×
Ad

“ಕಳ್ಳತನ ನಡೆದರೆ ಶಾಪಿಂಗ್ ಮಾಲ್ ಅನ್ನೇ ಮುಚ್ಚಬೇಕು”: ನಿರ್ಬಂಧದ ಬಗ್ಗೆ ಕೇಂದ್ರ ಸರಕಾರವನ್ನು ಟ್ರೋಲ್ ಮಾಡಿದ ಟೆಲಿಗ್ರಾಂ

Update: 2026-06-17 16:55 IST

ಹೊಸದಿಲ್ಲಿ: NEET-UG ಮರುಪರೀಕ್ಷೆಗೆ ಮುನ್ನ ಕೇಂದ್ರ ಸರಕಾರ ಟೆಲಿಗ್ರಾಂ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಸರಕಾರದ ಕ್ರಮವನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿರುವುದು, ಟ್ರೋಲ್ ಮಾಡುತ್ತಿರುವುದು ಕಂಡು ಬಂದಿದೆ.

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಟೆಲಿಗ್ರಾಮ್ ಅನ್ನು ನಿರ್ಬಂಧಿಸುವುದೇ ಮಾಸ್ಟರ್ಸ್ಟ್ರೋಕ್ ಆಗಿದೆಯೇ?" ಎಂದು ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಟೆಲಿಗ್ರಾಂ, "ಒಂದು ಶಾಪಿಂಗ್ ಮಾಲ್‌ನಲ್ಲಿ ಕಳ್ಳತನ ನಡೆದಿರಬಹುದು ಎಂಬ ಕಾರಣಕ್ಕೆ ಎಲ್ಲಾ ಶಾಪಿಂಗ್ ಮಾಲ್‌ಗಳನ್ನು ಮುಚ್ಚಬೇಕು. ಹಾಗೆಯೇ, ಯಾರೋ ಅತಿವೇಗದಲ್ಲಿ ವಾಹನ ಚಲಾಯಿಸಿದ್ದಾರೆ ಎಂದು ಎಲ್ಲಾ ರಸ್ತೆಗಳನ್ನು ಕೂಡ ಮುಚ್ಚಬೇಕು" ಎಂದು ವ್ಯಂಗ್ಯವಾಗಿ ಉತ್ತರಿಸಿದೆ.

ಅಪರಾಧದ ಬಗ್ಗೆ ಮಾಹಿತಿ ದೊರೆತಾಗ ಶಾಪಿಂಗ್ ಮಾಲ್‌ಗಳು ಕ್ರಮ ಕೈಗೊಳ್ಳುತ್ತವೆ. ಟೆಲಿಗ್ರಾಂ ಕೂಡ ಅದೇ ರೀತಿ ಕಾರ್ಯನಿರ್ವಹಿಸುತ್ತದೆ. ಎಷ್ಟೇ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇದ್ದರೂ ದುರುಪಯೋಗದ ಘಟನೆಗಳು ಸಂಭವಿಸಬಹುದು ಎಂದು ಬರೆದಿದೆ.

ಇದಲ್ಲದೆ, "ಭಾರತದಲ್ಲಿ ಟೆಲಿಗ್ರಾಂ ಇನ್ನೂ ಕಾರ್ಯನಿರ್ವಹಿಸುತ್ತಿದೆಯೇ?" ಎಂದು ಒಬ್ಬ ಬಳಕೆದಾರ ಕೇಳಿದ ಪ್ರಶ್ನೆಗೆ ಟೆಲಿಗ್ರಾಂ ಅಧಿಕೃತ ಖಾತೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ.

"ನಿಮ್ಮ ಸರಕಾರ ಎಷ್ಟು ಸಮರ್ಥವಾಗಿದೆ ಎಂಬುದಕ್ಕೆ ಅವರಿಗೆ ಧನ್ಯವಾದ ಹೇಳುವುದನ್ನು ಮರೆಯಬೇಡಿ!” ಎಂದು ಟೆಲಿಗ್ರಾಂ ತನ್ನ ಪೋಸ್ಟ್ ನಲ್ಲಿ ಬರೆದಿರುವುದು ಕಂಡು ಬಂದಿದೆ.

ತೀವ್ರಗಾಮಿ ಗುಂಪುಗಳು ಪ್ಲಾಟ್ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಟೆಲಿಗ್ರಾಮ್, 2026ರಲ್ಲಿ ಟೆಲಿಗ್ರಾಮ್ 1,09,351 ಭಯೋತ್ಪಾದನೆಗೆ ಸಂಬಂಧಿಸಿದ ಖಾತೆಗಳನ್ನು ನಿರ್ಬಂಧಿಸಿದೆ ಎಂದು ಹೇಳಿದೆ.

2016ರಿಂದ ಭಯೋತ್ಪಾದಕ ವಿಷಯವನ್ನು ತೆಗೆದುಹಾಕುವ ಕುರಿತು ವೇದಿಕೆಯು ದೈನಂದಿನ ವರದಿಗಳನ್ನು ಪ್ರಕಟಿಸುತ್ತಿದೆ ಎಂದು ಹೇಳಿದೆ.

"ಭಾರತ ಸರಕಾರವನ್ನು ಟೆಲಿಗ್ರಾಂ ಟ್ರೋಲ್ ಮಾಡುತ್ತದೆ ಎಂದು ನಾನು ಊಹಿಸಿರಲಿಲ್ಲ" ಎಂದು ಎಕ್ಸ್‌ ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದರು. ಇದಕ್ಕೆ ಟೆಲಿಗ್ರಾಂ ಅಧಿಕೃತ ಖಾತೆ, "ನನ್ನ ಪಟ್ಟಿಯಲ್ಲಿಯೂ ಅದು ಇರಲಿಲ್ಲ" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ.

ಇದರ ನಡುವೆ, ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ ಕೂಡ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ. ಕೇಂದ್ರ ಸರಕಾರದ ನಿರ್ಬಂಧದ ಕ್ರಮವು 15 ಕೋಟಿಗೂ ಅಧಿಕ ಕಾನೂನುಬದ್ಧ ಬಳಕೆದಾರರ ಮೇಲೆ ಅನ್ಯಾಯವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News