ಪಾಶ್ಚಾತ್ಯರ ಎಡ–ಬಲ ರಾಜಕೀಯ ಚೌಕಟ್ಟು ಭಾರತಕ್ಕೆ ಅನ್ವಯಿಸುವುದಿಲ್ಲ: ರಾಹುಲ್ ಗಾಂಧಿ
ಚೀನಾದ ಉತ್ಪಾದನಾ ಮಾದರಿಯಿಂದ ಕಲಿಯಬೇಕು; IIT, IIM ಪದವೀಧರರಿಗೂ ಉದ್ಯೋಗದ ಸಮಸ್ಯೆ
Photo: x.com/INCIndia
ಹೊಸದಿಲ್ಲಿ: ಭಾರತದ ರಾಜಕೀಯಕ್ಕೆ ಪಾಶ್ಚಾತ್ಯರ ಎಡ–ಬಲ ಪರಿಕಲ್ಪನೆ ಸೂಕ್ತವಲ್ಲ. ಚೀನಾದ ಉತ್ಪಾದನಾ ಶಕ್ತಿಯಿಂದ ಭಾರತ ಕಲಿಯಬೇಕಾದರೂ, ಅದರ ರಾಜಕೀಯ ಮಾದರಿಯನ್ನು ಅನುಸರಿಸದೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನ್ಯೂಯಾರ್ಕ್ ಟೈಮ್ಸ್ ಅಂಕಣಕಾರ್ತಿ ಲಿಡಿಯಾ ಪೋಲ್‌ಗ್ರೆನ್ ಅವರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವ, ನಿರುದ್ಯೋಗ, ಸಂಪತ್ತಿನ ಕೇಂದ್ರೀಕರಣ, ಚೀನಾದ ಉತ್ಪಾದನಾ ಮಾದರಿ ಹಾಗೂ ಭಾರತ್ ಜೋಡೋ ಯಾತ್ರೆಯ ಅನುಭವಗಳ ಕುರಿತು ಮಾತನಾಡಿದರು.
“ಭಾರತದಲ್ಲಿ ಎಡ ಮತ್ತು ಬಲ ಎಂಬುದಿಲ್ಲ. ಎಡ ಮತ್ತು ಬಲ ಎಂಬುದು ಪಾಶ್ಚಾತ್ಯ ಪರಿಕಲ್ಪನೆ” ಎಂದು ರಾಹುಲ್ ಗಾಂಧಿ ಹೇಳಿದರು. ಭಾರತದ ರಾಜಕೀಯದಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳಿವೆ. ಕಾಂಗ್ರೆಸ್ ನ ಮೂಲ ತತ್ವ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡುವುದಾಗಿದೆ. ಪ್ರತಿಯೊಬ್ಬರ ಧ್ವನಿಗೂ ಸಮಾನ ಮಹತ್ವವಿದೆ. ಬಿಜೆಪಿ ಪ್ರತಿನಿಧಿಸುವ ದೃಷ್ಟಿಕೋನವೂ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಅಸ್ತಿತ್ವದಲ್ಲಿದೆ ಎಂದು ಅವರು ಹೇಳಿದರು.
ಕಳೆದ ಸುಮಾರು ಒಂದು ದಶಕದಿಂದ ಆದಿವಾಸಿಗಳು, ದಲಿತರು ಮತ್ತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಪತ್ತು ಮತ್ತು ರಾಜಕೀಯ ಅಧಿಕಾರ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆ, ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ಭಯ ಹಾಗೂ ವಿದ್ಯಾರ್ಥಿ ಚಳವಳಿಗಳ ಸ್ಥಿತಿಯ ಬಗ್ಗೆಯೂ ಅವರು ಮಾತನಾಡಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ ಎಂದರು.
IIT, IIM ಪದವೀಧರರಿಗೂ ಉದ್ಯೋಗವಿಲ್ಲ
ಶಿಕ್ಷಣ ಪಡೆದ ಯುವಜನರಿಗೂ ಉದ್ಯೋಗ ಸಿಗದಿರುವುದು ದೇಶದ ಗಂಭೀರ ಸಮಸ್ಯೆ ಎಂದು ರಾಹುಲ್ ಗಾಂಧಿ ಹೇಳಿದರು. IIT ಮತ್ತು IIMಗಳಲ್ಲಿ ಓದಿದವರಿಗೂ ಉದ್ಯೋಗ ದೊರೆಯದಿದ್ದರೆ ಅವರ ಭವಿಷ್ಯವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ದಿಲ್ಲಿ ರೈಲು ನಿಲ್ದಾಣದಲ್ಲಿ ಎಂಜಿನಿಯರ್ ಒಬ್ಬರು ಕೂಲಿಯಾಗಿ ಕೆಲಸ ಮಾಡುತ್ತಿರುವ ಉದಾಹರಣೆಯನ್ನು ಉಲ್ಲೇಖಿಸಿದ ಅವರು, Make in India ಮತ್ತು Startup India ಯೋಜನೆಗಳಿಂದ ಬಂದಿರುವ ಫಲಿತಾಂಶಗಳ ಕುರಿತು ಪ್ರಶ್ನಿಸಿದರು. ನೋಟು ಅಮಾನ್ಯೀಕರಣ, GST ಮತ್ತು ಕೋವಿಡ್‌ನಿಂದ ಉಂಟಾದ ಆರ್ಥಿಕ ಸಂಕಷ್ಟಗಳು ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿವೆ ಎಂದರು.
ಚೀನಾದ ಉತ್ಪಾದನಾ ಮಾದರಿಯಿಂದ ಕಲಿಯಬೇಕು
ಉತ್ಪಾದನಾ ಕ್ಷೇತ್ರದಲ್ಲಿ ಚೀನಾ ಮುಂಚೂಣಿಯಲ್ಲಿದೆ. ವಿದ್ಯುತ್ ವಾಹನಗಳು ಮತ್ತು ಹೊಸ ತಂತ್ರಜ್ಞಾನಗಳಲ್ಲಿಯೂ ಅದು ಪ್ರಗತಿ ಸಾಧಿಸಿದೆ. ಆದರೆ ಚೀನಾದಲ್ಲಿರುವ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವವಲ್ಲ. ಅಲ್ಲಿನ ನೀತಿಗಳು ಜನರ ಮೇಲೆ ಕಠಿಣವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತವು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಚೀನಾದ ಮಾದರಿಯಿಂದ ಕಲಿಯಬೇಕು. ಆದರೆ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡೇ ಅಭಿವೃದ್ಧಿ ಸಾಧಿಸಬೇಕು ಎಂದು ಪ್ರತಿಪಾದಿಸಿದರು.
ಇಂಧನ ಪರಿವರ್ತನೆಗಳು ಜಾಗತಿಕ ಶಕ್ತಿಗಳ ಬೆಳವಣಿಗೆಯನ್ನು ನಿರ್ಧರಿಸುತ್ತವೆ. ಬ್ರಿಟನ್ ಕಲ್ಲಿದ್ದಲು ಮತ್ತು ಉಗಿ ತಂತ್ರಜ್ಞಾನದಿಂದ, ಅಮೆರಿಕ ಪೆಟ್ರೋಲ್ ಮತ್ತು ಆಂತರಿಕ ದಹನ ಇಂಜಿನ್ ನಿಂದ ಪ್ರಗತಿ ಸಾಧಿಸಿದ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಬಹುಸಂಸ್ಕೃತಿಯ ಸಮಾಜದಲ್ಲಿ ಉದ್ಯೋಗ ದೊರೆತಾಗ ಮಾತ್ರ ಜನರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ. ಉದ್ಯೋಗ ಅತ್ಯಂತ ಮುಖ್ಯ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.
ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಕಲಿತ ರಾಜಕೀಯ ಚೌಕಟ್ಟುಗಳು ಭಾರತದ ವಾಸ್ತವತೆಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ ಎಂದ ಅವರು, ಭಾರತ್ ಜೋಡೋ ಯಾತ್ರೆ ದೇಶದ ಗುರುತನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡರು.
ಸುಮಾರು 4,000 ಕಿ.ಮೀ. ದೂರದ ಭಾರತ್ ಜೋಡೋ ಯಾತ್ರೆ ತಮ್ಮ ಜೀವನದ ದೃಷ್ಟಿಕೋನವನ್ನು ಬದಲಿಸಿತು. ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸಲು ಕಾಂಗ್ರೆಸ್ ಆರಂಭಿಸಿದ ಬಳಿಕ ಯಾತ್ರೆ ನಡೆಸುವ ನಿರ್ಧಾರ ಕೈಗೊಂಡೆ. ಯಾತ್ರೆಯು ದೇಶದ ಜನರ ಜೀವನ, ಅವರ ಸಮಸ್ಯೆಗಳು ಮತ್ತು ಭಾರತದ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ನೆರವಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.