ಸುಪ್ರೀಂ ಕೋರ್ಟ್ (Photo: PTI)

ಹೊಸದಿಲ್ಲಿ: ನಿಕಟ ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಉಂಟಾಗಬಹುದಾದ ಆರೋಗ್ಯ ಅಪಾಯಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹ ವಿವಾಹಗಳಿಗೆ ಸಂಬಂಧಿಸಿದ ಅಪಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಸೂಕ್ತ ಕಾನೂನು ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸರಕಾರ ಪರಿಶೀಲಿಸಬೇಕು ಎಂದು ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಈ ವಿಷಯವನ್ನು ಪ್ರಸ್ತಾಪಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಚಾರ್ವಿ ಎಸ್. ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ. ಚಾರ್ವಿ ಎಸ್. ದೃಷ್ಟಿದೋಷವನ್ನು ಹೊಂದಿದ್ದಾರೆ. ಅವರು ರೆಟಿನೈಟಿಸ್ ಪಿಗ್ಮೆಂಟೋಸಾ ಮತ್ತು ಕೋನ್ ಡಿಸ್ಟ್ರೋಫಿ ಎಂಬ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಎರಡೂ ಕಾಯಿಲೆಗಳು ಕ್ರಮೇಣ ದೃಷ್ಟಿ ದೋಷ ಉಂಟುಮಾಡುವ ಆರೋಗ್ಯ ಸಮಸ್ಯೆಗಳಾಗಿವೆ.

ಅರ್ಜಿದಾರರು, ಸೋದರ ಸಂಬಂಧಿಗಳಾಗಿರುವ ತಂದೆ-ತಾಯಿಗೆ ಜನಿಸಿದ್ದು, ತಮ್ಮಲ್ಲಿರುವ ಅನುವಂಶಿಕ ಕಾಯಿಲೆಗಳಿಗೆ ಅವರ ನಡುವಿನ ರಕ್ತಸಂಬಂಧಿ ವಿವಾಹವೇ ಕಾರಣ ಎಂದು ಆರೋಪಿಸಿದ್ದಾರೆ. ಇಂತಹ ವಿವಾಹ ಪದ್ಧತಿ ಈಗಲೂ ಚಾಲ್ತಿಯಲ್ಲಿರುವ ಸಮುದಾಯಗಳಲ್ಲಿ ಈ ರೀತಿಯ ವಿವಾಹಗಳನ್ನು ತಡೆಗಟ್ಟಲು ನ್ಯಾಯಾಂಗ ಮತ್ತು ಸರಕಾರದ ಮಧ್ಯಪ್ರವೇಶವನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನಿಕಟ ರಕ್ತಸಂಬಂಧಿಗಳ ನಡುವಿನ ವಿವಾಹದಿಂದ ಜನಿಸುವ ಮಕ್ಕಳಲ್ಲಿ ಅನುವಂಶಿಕ ಕಾಯಿಲೆಗಳು ಮತ್ತು ಅಂಗವೈಕಲ್ಯ ಉಂಟಾಗುವ ಅಪಾಯಗಳ ಬಗ್ಗೆ ಅರ್ಜಿಯಲ್ಲಿ ಗಮನ ಸೆಳೆಯಲಾಗಿದೆ. ಮುಂದಿನ ಪೀಳಿಗೆಯ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಹಾಗೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor