ದಾವೂದ್ ಇಬ್ರಾಹಿಂ ,  ಛೋಟಾ ರಾಜನ್ | Photo Credit : NDTV 

ಉದ್ಯಮಿಗಳು, ಹೋಟೆಲ್ ಮಾಲೀಕರು, ಬಿಲ್ಡರ್‌ಗಳು ಹಾಗೂ ಚಲನಚಿತ್ರ ನಿರ್ಮಾಪಕರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಮುಂಬೈ ಭೂಗತ ಜಗತ್ತಿನ ಗ್ಯಾಂಗ್‌ ಗಳ ಬಲವಾಗಿದ್ದವರು ‘ಶೂಟರ್‌’ಗಳು. ಆದರೆ, ಅಪರಾಧ ಜಾಲಗಳ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಈ ಬಾಡಿಗೆ ಹಂತಕರು, ಅಗತ್ಯ ಮುಗಿದ ಬಳಿಕ ಸುಲಭವಾಗಿ ಕೈಬಿಡಬಹುದಾದ ಅಗ್ಗದ ಸಂಪನ್ಮೂಲಗಳಾಗಿದ್ದರು.

ಭೂಗತ ಜಗತ್ತಿನಲ್ಲಿ ಶೂಟರ್‌ ಗಳನ್ನು ಸುಲಭವಾಗಿ ಬದಲಾಯಿಸಬಹುದು; ಅವರನ್ನು ತ್ಯಜಿಸುವುದೂ ಸುಲಭ ಎಂಬುದು ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ಅಭಿಪ್ರಾಯ. ಎರಡು ವಾರಗಳ ಹಿಂದೆ ನಟ ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಶ್ಲಾಘಿಸುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದರು. ಮುಂಬೈ ಭೂಗತ ಜಗತ್ತಿನ ಕುರಿತು ‘ಸತ್ಯ’ (1998) ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ವರ್ಮಾ, ಈ ಅಪರಾಧ ಜಾಲಗಳ ಕುರಿತು ನಡೆಸಿದ ಸಂಶೋಧನೆಯ ಆಧಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1980 ಮತ್ತು 1990ರ ದಶಕಗಳಲ್ಲಿ ಮುಂಬೈಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಭೂಗತ ಗ್ಯಾಂಗ್‌ ಗಳಿಗೆ ಶೂಟರ್‌ಗಳೇ ಬೆನ್ನೆಲುಬಾಗಿದ್ದರು. ಮಾಫಿಯಾ ಡಾನ್‌ ಗಳು ಉದ್ಯಮಿಗಳು, ಹೋಟೆಲ್ ಮಾಲೀಕರು, ಬಿಲ್ಡರ್‌ ಗಳು ಅಥವಾ ಚಲನಚಿತ್ರ ನಿರ್ಮಾಪಕರಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು. ತಮ್ಮ ಬಳಿ ಶೂಟರ್‌ ಗಳ ದೊಡ್ಡ ಪಡೆಯೇ ಇದೆ ಎಂಬುದು ಸಂತ್ರಸ್ತರಿಗೆ ತಿಳಿದಿದ್ದರೆ ಮಾತ್ರ ಆ ಬೆದರಿಕೆ ಪರಿಣಾಮಕಾರಿಯಾಗುತ್ತಿತ್ತು. ವಿದೇಶಗಳಲ್ಲಿ ನೆಲೆಸಿದ್ದ ಗ್ಯಾಂಗ್ ನಾಯಕರ ಆದೇಶದಂತೆ ಶೂಟರ್‌ ಗಳು ಗುರಿಯಾದವರ ಮೇಲೆ ಗುಂಡಿನ ಮಳೆಗರೆದಿದ್ದರು. ಇದರಿಂದ ಸೃಷ್ಟಿಯಾಗುತ್ತಿದ್ದ ಭಯದ ವಾತಾವರಣ ಗ್ಯಾಂಗ್‌ ಗಳಿಗೆ ಸುಲಭವಾಗಿ ಹಣ ವಸೂಲಿ ಮಾಡಲು ನೆರವಾಗುತ್ತಿತ್ತು.

ಇತ್ತೀಚೆಗೆ ನಟ ಟೈಗರ್ ಶ್ರಾಫ್ ಪ್ರಕರಣದಲ್ಲೂ ಬಿಷ್ಣೋಯ್ ಗ್ಯಾಂಗ್ ಕೆಲವು ಸಾವಿರ ರೂಪಾಯಿಗಳ ಆಮಿಷವೊಡ್ಡಿ, ವಿದೇಶದಲ್ಲಿ ನೆಲೆಸುವ ಭರವಸೆ ನೀಡಿ ಯುವಕರನ್ನು ನೇಮಿಸಿಕೊಂಡಿತ್ತು. 1980 ಮತ್ತು 1990ರ ದಶಕಗಳಲ್ಲಿ ಮುಂಬೈಯಲ್ಲಿ ಸಕ್ರಿಯವಾಗಿದ್ದ ಗ್ಯಾಂಗ್‌ ಗಳು ಯುವಕರನ್ನು ಶೂಟರ್‌ಗಳಾಗಿ ನೇಮಿಸಿಕೊಳ್ಳುತ್ತಿದ್ದ ರೀತಿಯೂ ಇದೇ ಮಾದರಿಯಲ್ಲಿತ್ತು.

ದಾವೂದ್ ಇಬ್ರಾಹಿಂ ಡಿ-ಕಂಪೆನಿ

1994ರಲ್ಲಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ನಡುವೆ ಬಿರುಕು ಉಂಟಾದ ಬಳಿಕ ಬಾಬು ಶಕೀಲ್ ಅಹ್ಮದ್ ಅಲಿಯಾಸ್ ಛೋಟಾ ಶಕೀಲ್, ಡಿ-ಕಂಪೆನಿಯಲ್ಲಿ ಎರಡನೇ ಪ್ರಮುಖ ವ್ಯಕ್ತಿಯಾದನು. ತನ್ನ ಗುರಿಗಳನ್ನು ಹತ್ಯೆ ಮಾಡಲು ಭಿಂಡಿ ಬಜಾರ್, ಡೋಂಗ್ರಿ, ಮಜಗಾಂವ್, ನಾಗ್ಪಾಡಾ, ಅಗ್ರಿಪಾಡಾ ಮತ್ತು ಮಾಹಿಮ್‌ ನಂತಹ ಕೆಳಮಧ್ಯಮ ವರ್ಗದ ಪ್ರದೇಶಗಳಿಂದ ಹೆಚ್ಚಾಗಿ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುತ್ತಿದ್ದನು.

ಹಣ ಮತ್ತು ಐಷಾರಾಮಿ ಜೀವನಶೈಲಿಯ ಆಮಿಷಗಳು ಯುವಕರನ್ನು ಸೆಳೆಯುತ್ತಿದ್ದವು. ಧಾರ್ಮಿಕ ಭಾವನೆಗಳನ್ನೂ ನೇಮಿಸುವಾಗ ಬಳಸಿಕೊಳ್ಳಲಾಗುತ್ತಿತ್ತು. ಪ್ರತಿಸ್ಪರ್ಧಿ ಛೋಟಾ ರಾಜನ್‌ ನ ಶೂಟರ್‌ಗಳು 1993ರ ಸರಣಿ ಸ್ಫೋಟಗಳ ಆರೋಪಿಗಳಾಗಿದ್ದ ಮುಸ್ಲಿಮರನ್ನು ಹತ್ಯೆ ಮಾಡುತ್ತಿದ್ದುದೂ ಇದಕ್ಕೆ ಕಾರಣವಾಗಿತ್ತು. ಫಿರೋಝ್ ಕೊಂಕಣಿ, ಮುನ್ನಾ ಜಿಂಗಾಡಾ ಮತ್ತು ಫೀಲು ಖಾನ್ ಡಿ-ಕಂಪೆನಿಯ ಪ್ರಮುಖ ಹಂತಕರಾಗಿದ್ದರು.

ಛೋಟಾ ರಾಜನ್ ನಾನಾ ಕಂಪೆನಿ

ಛೋಟಾ ರಾಜನ್ ತನ್ನ ಶೂಟರ್‌ ಗಳನ್ನು ಹೆಚ್ಚಾಗಿ ಚೆಂಬೂರ್, ಘಾಟ್‌ಕೋಪರ್, ಕುರ್ಲಾ ಮತ್ತು ಧಾರಾವಿಯಂತಹ ಉಪನಗರಗಳಿಂದ ನೇಮಿಸಿಕೊಳ್ಳುತ್ತಿದ್ದನು. ಅವರಲ್ಲಿ ಬಹುತೇಕರು ಮರಾಠಿ ಅಥವಾ ದಕ್ಷಿಣ ಭಾರತೀಯ ಯುವಕರಾಗಿದ್ದರು. ಹೆಚ್ಚಿನವರು ಹಿಂದೂಗಳಾಗಿದ್ದರೂ, ಫರೀದ್ ತನಾಶಾ ಅವರಂತಹ ಮುಸ್ಲಿಮರೂ ಗ್ಯಾಂಗ್‌ ನಲ್ಲಿದ್ದರು. ಹಣದ ಜತೆಗೆ ಧಾರ್ಮಿಕ ಮತ್ತು ರಾಷ್ಟ್ರೀಯತಾವಾದಿ ಭಾವನೆಗಳ ಮೂಲಕವೂ ಯುವಕರನ್ನು ಪ್ರೇರೇಪಿಸಲಾಗುತ್ತಿತ್ತು.

ದಾವೂದ್ ಇಬ್ರಾಹಿಂನನ್ನು ದೇಶದ್ರೋಹಿ ಎಂದು ಕರೆದಿದ್ದ ಛೋಟಾ ರಾಜನ್, 1993ರ ಸರಣಿ ಸ್ಫೋಟಗಳ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹತ್ಯೆ ಮಾಡುವಂತೆ ತನ್ನ ಶೂಟರ್‌ ಗಳಿಗೆ ಆದೇಶಿಸಿದ್ದನು. ರವಿ ವೋರಾ ಅಲಿಯಾಸ್ ಡಿಕೆ ರಾವ್, ಸತೀಶ್ ತಂಗಪ್ಪನ್ ರೆಡ್ಡಿ, ವಿಲಾಸ್ ಮಾನೆ ಮತ್ತು ಸಾಧು ಶೆಟ್ಟಿ ಆತನ ಗ್ಯಾಂಗ್‌ ನ ಪ್ರಮುಖ ಹಂತಕರಾಗಿದ್ದರು.

ಅರುಣ್ ಗವಳಿಯ ಡ್ಯಾಡಿ ಕಂಪೆನಿ

ಅರುಣ್ ಗವಳಿ ಭಾರತವನ್ನು ಬಿಟ್ಟು ವಿದೇಶದಲ್ಲಿ ನೆಲೆಸಿರಲಿಲ್ಲ. ಮುಂಬೈನ ದಗ್ಡಿ ಚಾಲ್‌ ನಲ್ಲಿರುವ ತನ್ನ ಮನೆಯಿಂದ ಅಥವಾ ಜೈಲಿನಲ್ಲಿದ್ದಾಗ ಅಲ್ಲಿಂದಲೇ ಗ್ಯಾಂಗ್ ನಡೆಸುತ್ತಿದ್ದನು. ಆತನ ಶೂಟರ್‌ ಗಳಲ್ಲಿ ಬಹುತೇಕರು ಗಿರಣಿ ಕಾರ್ಮಿಕರ ಕುಟುಂಬಗಳಿಗೆ ಸೇರಿದ ಯುವಕರಾಗಿದ್ದರು.

1980ರ ದಶಕದ ಮಧ್ಯಭಾಗದಿಂದ ಪ್ರಮುಖ ಗಿರಣಿಗಳು ಮುಚ್ಚಲು ಆರಂಭಿಸಿದಾಗ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ಸ್ವತಃ ಮಾಜಿ ಗಿರಣಿ ಕಾರ್ಮಿಕನಾಗಿದ್ದ ಗವಳಿ, ಜೀವನ ನಿರ್ವಹಣೆಗೆ ಪರದಾಡುತ್ತಿದ್ದ ಕುಟುಂಬಗಳಿಗೆ ರಕ್ಷಕನಂತೆ ಕಾಣಿಸಿಕೊಂಡನು. ಇಂತಹ ಕುಟುಂಬಗಳ ಅನೇಕ ಯುವಕರನ್ನು ತನ್ನ ಗ್ಯಾಂಗ್‌ ಗೆ ಸೇರಿಸಿಕೊಂಡನು.

ಗವಳಿ ಗ್ಯಾಂಗ್‌ ನಲ್ಲಿ ಹಣಕ್ಕಿಂತ ಆತನ ಮೇಲಿನ ನಿಷ್ಠೆ ಮತ್ತು ನಾಯಕನ ಕುರಿತಿದ್ದ ಭಾವನೆಯೇ ಮುಖ್ಯವಾಗಿತ್ತು. ಶೂಟರ್‌ ಗಳು ಹಾಗೂ ಅವರ ಕುಟುಂಬಗಳು ಗವಳಿಯನ್ನು ದಬ್ಬಾಳಿಕೆ ನಡೆಸುವವರ ವಿರುದ್ಧ ಹೋರಾಡುವ ‘ರಾಬಿನ್ ಹುಡ್’ನಂತೆ ನೋಡುತ್ತಿದ್ದರು. ವಿಜಯ್ ತಾಂಡೇಲ್, ಶರದ್ ಬಂದ್ವೆ, ತನ್ಯಾ ಕೋಲಿ, ವಿಜಯ್ ನಾರ್ಕರ್, ಅಶೋಕ್ ಜೋಶಿ ಮತ್ತು ಸುನಿಲ್ ಘಾಟೆ ಆತನೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖ ವ್ಯಕ್ತಿಗಳಾಗಿದ್ದರು. ಇವರು ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು.

ಅಶ್ವಿನ್ ನಾಯಕ್ ರಾವಣ್ ಕಂಪೆನಿ

1996ರಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ತನ್ನ ಹಿರಿಯ ಸಹೋದರ ಅಮರ್ ನಾಯಕ್ ಅಲಿಯಾಸ್ ರಾವಣ್ ಹತನಾದ ಬಳಿಕ ಅಶ್ವಿನ್ ನಾಯಕ್ ಗ್ಯಾಂಗ್‌ ನ ನಾಯಕತ್ವ ವಹಿಸಿಕೊಂಡನು. ಜೈಲಿನಲ್ಲಿದ್ದಾಗಲೂ ಗ್ಯಾಂಗ್‌ ನ ಚಟುವಟಿಕೆಗಳನ್ನು ಮುಂದುವರಿಸಿದ್ದನು.

ಗವಳಿ ಗ್ಯಾಂಗ್‌ ನಂತೆಯೇ, ಅಶ್ವಿನ್ ನಾಯಕ್ ಗ್ಯಾಂಗ್‌ನ ಬಹುತೇಕ ಶೂಟರ್‌ ಗಳೂ ಗಿರಣಿ ಕಾರ್ಮಿಕರ ಕುಟುಂಬಗಳಿಂದ ಬಂದವರಾಗಿದ್ದರು. ರವೀಂದ್ರ ಫುಪತ್, ಅನಿಲ್ ಪರಬ್, ಜನಾರ್ದನ್ ಪರಬ್, ದಶರಥ್ ರಹಾನೆ ಮತ್ತು ಶಶಿಕಾಂತ್ ಸಗ್ವೇಕರ್ ಅಲಿಯಾಸ್ ಬಾಬು ಚಿಕ್ನಾ ಈ ಗ್ಯಾಂಗ್‌ ನ ಪ್ರಮುಖ ಶೂಟರ್‌ಗಳಾಗಿದ್ದರು.

ಅಬು ಸಲೇಮ್ ಗ್ಯಾಂಗ್

ಹಿಂದೆ ಅನೀಸ್ ಇಬ್ರಾಹಿಂ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಖಯ್ಯೂಮ್ ಅನ್ಸಾರಿ ಅಲಿಯಾಸ್ ಅಬು ಸಲೇಮ್, 1997ರಲ್ಲಿ ಡಿ-ಕಂಪೆನಿಯಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯಾಚರಣೆ ಆರಂಭಿಸಿದನು.

ಮುಂಬೈನಲ್ಲಿ ಹತ್ಯೆ ಮತ್ತು ದಾಳಿಗಳನ್ನು ನಡೆಸಲು ಉತ್ತರ ಪ್ರದೇಶದ ತನ್ನ ತವರು ಜಿಲ್ಲೆಯಾದ ಅಝಮ್‌ ಗಢದಿಂದ ನಿರುದ್ಯೋಗಿ ಯುವಕರನ್ನು ಕರೆತರುತ್ತಿದ್ದನು. ಇವರಲ್ಲಿ ಬಹುತೇಕರಿಗೆ ಅಪರಾಧ ಹಿನ್ನೆಲೆ ಇರಲಿಲ್ಲ ಅಥವಾ ಅತ್ಯಲ್ಪ ಹಿನ್ನೆಲೆಯಿತ್ತು.

ಸಲೇಮ್‌ ನ ಗುರಿಗಳಲ್ಲಿ ಚಲನಚಿತ್ರರಂಗದ ವ್ಯಕ್ತಿಗಳು ಮತ್ತು ಬಿಲ್ಡರ್‌ ಗಳು ಹೆಚ್ಚಾಗಿದ್ದರು. ಸುಲಿಗೆಗಾಗಿ ಬಂದ ಕರೆಗಳಿಗೆ ಹಣ ನೀಡಲು ನಿರಾಕರಿಸಿದವರನ್ನು ಗುರಿಯಾಗಿಸಿಕೊಳ್ಳಲಾಗುತ್ತಿತ್ತು. ಸಲೀಂ ಹಡ್ಡಿ, ದೀಪಕ್ ಸಿಂಗ್, ಮೆಹಂದಿ ಹಸನ್ ಮತ್ತು ಅಬ್ದುಲ್ ರಝಾಕ್ ಸಲೇಮ್ ಗ್ಯಾಂಗ್‌ ನ ಪ್ರಮುಖ ಶೂಟರ್‌ ಗಳಾಗಿದ್ದರು.

ಪೊಲೀಸರ ಕಠಿಣ ಕ್ರಮದಿಂದ ಕುಸಿದ ಭೂಗತ ಜಗತ್ತು

ಭೂಗತ ಗ್ಯಾಂಗ್‌ ಗಳಿಂದ ನಡೆಯುತ್ತಿದ್ದ ಹತ್ಯೆಗಳು ಹೆಚ್ಚಾದಾಗ ಮುಂಬೈ ಪೊಲೀಸರು ಅತ್ಯಂತ ಕಠಿಣ ಕ್ರಮಗಳ ಮೂಲಕ ಈ ಅಪರಾಧ ಜಾಲಗಳನ್ನು ಹತ್ತಿಕ್ಕಲು ಮುಂದಾದರು. ಗ್ಯಾಂಗ್ ನಾಯಕರು ವಿದೇಶಗಳಲ್ಲಿ ಅಥವಾ ಜೈಲಿನಲ್ಲಿ ಸುರಕ್ಷಿತವಾಗಿದ್ದರೂ, ಅವರ ಶೂಟರ್‌ ಗಳನ್ನು ಪೊಲೀಸರು ಎನ್‌ಕೌಂಟರ್‌ ಗಳಲ್ಲಿ ಹತ್ಯೆ ಮಾಡಿದರು. ಕೆಲವರನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಸೇರಿದಂತೆ ಕಠಿಣ ಕಾನೂನುಗಳ ಅಡಿಯಲ್ಲಿ ಜೈಲಿಗೆ ಕಳುಹಿಸಿದರು.

ಪೊಲೀಸರ ಕಠಿಣ ಕ್ರಮಗಳಿಂದ ಹೊಸ ಶೂಟರ್‌ ಗಳ ನೇಮಕಾತಿಗೆ ಅಡ್ಡಿಯುಂಟಾಗಿ ಮುಂಬೈ ಭೂಗತ ಜಗತ್ತು ಕುಸಿಯಿತು. ಅಪರಾಧ ಗ್ಯಾಂಗ್‌ ಗಳನ್ನು ನಡೆಸಲು ಶೂಟರ್‌ಗಳು ಅನಿವಾರ್ಯವಾಗಿದ್ದರೂ, ಅಗತ್ಯ ಮುಗಿದ ಬಳಿಕ ಅವರನ್ನು ಸುಲಭವಾಗಿ ತ್ಯಜಿಸಬಹುದಾಗಿತ್ತು. ಹಣ, ಧರ್ಮ, ರಾಷ್ಟ್ರೀಯತೆಯ ಭಾವನೆ ಹಾಗೂ ಉತ್ತಮ ಜೀವನದ ಆಮಿಷವೊಡ್ಡಿ ಯುವಕರನ್ನು ಅಪರಾಧ ಜಾಲಗಳಿಗೆ ಸೆಳೆದು, ಬಳಿಕ ಅವರನ್ನೇ ಕೈಬಿಡುವ ಭೂಗತ ಜಗತ್ತಿನ ಕ್ರೂರ ವಾಸ್ತವವನ್ನು ಈ ಇತಿಹಾಸ ತೆರೆದಿಡುತ್ತದೆ.

ಸೌಜನ್ಯ: ndtv.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor