JDS ಶಾಸಕ ಎಚ್.ಡಿ. ರೇವಣ್ಣ ವಿರುದ್ಧದ ಆರೋಪ ರದ್ದತಿ ಪ್ರಶ್ನಿಸಿ ಮೇಲ್ಮನವಿ: ಸುಪ್ರೀಂ ಕೋರ್ಟ್‌ನಿಂದ ರೇವಣ್ಣಗೆ ನೋಟಿಸ್
ಎಚ್.ಡಿ.ರೇವಣ್ಣ
ಹೊಸದಿಲ್ಲಿ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ವಿರುದ್ಧ ಮಹಿಳೆಯ ನಮ್ರತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಸೋಮವಾರ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿತು.
ರೇವಣ್ಣ ಅವರ ಮಾಜಿ ಮನೆ ಸಹಾಯಕಿ ನೀಡಿದ್ದ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಮಹಿಳೆಯ ನಮ್ರತೆಗೆ ಧಕ್ಕೆ), 354ಎ (ಲೈಂಗಿಕ ಕಿರುಕುಳ), 506 (ಕ್ರಿಮಿನಲ್ ಬೆದರಿಕೆ) ಹಾಗೂ 509 (ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡುವ ಮಾತು ಅಥವಾ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಯುತ್ತಿದ್ದ ವೇಳೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಬಳಿಕ ವಿಚಾರಣಾ ನ್ಯಾಯಾಲಯವು ಸೆಕ್ಷನ್ 354 ಹಾಗೂ 354ಎ ಅಡಿಯ ಆರೋಪಗಳನ್ನು ಪರಿಗಣಿಸಿ ವಿಚಾರಣೆಗೆ ಮುಂದಾಗಿತ್ತು.
ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 468ರಡಿ ಮೂರು ವರ್ಷದ ಮಿತಿ ಅವಧಿ ಅನ್ವಯವಾಗುತ್ತದೆ. ಈ ಪ್ರಕರಣದಲ್ಲಿ ದೂರು ಮೂರು ವರ್ಷಗಳ ಬಳಿಕ ದಾಖಲಾಗಿರುವುದರಿಂದ, ಸೆಕ್ಷನ್ 354ಎ ಅಡಿಯ ಆರೋಪದ ವಿಚಾರಣೆಗೆ ಅವಕಾಶವಿಲ್ಲ ಎಂದು ರೇವಣ್ಣ ಹೈಕೋರ್ಟ್‌ನಲ್ಲಿ ವಾದಿಸಿದ್ದರು.
ಈ ವಾದವನ್ನು ಭಾಗಶಃ ಮಾನ್ಯ ಮಾಡಿದ್ದ ಹೈಕೋರ್ಟ್, ಸೆಕ್ಷನ್ 354ಎ ಅಡಿಯ ಆರೋಪದಿಂದ ರೇವಣ್ಣ ಅವರನ್ನು ಬಿಡುಗಡೆಗೊಳಿಸಿತ್ತು. ಆದರೆ, ಸೆಕ್ಷನ್ 354 ಅಡಿಯ ಆರೋಪವನ್ನು ಮುಂದುವರಿಸಿ, ಮಿತಿ ಅವಧಿಯನ್ನು ವಿಸ್ತರಿಸಬಹುದೇ ಎಂಬುದನ್ನು ಪರಿಶೀಲಿಸಿ ಸೂಕ್ತ ಆದೇಶ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ರಾಜ್ಯ ಸರಕಾರದ ಪರ ಹಿರಿಯ ವಕೀಲ ಎಸ್. ನಾಗಮುತ್ತು ವಾದ ಮಂಡಿಸಿ, ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲೂ ಆರೋಪಗಳಿರುವುದರಿಂದ, ಮಿತಿ ಅವಧಿಯನ್ನು ಪ್ರಕರಣದಲ್ಲಿರುವ ಅತ್ಯಂತ ಗಂಭೀರ ಅಪರಾಧದ ಆಧಾರದಲ್ಲಿ ನಿರ್ಧರಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, "ಎಚ್.ಡಿ. ರೇವಣ್ಣ ವಿರುದ್ಧ ಸೆಕ್ಷನ್ 376ರಡಿ ಯಾವುದೇ ಆರೋಪವಿಲ್ಲ. ಹಾಗಿರುವಾಗ ಮತ್ತೊಬ್ಬ ಆರೋಪಿಯ ವಿರುದ್ಧದ ಅತ್ಯಾಚಾರ ಆರೋಪವನ್ನು ಆಧರಿಸಿ ರೇವಣ್ಣ ವಿರುದ್ಧದ ಆರೋಪಗಳಿಗೆ ಮಿತಿ ಅವಧಿಯನ್ನು ಹೇಗೆ ನಿರ್ಧರಿಸಬಹುದು?" ಎಂದು ಪ್ರಶ್ನಿಸಿತು.
ಇದಕ್ಕೆ ನಾಗಮುತ್ತು, ನ್ಯಾಯಾಲಯವು ವ್ಯಕ್ತಿಯ ವಿರುದ್ಧವಲ್ಲ, ಅಪರಾಧದ ವಿರುದ್ಧ ಸಂಜ್ಞಾನ ಪಡೆಯುತ್ತದೆ ಎಂದು ವಾದಿಸಿದರು.
ಆದರೆ ಈ ವಾದವನ್ನು ಒಪ್ಪದ ಪೀಠ, "ಎ ಮತ್ತು ಬಿ ವಿರುದ್ಧ ಕೊಲೆ ಆರೋಪವಿದ್ದು, ಸಿ ವಿರುದ್ಧ ಸಾಕ್ಷ್ಯ ನಾಶದ ಆರೋಪ ಮಾತ್ರ ಇದ್ದರೆ, ಎ ಮತ್ತು ಬಿ ವಿರುದ್ಧದ ಕೊಲೆ ಆರೋಪದ ಆಧಾರದಲ್ಲಿ ಸಿ ವಿರುದ್ಧವೂ ಅದೇ ರೀತಿಯ ಕಾನೂನು ಅನ್ವಯಿಸಲು ಸಾಧ್ಯವಿಲ್ಲ" ಎಂದು ಉದಾಹರಣೆ ನೀಡಿತು.
ಇದಕ್ಕೆ ನಾಗಮುತ್ತು, ಎಲ್ಲ ಆರೋಪಗಳೂ ಒಂದೇ ಘಟನೆಯಿಂದ ಉದ್ಭವಿಸಿರುವುದರಿಂದ ಒಂದೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಆದ್ದರಿಂದ ಆರೋಪಪಟ್ಟಿಯಲ್ಲಿರುವ ಅತ್ಯಂತ ಗಂಭೀರ ಅಪರಾಧವನ್ನೇ ಮಿತಿ ಅವಧಿ ನಿರ್ಧರಿಸಲು ಪರಿಗಣಿಸಬೇಕು ಎಂದು ಪುನರುಚ್ಚರಿಸಿದರು.
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಪೀಠವು ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿತು.