು , ಎಕ್ಸ್ಪ್ರೆಸ್ವೇನಲ್ಲಿ ವಾಹನ ಸಂಚಾರ ಯಥಾರೀತಿ ಮುಂದುವರಿದಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News