Kargil War ನಲ್ಲಿ ಯೋಧನ ಬಲಿದಾನಕ್ಕೆ 26 ವರ್ಷ: ಭರವಸೆ ಈಡೇರಿಕೆಗಾಗಿ ಕಾಯುತ್ತಿರುವ ಕುಟುಂಬ

Update: 2026-07-26 22:51 IST

ಸಾಂದರ್ಭಿಕ ಚಿತ್ರ | Photo Credit : PTI

ಹೊಸದಿಲ್ಲಿ, ಜು. 26: ಭಾರತೀಯ ಸೈನಿಕ ಅವನೀಶ್ ಯಾದವ್ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿ 26 ವರ್ಷಗಳೇ ಕಳೆದಿವೆ. ಆದರೂ ಅವರ ತ್ಯಾಗವನ್ನು ಗುರುತಿಸಿ ಸರ್ಕಾರ ನೀಡಿದ್ದ ಹಲವು ಭರವಸೆಗಳು ಇನ್ನೂ ಈಡೇರಿಲ್ಲ ಎಂದು ಅವರ ಕುಟುಂಬ ರವಿವಾರ ಆರೋಪಿಸಿದೆ.

ಉತ್ತರಪ್ರದೇಶ-ಬಿಹಾರ ಗಡಿಯಲ್ಲಿ ಸಿತಾಬ್ದಿಯಾರಾ ಗ್ರಾಮದ ದಲೇಲ್ ತೋಲಾ ನಿವಾಸಿಯಾಗಿದ್ದ ಅವನೀಶ್ ಯಾದವ್ ಅವರ ಕುಟುಂಬ 27ನೇ ‘ಕಾರ್ಗಿಲ್ ವಿಜಯ್ ದಿವಸ್’ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದೆ. 1999ರ ಸೆಪ್ಟೆಂಬರ್ 4ರಂದು ನಡೆದ ಕಾರ್ಗಿಲ್ ಯುದ್ಧದ ಸಂದರ್ಭ ಅವನೀಶ್ ಅವರು ಹುತಾತ್ಮರಾಗಿದ್ದರು ಎಂದು ಕುಟುಂಬ ತಿಳಿಸಿದೆ.

26 ವರ್ಷ ಕಳೆದರೂ ಸರ್ಕಾರ ತಮಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವನೀಶ್ ಯಾದವ್ ಅವರ ತಾಯಿ ಸೊಮಾರೊ ದೇವಿ ತಿಳಿಸಿದ್ದಾರೆ.

ಈ ಹಿಂದೆ ನೀಡಿದ ಭರವಸೆಯ ಹೊರತಾಗಿಯೂ ಅವರ ಪ್ರತಿಮೆಯನ್ನು ಸ್ಥಾಪಿಸಿಲ್ಲ. ಅವರ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿಲ್ಲ. ಪ್ರಾಥಮಿಕ ಶಾಲೆಗೆ ಅವರ ಹೆಸರನ್ನೂ ಇರಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ನಿವೃತ್ತ ಸಿಆರ್‌ಪಿಎಫ್ ಸಿಬ್ಬಂದಿಯಾಗಿರುವ ಅವನೀಶ್ ಯಾದವ್ ಅವರ ತಂದೆ ಶಿವಾಜಿ ಯಾದವ್, ಅವನೀಶ್ ಯಾದವ್ 18ನೇ ವಯಸ್ಸಿನಲ್ಲಿ ಸೇನೆ ಸೇರಿದ್ದರು. 20 ಪಾಕ್ ಸೈನಿಕರನ್ನು ಹೊಡೆದುರುಳಿಸಿ ದೇಶಕ್ಕಾಗಿ ಹುತಾತ್ಮರಾದರು ಎಂದು ಹೇಳಿದರು.

ಕೇಂದ್ರ ಸರ್ಕಾರ ಅವನೀಶ್ ಯಾದವ್ ಅವರ ಪತ್ನಿಗೆ ಪೆಟ್ರೋಲ್ ಬಂಕ್ ಮಂಜೂರು ಮಾಡಿದೆ. ಆದರೆ, ಅವರ ಕುಟುಂಬಕ್ಕೆ ಮತ್ತು ಗ್ರಾಮಕ್ಕೆ ನೀಡಿದ ಇತರ ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ಅವರು ಹೇಳಿದರು.

‘‘ಗ್ರಾಮವನ್ನು ಬದಲಾಯಿಸುವುದಾಗಿ ಭರವಸೆಗಳನ್ನು ನೀಡಲಾಗಿತ್ತು. ಆದರೆ ಪರಿಸ್ಥಿತಿ ಬದಲಾಗುವುದು ಬಿಡಿ, ಇಂದು ನಮ್ಮ ಯೋಗಕ್ಷೇಮ ವಿಚಾರಿಸಲು ಯಾರು ಕೂಡ ಬರುವುದಿಲ್ಲ’’ ಎಂದು ಶಿವಾಜಿ ಯಾದವ್ ಹೇಳಿದರು.

ಬೈರಿಯಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಶಶಿ ಮಣಿನಾಥ್ ಮಿಶ್ರಾ ಅವರು ಬಾಂಡಾದಿಂದ ವರ್ಗಾವಣೆಗೊಂಡ ಬಳಿಕ ಅಧಿಕಾರ ವಹಿಸಿಕೊಂಡಿದ್ದು, ವಿಷಯದ ಕುರಿತು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News