ಶಾರುಖ್ ಖಾನ್ (Photo: PTI)

ಭಯೋತ್ಪಾದಕರ ದಾಳಿಗಳಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಶವನ್ನು ರಕ್ಷಿಸುವಾಗ ಪ್ರಾಣಾರ್ಪಣೆ ಮಾಡಿದ ಭದ್ರತಾ ಸಿಬ್ಬಂದಿಯನ್ನು ಶಾರುಖ್ ಖಾನ್ ಸ್ಮರಿಸಿದರು.

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಶನಿವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಪೀಸ್ ಆನರ್ಸ್ ಕಾರ್ಯಕ್ರಮದಲ್ಲಿ ಪ್ರೀತಿಯ ಸಂದೇಶ ನೀಡಿದ್ದಾರೆ. ದ್ವೇಷವನ್ನು ಪ್ರೀತಿಯನ್ನಾಗಿ ಬದಲಿಸಲು ಹಿಂಸೆಗಿಂತ ಸಂವಾದವನ್ನು ಮತ್ತು ಭಯಕ್ಕಿಂತ ನಂಬಿಕೆಯನ್ನು ಆರಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ. ಅಲ್ಲದೆ, ಶಾಂತಿಯು ಪ್ರತಿಯೊಬ್ಬರೂ ಪ್ರತಿದಿನ ಪೂರೈಸಬೇಕಾದ ನಿರ್ಧಾರ ಮತ್ತು ಭರವಸೆಯಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ಭಯೋತ್ಪಾದಕರ ದಾಳಿಗಳಲ್ಲಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೇಶವನ್ನು ರಕ್ಷಿಸುವಾಗ ಪ್ರಾಣಾರ್ಪಣೆ ಮಾಡಿದ ಭದ್ರತಾ ಸಿಬ್ಬಂದಿಯನ್ನು ಸ್ಮರಿಸಿದರು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅವರ ಪತ್ನಿ ಅಮೃತಾ ಫಡ್ನವೀಸ್ ನೇತೃತ್ವದ ದಿವ್ಯಜ್ ಫೌಂಡೇಶನ್ ಆಯೋಜಿಸಿತ್ತು.

“ಒಮ್ಮೆ ನನ್ನ ಕಿರಿಯ ಮಗ ದ್ವೇಷವನ್ನು ಪ್ರೀತಿಯನ್ನಾಗಿ ಪರಿವರ್ತಿಸುವುದು ಹೇಗೆ ಎಂದು ನನ್ನನ್ನು ಕೇಳಿದಾಗ, ನಾನು ‘ಅದು ಬಹಳ ಸರಳ’ ಎಂದು ಹೇಳಿದ್ದೆ. ನಾವೆಲ್ಲರೂ ಹಿಂಸೆಯ ಬದಲು ಸಂವಾದವನ್ನೂ, ಭಯದ ಬದಲು ನಂಬಿಕೆಯನ್ನೂ ಆರಿಸಿಕೊಂಡು ಸಾಮರಸ್ಯದಿಂದ ಒಟ್ಟಿಗೆ ಬದುಕಲು ನಿರ್ಧರಿಸಿದರೆ, ಆಗ ಪ್ರೀತಿಯೇ ಅಂತಿಮವಾಗಿ ಗೆಲ್ಲುತ್ತದೆ” ಎಂದು ಶಾರುಖ್ ಹೇಳಿದ್ದಾರೆ.

“ಶಾಂತಿ ಒಂದು ಸಣ್ಣ ಸ್ಥಳದಿಂದ, ಅಂದರೆ ನಮ್ಮೆಲ್ಲರ ಒಳಗಿನಿಂದ, ನಮ್ಮ ಹೃದಯದಿಂದಲೇ ಪ್ರಾರಂಭವಾಗುತ್ತದೆ. ಶಾಂತಿ ಎನ್ನುವುದು ಒಂದು ನಿರ್ಧಾರ, ಒಂದು ಜವಾಬ್ದಾರಿ ಮತ್ತು ನಾವು ಪ್ರತಿದಿನ ಪೂರೈಸಬೇಕಾದ ಭರವಸೆ. ಜನಸಾಮಾನ್ಯರ ಶಕ್ತಿಯನ್ನು ಎಂದಿಗೂ ಮರೆಯಬೇಡಿ. ನಾವೆಲ್ಲರೂ ಸಾಮಾನ್ಯ ಮನುಷ್ಯರು. ನಾವು ಒಗ್ಗೂಡಬೇಕಿದೆ. ಹಾಗಾಗಿ ಇಂದು ನಾವೊಂದು ಪ್ರತಿಜ್ಞೆ ಮಾಡೋಣ. ನಾವು ಎಲ್ಲರನ್ನೂ ಪರಸ್ಪರ ಒಪ್ಪಿಕೊಳ್ಳಬೇಕು ಎಂದೇನಿಲ್ಲ. ಆದರೆ ಪ್ರತಿ ವ್ಯಕ್ತಿಯ ಕತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ನಮ್ಮಿಂದ ಅನೇಕ ಮೂರ್ಖತನದ ಕೆಲಸಗಳು ಆಗಬಹುದು. ಆದರೆ ನಾವು ಯಾರಿಗೂ ತೊಂದರೆಯನ್ನಾಗಲಿ ಅಥವಾ ನೋವನ್ನಾಗಲಿ ಉಂಟುಮಾಡಬಾರದು. ನಮ್ಮ ದೇಶವಾದ ಭಾರತವು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಗೆ ಒಂದು ಮಾದರಿಯಾಗಿದೆ” ಎಂದು ಅವರು ಹೇಳಿದ್ದಾರೆ.

ವಿಶ್ವಾದ್ಯಂತ ಸಂಚರಿಸುವಾಗ ತಮಗೆ ಅಪಾರ ಪ್ರೀತಿ ಸಿಕ್ಕಿರುವುದಾಗಿ ಅವರು ಹೇಳಿದ್ದಾರೆ. ಆದರೆ ಭಾರತ ಇನ್ನೂ ಹೆಚ್ಚಿನ ಗೌರವ ಗಳಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. “ನಮ್ಮ ದೇಶವಾದ ಭಾರತವು ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಗೆ ಒಂದು ಉದಾಹರಣೆಯಾಗಿದೆ” ಎಂದು ಅವರು ನುಡಿದರು.

ತಮ್ಮ 1995ರ ದಿಲ್ವಾಲೇ ದುಲ್ಹನಿಯ ಲೇ ಜಾಯೆಂಗೆ ಸಿನಿಮಾದ ಜನಪ್ರಿಯ ಸಂಭಾಷಣೆಯನ್ನು ಉಲ್ಲೇಖಿಸಿದ ನಟ, “ದೊಡ್ಡ ದೇಶಗಳಲ್ಲಿ ಸಣ್ಣಪುಟ್ಟ ವಿಷಯಗಳು ನಡೆಯುತ್ತಲೇ ಇರುತ್ತವೆ” (बड़े-बड़े देशों में ऐसी छोटी-छोटी बातें होती रहती हैं) ಎಂದು ಹೇಳಿದರು.

ಶಕ್ತಿಶಾಲಿ ರಾಷ್ಟ್ರಗಳು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳ ನಡುವೆಯೂ ಮಾನವೀಯತೆಯ ಸಣ್ಣ ಕೆಲಸಗಳನ್ನು ಎಂದಿಗೂ ಕಡೆಗಣಿಸಬಾರದು. ಇಂತಹ ಸಣ್ಣ ಕೆಲಸಗಳು ಇತಿಹಾಸವನ್ನೇ ಬದಲಿಸಬಲ್ಲವು ಎಂದು ಖಾನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.