ಡಾ. ಮುರಳಿ ಮನೋಹರ ಜೋಶಿ | Photo Credit : X 

ಹೊಸದಿಲ್ಲಿ: ಬದರಿನಾಥ ಧಾಮದಲ್ಲಿ ಸಂಗೀತ ಕಾರ್ಯಕ್ರಮ, ವಿಶೇಷವಾಗಿ ಡಿಜೆ ಸಂಗೀತ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿರುವುದನ್ನು ಬಿಜೆಪಿ ಹಿರಿಯ ನಾಯಕ ಡಾ. ಮುರಳಿ ಮನೋಹರ ಜೋಶಿ ವಿರೋಧಿಸಿದ್ದಾರೆ.

‘ಬದರಿನಾಥ ಧಾಮದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನೀಡುವುದು ಸಾಂಸ್ಕೃತಿಕ ಮರ್ಯಾದೆಯ ಉಲ್ಲಂಘನೆ ಮಾತ್ರವಲ್ಲದೆ, ಪುಣ್ಯಕ್ಷೇತ್ರದ ಪಾವಿತ್ರ್ಯತೆಯ ಮೇಲಿನ ನೇರ ದಾಳಿಯೂ ಆಗಿದೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ದೈವಿಕ ಸ್ತೋತ್ರಗಳ ಮೂಲಕ ಶಾಂತಿಯುತ ಭಕ್ತಿಗೆ ಅನುಕೂಲವಾಗುವಂತೆ ಆದಿ ಗುರು ಶಂಕರಾಚಾರ್ಯ ಮಹಾರಾಜರು ಹಿಮಾಲಯದ ಪರಿಸರದಲ್ಲಿ ಈ ಧಾಮವನ್ನು ಸ್ಥಾಪಿಸಿದ್ದರು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಈ ಸ್ಥಳದಲ್ಲಿ ಶಂಖ ಊದುವುದಕ್ಕೂ ನಿಷೇಧವಿರುವಾಗ, ಅದನ್ನು ಕಡೆಗಣಿಸಿ ಗದ್ದಲದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಆಶ್ಚರ್ಯಕರ ಹಾಗೂ ವಿಷಾದನೀಯ ಎಂದು ಜೋಶಿ ಹೇಳಿದ್ದಾರೆ.

ಇಂತಹ ಕಾರ್ಯಕ್ರಮಗಳ ಮೂಲಕ ಭಾರತದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಿಸರ ಮೌಲ್ಯಗಳನ್ನು ಗಂಭೀರವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಇಷ್ಟು ಎತ್ತರದ ಪ್ರದೇಶದಲ್ಲಿ ಸಾವಿರಾರು ಜನರು ನೃತ್ಯ ಮಾಡಲು ಅವಕಾಶ ನೀಡುವುದು ಅವರ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನೂ ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

‘ದೇವಭೂಮಿ’ಯು ಈಗ ಹೇಗೆ ವಾಣಿಜ್ಯ ಸಂಸ್ಕೃತಿಯ ಕೇಂದ್ರವಾಗಿ ಬದಲಾಗುತ್ತಿದೆ ಎಂಬುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಸಂಸ್ಕೃತಿಯ ಈ ಅವನತಿಯನ್ನು ತಡೆಯಲು ಪರಿಣಾಮಕಾರಿ ಧ್ವನಿ ಎತ್ತುವಂತೆ ಭಾರತೀಯ ಸಂಸ್ಕೃತಿಯ ಅನುಯಾಯಿಗಳಿಗೆ, ವಿಶೇಷವಾಗಿ ಪೂಜ್ಯ ಶಂಕರಾಚಾರ್ಯರು ಮತ್ತು ಮಹಾನ್ ಸಂತರಿಗೆ ಜೋಶಿ ಮನವಿ ಮಾಡಿದ್ದಾರೆ.

ಇಂತಹ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರುವ ಮೂಲಕ ‘ದೇವಭೂಮಿ’ಯ ಘನತೆಯನ್ನು ಕಾಪಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನೂ ಅವರು ಒತ್ತಾಯಿಸಿದ್ದಾರೆ.

‘ಹಿಮಾಲಯವು ದೈವತ್ವದ ಆತ್ಮ, ಭಗವಾನ್ ಶಿವನ ನೆಲೆವೀಡು ಮತ್ತು ತಾಯಿ ಗಂಗೆಯ ಉಗಮಸ್ಥಾನವಾಗಿದೆ. ಅದನ್ನು ನೃತ್ಯದ ಅಖಾಡವನ್ನಾಗಿ ಪರಿವರ್ತಿಸುವುದು ಕೋಟ್ಯಂತರ ಭಾರತೀಯರ ನಂಬಿಕೆಗೆ ಬಗೆದ ಆಳವಾದ ಗಾಯ’ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor