ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸುವ ʼಪ್ರಾಜೆಕ್ಟ್ ಮೇಘಾಲಯʼ ಸಂಚು ಆರೋಪ: ಹಲವು ಪತ್ರಕರ್ತರ ವಿಚಾರಣೆ

Update: 2026-07-17 07:22 IST

ತಮಿಳುನಾಡು ಸಿಎಂ ವಿಜಯ್‌ Photo: x.com/Thaila_santhosh

ಚೆನ್ನೈ: ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ, ಆಡಳಿತ ಪಕ್ಷದ ಹಲವು ಶಾಸಕರಿಗೆ ಲಂಚದ ಆಮಿಷ ಒಡ್ಡಲಾಗಿದೆ ಎನ್ನಲಾದ 'ಪ್ರಾಜೆಕ್ಟ್ ಮೇಘಾಲಯ' ಎಂಬ ಆಪಾದಿತ ಸಂಚಿನ ಕುರಿತು ಚೆನ್ನೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯ ಭಾಗವಾಗಿ ಪ್ರಮುಖ ಸುದ್ದಿ ವಾಹಿನಿಯೊಂದರ ಹಿರಿಯ ಪತ್ರಕರ್ತರನ್ನು ಈ ವಾರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ NDTV ವರದಿ ಮಾಡಿದೆ.

ಮತದಾರರ ಅಭಿಪ್ರಾಯ ಸಂಗ್ರಹಣಾ ಸಂಸ್ಥೆಯಾದ IPDS ನಡೆಸುತ್ತಿರುವ ಯೂಟ್ಯೂಬರ್ ತಿರುನಾವುಕ್ಕರಸು ಮತ್ತು ಇತರರು ತಮ್ಮನ್ನು ಈ ಬಗ್ಗೆ ಸಂಪರ್ಕಿಸಿದ್ದರು ಎಂದು ಉತಂಗರೈ ಕ್ಷೇತ್ರದ TVK ಶಾಸಕ ಎನ್. ಇಳಯರಾಜ ದೂರು ನೀಡಿದ್ದಾರೆ.

ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಲು ತಮಗೆ 35 ಕೋಟಿ ರೂ. ಆಮಿಷ ಒಡ್ಡಿದ್ದರು. ವಿಧಾನಸಭೆಯ ವಿಶ್ವಾಸಮತದ ಅವಧಿಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಲು ಕನಿಷ್ಠ ಒಬ್ಬ TVK ಶಾಸಕರನ್ನು ಒಪ್ಪಿಸಲು ಯತ್ನಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಈ ಆಮಿಷವನ್ನು ತಿರಸ್ಕರಿಸಿದ ನಂತರ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆಗಳು ಬಂದಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಿಜಯ್ ನೇತೃತ್ವದ ಚುನಾಯಿತ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನವಾಗಿ, ಸುಮಾರು 15 ಟಿವಿಕೆ ಶಾಸಕರಿಗೆ ಹಣದ ಆಮಿಷ ಒಡ್ಡಿ ಸೆಳೆಯಲು ರೂಪಿಸಲಾಗಿದ್ದ 'ಪ್ರಾಜೆಕ್ಟ್ ಮೇಘಾಲಯ' ಎಂಬ ರಹಸ್ಯ ಯೋಜನೆಯನ್ನು ತನಿಖೆಯ ವೇಳೆ ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾದ ಪ್ರಾದೇಶಿಕ ಸುದ್ದಿ ವಾಹಿನಿ  'ಪುದಿಯ ತಲೈಮುರೈ' ಯ ಪತ್ರಕರ್ತ ವಿಜಯನ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಜಯನ್ ಅವರು ಮುಖ್ಯ ಆರೋಪಿಗಳಲ್ಲಿ ಒಬ್ಬನಾದ ತಿರುನಾವುಕ್ಕರಸುಗೆ ಸಂದೇಶಗಳನ್ನು ಕಳುಹಿಸಿದ್ದರು ಮತ್ತು ಈ ಇಡೀ ಘಟನಾವಳಿಗಳು ನಡೆದ ಅವಧಿಯಲ್ಲಿ ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಪುರಾವೆಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 15 ಮತ್ತು 16ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಯಾದ ಬಳಿಕ, ಅವರ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ತನಿಖೆಗಾಗಿ ವಶಪಡಿಸಿಕೊಳ್ಳಲಾಗಿದೆ.

ಚೆನ್ನೈ ಪ್ರೆಸ್ ಕ್ಲಬ್ ಪ್ರತಿಕ್ರಿಯೆ

ಪೊಲೀಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಚೆನ್ನೈ ಪ್ರೆಸ್ ಕ್ಲಬ್, ಇದನ್ನು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಬಣ್ಣಿಸಿದೆ. ಜುಲೈ 15ರಂದು ತಡರಾತ್ರಿಯವರೆಗೆ ವಿಜಯನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ, ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಅವರ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಮತ್ತು ಮರುದಿನವೇ ಮತ್ತೊಮ್ಮೆ ವಿಚಾರಣೆಗೆ ಕರೆಸಿಕೊಳ್ಳಲಾಗಿದೆ ಎಂದು ಪ್ರೆಸ್ ಕ್ಲಬ್ ಆರೋಪಿಸಿದೆ.

ಆದರೆ, ತನಿಖೆಯು ಸಂಪೂರ್ಣವಾಗಿ ಕಾನೂನುಬದ್ಧ ನಿಯಮಾವಳಿಗಳ ಪ್ರಕಾರವೇ ನಡೆಯುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಆರೋಪಿತ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಡಿಎಂಕೆ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಡಿಎಂಕೆ ಪಕ್ಷ, ರಾಜಕೀಯ ಲಾಭಕ್ಕಾಗಿ ಟಿವಿಕೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದು, ಇದಕ್ಕೆ ಕಾನೂನು ಮೂಲಕವೇ ಉತ್ತರಿಸುವುದಾಗಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News