Photo Credit : thehindu.com

ಚೆನ್ನೈ, ನ.11: ತಮಿಳುನಾಡಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ 74.07 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ‘ಸ್ವತಂತ್ರ ಯುವ ನಾಗರಿಕ ಒಕ್ಕೂಟ’ (IYCC) ಆರೋಪಿಸಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.

ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಅಳಿಸಿರುವುದು SIR ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಎಂದು ಹೇಳಿರುವ IYCC, SIR ವಿರುದ್ಧ ರಾಷ್ಟ್ರವ್ಯಾಪಿ ಕ್ರಿಯಾ ದಿನದ ಅಂಗವಾಗಿ ನ.26ರಂದು ಇಲ್ಲಿಯ ಅಣ್ಣಾ ಸಲೈನಲ್ಲಿ ಬೃಹತ್ ರ್ಯಾ ಲಿ ನಡೆಸುವುದಾಗಿ ಘೋಷಿಸಿದೆ.

IYCC ‘ಪೀಪಲ್ ಅಗೇನ್ಸ್ಟ್ SIR’ ರಾಷ್ಟ್ರೀಯ ವೇದಿಕೆಯ ಭಾಗವಾಗಿದೆ.

ಒಕ್ಕೂಟವು ಚೆನ್ನೈ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಗಾಯಕ, ಸಾಹಿತಿ ಮತ್ತು ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ-ರಾಜಕೀಯ ಕಾರ್ಯಕರ್ತೆ, IYCCಯ ಸಹ ಸಂಚಾಲಕಿ ರಾಧಿಕಾ ಗಣೇಶ್ ಉಪಸ್ಥಿತರಿದ್ದರು.

SIR ಯಾವುದೇ ಸಾಂವಿಧಾನಿಕ ಆಧಾರವಿಲ್ಲದ ಬಿಜೆಪಿ-RSS ಯೋಜನೆಯಾಗಿದೆ ಎಂದು ಆರೋಪಿಸಿದ ರಾಧಿಕಾ ಗಣೇಶ್, ಇದು ರಾಜ್ಯದ ಒಟ್ಟು ಮತದಾರರ ಶೇ.11.5ರಷ್ಟಿರುವ 74.07 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲು ಕಾರಣವಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ಬಿಕ್ಕಟ್ಟು ಎಂದು ಬಣ್ಣಿಸಿದರು.

ಮತದಾರರ ಪಟ್ಟಿಯಿಂದ ಕೈಬಿಡಲಾದ ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ಮರುಸ್ಥಾಪಿಸಬೇಕು ಮತ್ತು SIR ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಪರಕಾಲ ಪ್ರಭಾಕರ್ ಒತ್ತಾಯಿಸಿದರು.

SIR ಅನ್ನು ಮತದಾರರಲ್ಲಿ ಗೊಂದಲ ಉಂಟುಮಾಡಲು ಮತ್ತು ಅವರನ್ನು ಹೊರಗಿಡಲು ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ ಟಿ.ಎಂ.ಕೃಷ್ಣ, ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಸೇರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಮತದಾರರ ಹೆಸರುಗಳನ್ನು ತೆಗೆದುಹಾಕುವುದರ ಮೇಲೆಯೇ ಈ ಪ್ರಕ್ರಿಯೆಯು ಗಮನಹರಿಸಿದೆ ಎಂದು ದೂರಿದರು.

ರಾಜಕೀಯ ಪಕ್ಷಗಳು ಈ ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ಪ್ರಜಾಪ್ರಭುತ್ವ ವಿರೋಧಿ ಕ್ರಮದ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor