Photo :PTI 

ಹೊಸದಿಲ್ಲಿ, ನ.1: ದಿಲ್ಲಿಯ ರಾಮ್‌ ಲೀಲಾ ಮೈದಾನದಲ್ಲಿ ನ.1ರಂದು ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಆಯೋಜಿಸಿರುವ ರ‍್ಯಾಲಿಯಿಂದ ಹಬ್ಬದ ವ್ಯಾಪಾರಕ್ಕೆ ಅಡ್ಡಿಯಾಗಲಿದೆ ಎಂಬ ವ್ಯಾಪಾರಿಗಳ ಆತಂಕಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರ‍್ಯಾಲಿಯಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ದಿಲ್ಲಿಗೆ ಆಗಮಿಸುವ ಲಕ್ಷಾಂತರ ಜನರು ಪ್ರತಿಭಟನೆಯ ನಂತರ ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವ ಮೂಲಕ ವ್ಯಾಪಾರಿಗಳಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್‌' ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, 'ನಾಳೆ ಪ್ರತಿಭಟನೆ, ಮೆರವಣಿಗೆ ಮತ್ತು ರ‍್ಯಾಲಿಯಲ್ಲಿ ಭಾಗವಹಿಸುವುದರ ಜೊತೆಗೆ ಸ್ವಲ್ಪ ಶಾಪಿಂಗ್ ಕೂಡ ಮಾಡಿ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ನೆರವಾಗಲಿದೆ' ಎಂದು ಹೇಳಿದ್ದಾರೆ.

'ನಮ್ಮ ರ‍್ಯಾಲಿಯಿಂದ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ನನಗೆ ಗೊತ್ತು. ಬಿಜೆಪಿ ಭಯಗೊಂಡಿರುವುದರಿಂದ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಆದರೆ, ಪ್ರತಿಭಟನೆಯ ಜೊತೆಗೆ ಶಾಪಿಂಗ್ ಕೂಡ ಮಾಡೋಣ' ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಘಟಕ ಪಕ್ಷಗಳು ರ‍್ಯಾಲಿಯನ್ನು ದೀಪಾವಳಿ ಮುಗಿಯುವವರೆಗೆ ಮುಂದೂಡುವಂತೆ ಮನವಿ ಮಾಡಬೇಕು ಎಂದು ವ್ಯಾಪಾರಿಗಳ ಸಂಘಟನೆಯೊಂದು ಒತ್ತಾಯಿಸಿದ ಕೆಲವೇ ಗಂಟೆಗಳಲ್ಲಿ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ದೀಪಾವಳಿ, ಛತ್ ಪೂಜೆ ಮತ್ತು ಭಾಯ್ ದೂಜ್ ಹಬ್ಬಗಳು ಸಮೀಪಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ದೇಶದ ವಿವಿಧ ಭಾಗಗಳಿಂದ ದಿಲ್ಲಿಗೆ ಆಗಮಿಸುವ ಲಕ್ಷಾಂತರ ಜನರು ಇಲ್ಲಿನ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.

'ಮೆರವಣಿಗೆ ನಡೆಯಲಿದೆ, ರ‍್ಯಾಲಿ ನಡೆಯಲಿದೆ. ಲಕ್ಷಾಂತರ ಜನರು ಸ್ಥಳೀಯ ವ್ಯಾಪಾರಿಗಳ ಸಣ್ಣ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಲಿದ್ದಾರೆ' ಎಂದು ತಿಳಿಸಿದ್ದಾರೆ. ಕೊನೆಯಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ರ‍್ಯಾಲಿ ಮುಂದೂಡಲು ವ್ಯಾಪಾರಿಗಳ ಒತ್ತಾಯ

ನವೆಂಬರ್ 6ರಂದು ಧನತೇರಸ್ ಮತ್ತು ನವೆಂಬರ್ 8ರಂದು ದೀಪಾವಳಿ ಹಬ್ಬವಿದೆ. ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಜೋರಾಗಿರುವುದರಿಂದ ಅದಕ್ಕೂ ಮುನ್ನ ಸರಕುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ನವೆಂಬರ್ 1 ಅತ್ಯಂತ ಪ್ರಮುಖ ದಿನಗಳಲ್ಲಿ ಒಂದಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ರ‍್ಯಾಲಿಗೆ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದಾರೆ. ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿಯೇ ನಿಲುಗಡೆ ಮಾಡುವಂತೆ ಆಯೋಜಕರಿಗೆ ಸೂಚಿಸಿದ್ದಾರೆ.

ಈ ನಡುವೆ, 'ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ' (ಸಿಟಿಐ) ಸಂಘಟನೆಯು 'ಇಂಡಿಯಾ' ಮೈತ್ರಿಕೂಟದ ನಾಯಕರಾದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಶಿವಸೇನೆ (ಯುಬಿಟಿ)ಯ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದೆ. ರ‍್ಯಾಲಿಯನ್ನು ನವೆಂಬರ್ 11ರ ನಂತರದ ದಿನಾಂಕಕ್ಕೆ ಮುಂದೂಡುವಂತೆ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದೆ.

ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರ ಪ್ರಕಾರ, ರಾಹುಲ್ ಗಾಂಧಿ ಅವರನ್ನು ಮೂರು ಬಾರಿ ಸಂಪರ್ಕಿಸಿ ರ‍್ಯಾಲಿಯ ದಿನಾಂಕ ಬದಲಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಸಿಟಿಐ ನೀಡಿರುವ ಮಾಹಿತಿಯಂತೆ, ಮಧ್ಯ ದಿಲ್ಲಿ ಮತ್ತು ಹಳೆಯ ದಿಲ್ಲಿಯ ಕನ್ನಾಟ್ ಪ್ಲೇಸ್, ಚಾಂದನಿ ಚೌಕ್ ಸೇರಿದಂತೆ ಸುಮಾರು 20 ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿದಿನ 10,000 ಕೋಟಿಯಿಂದ 12,000 ಕೋಟಿ ರೂ. ಮೌಲ್ಯದ ವಹಿವಾಟು ನಡೆಯುತ್ತದೆ. ರ‍್ಯಾಲಿಯಿಂದ ಈ ವಹಿವಾಟಿಗೆ ಧಕ್ಕೆಯಾಗಬಹುದು ಎಂಬ ಆತಂಕ ವ್ಯಾಪಾರಿಗಳಲ್ಲಿದೆ.

ತಾವು ರ‍್ಯಾಲಿಯ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿರುವ ಗೋಯಲ್, ಸುಮಾರು 10 ಲಕ್ಷ ಜನರು ಮತ್ತು 15,000ರಿಂದ 20,000 ವಾಹನಗಳು ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಎಂಬ ಆತಂಕವಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor