×
Ad

Air India ದುರಂತಕ್ಕೆ ವರ್ಷ | ಗಡಿ ದಾಟಿದ ಮನುಷ್ಯತ್ವ; ಲಂಡನ್ ನಿಂದ ಪ್ರತಿದಿನ ಬರುತ್ತದೆ ಒಂದು ಕರೆ...

‘ಕೈಸೆ ಹೋ ಆಪ್? ಟೀಕ್ ಹೋ?’ ಎಂದು ವಿಚಾರಿಸುವ ಪಾಕಿಸ್ತಾನಿ ಸಹೋದ್ಯೋಗಿ ಉಮರ್‌; ಮಗನನ್ನು ಕಳೆದುಕೊಂಡ ಗುಜರಾತ್ ನ ರೈತ ಸವಧನ್ಭಾಯ್ ಚೌಧರಿ ಕುಟುಂಬಕ್ಕೆ ಸಾಂತ್ವನದ ಆಸರೆ

Update: 2026-06-10 22:40 IST

Photo Credit : indianexpress.com

✍️ indianexpress. com – ರಿತು ಶರ್ಮ, ವರದಿ

ಅಹಮದಾಬಾದ್: ಜೂನ್ 12, 2025ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ತಮ್ಮ ಹಿರಿಯ ಮಗ ಕಮಲೇಶ್ ಹಾಗೂ ಸೊಸೆ ಧಾಪುಬೆನ್ ಅವರನ್ನು ಕಳೆದುಕೊಂಡ ಗುಜರಾತ್ ನ ರೈತ ಸವಧನ್ಭಾಯ್ ಚೌಧರಿ ಅವರಿಗೆ ಕಳೆದ ಒಂದು ವರ್ಷದಿಂದ ಪ್ರತಿದಿನ ಒಂದು ಕರೆ ಬರುತ್ತಿದೆ.

ಲಂಡನ್ ನಿಂದ ಬರುವ ಆ ಕರೆಯ ಆರಂಭ ಯಾವಾಗಲೂ ಒಂದೇ ರೀತಿಯದು. ‘ಕೈಸೆ ಹೋ ಆಪ್? ಟೀಕ್ ಹೋ?’ ; ಈ ಪ್ರಶ್ನೆ ಕೇಳುವವರು ಕಮಲೇಶ್ ಅವರ ಪಾಕಿಸ್ತಾನ ಮೂಲದ ಸಹೋದ್ಯೋಗಿ ಉಮರ್ ಅಲಿ.

ಅಹಮದಾಬಾದ್ ನಿಂದ ಲಂಡನ್ ನ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ 2025ರ ಜೂನ್ 12ರಂದು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಮೃತಪಟ್ಟಿದ್ದರು. ಮೃತಪಟ್ಟವರಲ್ಲಿ 26 ವರ್ಷದ ಕಮಲೇಶ್ ಚೌಧರಿ ಹಾಗೂ ಅವರ ಪತ್ನಿ ಧಾಪುಬೆನ್ ಕೂಡ ಸೇರಿದ್ದರು.

ಅಪಘಾತದ ಬಳಿಕ ಕಮಲೇಶ್ ಕೆಲಸ ಮಾಡುತ್ತಿದ್ದ ಲಂಡನ್ ನ ಅಂಗಡಿಯ ಮಾಲೀಕ ಅಂಗತ್ ಸಿಂಗ್ (ತನ್ನಿಭಾಯ್) ಅವರ ಸೂಚನೆಯ ಮೇರೆಗೆ, ಕಮಲೇಶ್ ಅವರ ಪಾಕಿಸ್ತಾನ ಮೂಲದ ಸಹೋದ್ಯೋಗಿ ಉಮರ್ ಅಲಿ ಸವಧನ್ಭಾಯ್ ಅವರನ್ನು ಸಂಪರ್ಕಿಸಿದ್ದರು. ಕಮಲೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಉದ್ದೇಶದಿಂದ ಆರಂಭವಾದ ಆ ದೂರವಾಣಿ ಸಂಪರ್ಕ, ಕ್ರಮೇಣ ಆತ್ಮೀಯ ಬಾಂಧವ್ಯವಾಗಿ ಬೆಳೆಯಿತು. ಕಳೆದ ಒಂದು ವರ್ಷದಿಂದ ಉಮರ್ ಪ್ರತಿದಿನ ಕರೆ ಅಥವಾ ಸಂದೇಶದ ಮೂಲಕ ಸವಧನ್ಭಾಯ್ ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

ದುರಂತದ ನಂತರದ ದಿನಗಳಲ್ಲಿ ಲಂಡನ್ ನಲ್ಲಿದ್ದ ಉಮರ್ ಅಲಿ ಮತ್ತು ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಥಾವರ್ ಗ್ರಾಮದ ರೈತ ಸವಧನ್ಭಾಯ್ ನಡುವಿನ ಪರಿಚಯ, ಕಾಲಕ್ರಮೇಣ ಅಚ್ಚರಿಯ ಮಾನವೀಯ ಬಾಂಧವ್ಯವಾಗಿ ರೂಪುಗೊಂಡಿದೆ. ಪ್ರತಿದಿನ ಕೆಲಸಕ್ಕೆ ತೆರಳುವ ಮುನ್ನ ಉಮರ್ ಅಲಿ ಸವಧನ್ಭಾಯ್ ಅವರಿಗೆ ಕರೆ ಮಾಡುತ್ತಾರೆ. ಕೆಲವೊಮ್ಮೆ ಆರೋಗ್ಯದ ಬಗ್ಗೆ, ಕೆಲವೊಮ್ಮೆ ಹವಾಮಾನದ ಬಗ್ಗೆ, ಇನ್ನೊಮ್ಮೆ ಕೃಷಿಯ ಬಗ್ಗೆ ಮಾತನಾಡುತ್ತಾರೆ.

‘ನನ್ನ ಕಾಲ್ಬೆರಳ ಉಗುರಿನಲ್ಲಿ ಸ್ವಲ್ಪ ನೋವಿದ್ದರೂ ಉಮರ್ ಕರೆ ಮಾಡಿ ವಿಚಾರಿಸುತ್ತಾರೆ. ಅವರ ಮನೆಯಲ್ಲೂ ಯಾರಿಗಾದರೂ ಜ್ವರ ಬಂದರೂ ನಮಗೆ ಗೊತ್ತಾಗುತ್ತದೆ’ ಎಂದು ಸವಧನ್ಭಾಯ್ ಹೇಳುತ್ತಾರೆ.

ಲಂಡನ್ ನಲ್ಲಿರುವ ಅಲಂಕಾರಿಕ ವಸ್ತುಗಳ ಅಂಗಡಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಕಮಲೇಶ್ ಮತ್ತು ಉಮರ್ ಅತ್ಯಂತ ಆತ್ಮೀಯ ಸ್ನೇಹಿತರಾಗಿರಲಿಲ್ಲ. ಆದರೆ ದುರಂತದ ಸುದ್ದಿ ಕೇಳಿದ ಕ್ಷಣದಿಂದಲೇ ಉಮರ್ ಕುಟುಂಬದೊಂದಿಗೆ ನಂಟು ಬೆಳೆಸಲು ಆರಂಭಿಸಿದರು.

ಲಂಡನ್ ನಿಂದ ಮಾತನಾಡಿದ ಉಮರ್, ‘ದೇವರು ಈ ಸಂಬಂಧವನ್ನು ಸಾಧ್ಯವಾಗಿಸಿದ್ದಾನೆ. ಕಮಲೇಶ್ ಕೇವಲ ಮಾಧ್ಯಮ. ಈ ಕುಟುಂಬದೊಂದಿಗೆ ಇಷ್ಟು ಹತ್ತಿರವಾಗುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ಅವರೊಂದಿಗೆ ಮಾತನಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಹೇಳುತ್ತಾರೆ.

►ಕಾಡುತ್ತಲೇ ಇರುವ ವಿಮಾನ ನಿಲ್ದಾಣದ ಕೊನೆಯ ವೀಡಿಯೋ

ದುರಂತದ ದಿನ ಸವಧನ್ಭಾಯ್ ಮತ್ತು ಅವರ ಪತ್ನಿ ರತ್ನಿಬೆನ್ ಮಗ ಮತ್ತು ಸೊಸೆಯನ್ನು ಬೀಳ್ಕೊಡಲು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಆ ದಿನ ತೆಗೆದ 30 ಸೆಕೆಂಡುಗಳ ವೀಡಿಯೋ ಈಗ ಕುಟುಂಬದ ಅಮೂಲ್ಯ ನೆನಪು. ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಸಾಂಪ್ರದಾಯಿಕ ಉಡುಗೆಯಲ್ಲಿ, ಗುಲಾಬಿ ಬಣ್ಣದ ಓಢಣಿಯಿಂದ ತಲೆ ಮತ್ತು ಮುಖ ಮುಚ್ಚಿಕೊಂಡಿದ್ದ ಧಾಪುಬೆನ್ ಹಾಗೂ ಟಿ–ಶರ್ಟ್, ಜೀನ್ಸ್ ಧರಿಸಿದ್ದ ಕಮಲೇಶ್ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

"ನಾನು ಸಾಮಾನ್ಯವಾಗಿ ವೀಡಿಯೋ ತೆಗೆಯುವುದಿಲ್ಲ. ಆದರೆ ಆ ದಿನ ಏಕೆ ತೆಗೆದೆ ಎಂದು ಗೊತ್ತಿಲ್ಲ. ಬಹುಶಃ ನನ್ನ ಸೊಸೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿದ್ದಳು ಎಂಬ ಕಾರಣ ಇರಬಹುದು," ಎಂದು ಸವಧನ್ಭಾಯ್ ಹೇಳುತ್ತಾರೆ.

ಅದು ಸವಧನ್ಭಾಯ್ ಮತ್ತು ರತ್ನಿಬೆನ್ ಅವರ ಮೊದಲ ಅಹಮದಾಬಾದ್ ಪ್ರವಾಸವೂ ಆಗಿತ್ತು.

ಅಪಘಾತದ ಸುದ್ದಿ ತಿಳಿದ ತಕ್ಷಣ ಅವರು ಕಾರು ತಿರುಗಿಸಿ ಅಹಮದಾಬಾದ್‌ ಗೆ ಧಾವಿಸಿದರು. ತಮ್ಮ ಮಕ್ಕಳು ಹೇಗಾದರೂ ಬದುಕಿರಬಹುದು ಎಂಬ ಆಸೆಯಲ್ಲಿದ್ದರು. ಆದರೆ ವಿಮಾನವು ಬಿ.ಜೆ. ವೈದ್ಯಕೀಯ ಕಾಲೇಜಿನ ಮೆಸ್ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಕಮಲೇಶ್ ಮತ್ತು ಧಾಪುಬೆನ್ ಕೂಡ ಮೃತಪಟ್ಟವರ ಪಟ್ಟಿಯಲ್ಲಿ ಸೇರಿದ್ದರು.

2022ರ ಸೆಪ್ಟೆಂಬರ್‌ ನಿಂದ ಕಮಲೇಶ್ ಲಂಡನ್ ನಲ್ಲಿ ಕೆಲಸ ಮಾಡುತ್ತಿದ್ದರು. 2024ರ ನವೆಂಬರ್‌ ನಲ್ಲಿ ಮದುವೆಗಾಗಿ ಭಾರತಕ್ಕೆ ಬಂದ ಅವರು, ಕೆಲ ತಿಂಗಳ ಬಳಿಕ ಧಾಪುಬೆನ್ ಅವರನ್ನು ಕರೆದುಕೊಂಡು ಹೋಗಲು ಮತ್ತೆ ಭಾರತಕ್ಕೆ ಆಗಮಿಸಿದ್ದರು. ಐದು ವರ್ಷಗಳಲ್ಲಿ ಸ್ವಂತ ಉದ್ಯಮ ಆರಂಭಿಸುವ ಕನಸು ಅವರದ್ದಾಗಿತ್ತು. Agricultural business management ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ತಮ್ಮ ಕಿರಿಯ ಸಹೋದರ ಹಿತೇಶ್ ಅವರನ್ನು ಕೂಡ ಲಂಡನ್ ಗೆ ಕರೆಸಿಕೊಳ್ಳುವ ಯೋಜನೆ ಹೊಂದಿದ್ದರು.‘ಈಗ ಆ ವಿಚಾರವನ್ನೇ ನೆನೆಸಿಕೊಂಡರೂ ಮೈ ನಡುಗುತ್ತದೆ’ ಎಂದು ಕುಟುಂಬದ ಸದಸ್ಯ ದೇವ್ಕರನ್ ಚೌಧರಿ ಹೇಳುತ್ತಾರೆ.

►ಸುಟ್ಟ ನೆನಪುಗಳ ಹಸ್ತಾಂತರ!

ಈ ವರ್ಷದ ಜನವರಿ 6ರಂದು ಸವಧನ್ಭಾಯ್ ಮತ್ತು ಅವರ ಸೋದರಳಿಯ ಈಶ್ವರ್ ಚೌಧರಿ ಅಹಮದಾಬಾದ್ಗೆ ತೆರಳಿದ್ದರು. ಏರ್ ಇಂಡಿಯಾ ಸ್ಥಾಪಿಸಿದ್ದ ಫ್ಯಾಮಿಲಿ ರಿಟರ್ನ್ಸ್ ಸೆಂಟರ್ ನಲ್ಲಿ ಅಪಘಾತ ಸ್ಥಳದಿಂದ ಸಂಗ್ರಹಿಸಿದ ವೈಯಕ್ತಿಕ ವಸ್ತುಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿತ್ತು.

ಹೋಟೆಲ್ನ ಒಂದು ಕೊಠಡಿಯಲ್ಲಿ ಸವಧನ್ಭಾಯ್ ತಮ್ಮ ಕೈಯಲ್ಲಿ ಕೆಲವು ಜಿಪ್-ಲಾಕ್ ಚೀಲಗಳನ್ನು ಹಿಡಿದು ಅಳುತ್ತಿದ್ದರು. ಒಂದು ಚೀಲದಲ್ಲಿ ಕಮಲೇಶ್ ಅವರ ಸುಟ್ಟುಹೋದ ಮದುವೆಯ ಆಲ್ಬಮ್ ಇತ್ತು. ಮತ್ತೊಂದರಲ್ಲಿ ನವವಿವಾಹಿತರ ಫೋಟೋಗಳಿದ್ದ ಡೆಸ್ಕ್ ಕ್ಯಾಲೆಂಡರ್ ಇತ್ತು. ಅದರ ಪುಟಗಳಲ್ಲಿ "ಒಂದೇ ಭಾವನೆಯ ಎರಡು ಆತ್ಮಗಳು, ಒಂದಾಗಿ ಬಡಿಯುವ ಎರಡು ಹೃದಯಗಳು" ಎಂಬ ಸಾಲುಗಳೊಂದಿಗೆ ದಂಪತಿಯ ಫೊಟೋ ಮುದ್ರಿತವಾಗಿದ್ದವು.

ಇತರ ಚೀಲಗಳಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮದುವೆ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳು ಸುಟ್ಟುಹೋಗಿದ್ದ ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದ ಸ್ಥಿತಿಯಲ್ಲಿ ಸಿಕ್ಕಿದ್ದವು.

‘ಕಮಲೇಶ್ ಮುಟ್ಟಿದ ಕೊನೆಯ ವಸ್ತುಗಳು ಇವು. ಇವುಗಳನ್ನು ಜೀವನಪೂರ್ತಿ ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ’ ಎಂದು ಅವರು ಎದೆಗವುಚಿಕೊಳ್ಳುತ್ತಾರೆ. ಧಾಪುಬೆನ್ ಅವರ ಕಾಲಿನ ಚೈನ್ ಕಿವಿಯೋಲೆ ಹಾಗೂ ಕಮಲೇಶ್ ಅವರ ಟಿ–ಶರ್ಟ್ನ ಕೆಲವು ಭಾಗಗಳನ್ನೂ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

ಅಪಘಾತ ಸ್ಥಳದಲ್ಲಿ ಪತ್ತೆಯಾದರೂ, ಯಾವುದೇ ಪ್ರಯಾಣಿಕರಿಗೆ ಖಚಿತವಾಗಿ ಸಂಬಂಧಿಸಲಾಗದ ವಸ್ತುಗಳ ವಿವರಗಳನ್ನು ಏರ್ ಇಂಡಿಯಾ ವಿಶೇಷ ಪೋರ್ಟಲ್ ನಲ್ಲಿ ಪ್ರಕಟಿಸಿತ್ತು. ಆ ಪೋರ್ಟಲ್ ನಲ್ಲಿ ಧಾಪುಬೆನ್ ಅವರಿಗೆ ದುರಂತಕ್ಕೂ ಒಂದು ದಿನ ಮೊದಲು ಖರೀದಿಸಿದ್ದ ಚಿನ್ನದ ಲಾಕೆಟ್, ಎರಡು ಕಲಶಗಳು ಹಾಗೂ ಶಿವನ ಕೆತ್ತನೆಯಿದ್ದ ಬೆಳ್ಳಿ ನಾಣ್ಯವನ್ನು ಕುಟುಂಬ ಗುರುತಿಸಿತ್ತು.

"ಮಾರ್ಚ್ನಲ್ಲಿ ಕಲಶಗಳನ್ನು ಮಾತ್ರ ನಮಗೆ ಹಸ್ತಾಂತರಿಸಿದರು. ಉಳಿದ ವಸ್ತುಗಳು ನಮ್ಮದೇ ಎಂಬುದಕ್ಕೆ ಪುರಾವೆ ನೀಡುವಂತೆ ಕೇಳಿದರು. ಆದರೆ ಅದನ್ನು ನಾವು ಹೇಗೆ ಸಾಬೀತುಪಡಿಸಲು ಸಾಧ್ಯ? ಹೀಗಾಗಿ ಆ ವಸ್ತುಗಳನ್ನು ಪಡೆದುಕೊಳ್ಳದೆ ಬಿಟ್ಟೆವು," ಎಂದು ರತ್ನಿಬೆನ್ ಹೇಳುತ್ತಾರೆ.

ಕಮಲೇಶ್ ಅವರ ಉದ್ಯೋಗದಾತ ಅಂಗತ್ ಸಿಂಗ್ ಅಲಿಯಾಸ್ ‘ತನ್ನಿಭಾಯ್’ ಅವರ ಸೂಚನೆಯಂತೆ ಉಮರ್ ಅಲಿ ಮೊದಲ ಬಾರಿಗೆ ಸವಧನ್ಭಾಯ್ ಅವರಿಗೆ ಕರೆ ಮಾಡಿದ್ದರು. ‘ಮೇರಾ ಬೇಟಾ ಚಲಾ ಗಯಾ’ ಎಂದು ಅಳುತ್ತಿದ್ದ ಸವಧನ್ಭಾಯ್ ಅವರ ಮಾತುಗಳು ಇಂದಿಗೂ ನೆನಪಿವೆ. ಅವರಿಗೆ ಏನು ಹೇಳಬೇಕು ಎಂದು ನನಗೆ ತಿಳಿಯಲಿಲ್ಲ. “ನಿಮ್ಮ ಮಗ ಮತ್ತು ನಮ್ಮ ಸಹೋದರ ಈಗ ಇಲ್ಲ” ಎಂದು ಹೇಳಿ ಧೈರ್ಯ ತುಂಬಲು ಪ್ರಯತ್ನಿಸಿದೆ’ ಎಂದು ಉಮರ್ ಹೇಳುತ್ತಾರೆ.

ಮೊದಲ ಕೆಲವು ಕರೆಗಳಲ್ಲಿ ಸವಧನ್ಭಾಯ್ ಅವರ ದುಃಖವೇ ಹೆಚ್ಚಾಗಿ ಮಾತನಾಡುತ್ತಿತ್ತು. ಹಿಂದಿಯಲ್ಲಿ ಮಾತನಾಡಲು ಅವರಿಗೆ ಕಷ್ಟವಾಗುತ್ತಿತ್ತು. ಹೀಗಾಗಿ ಅವರು ಕೆಲವೊಮ್ಮೆ ಗುಜರಾತಿಯಲ್ಲೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಭಾಷೆಯ ಅಡೆತಡೆಯಿದ್ದರೂ ಉಮರ್ ತಾಳ್ಮೆಯಿಂದ ಅವರ ಮಾತುಗಳನ್ನು ಕೇಳುತ್ತಿದ್ದರು.

ಅಪಘಾತದ ಸುದ್ದಿ ಕೇಳಿದಾಗ ತಾವು ಜೋರಾಗಿ ಅತ್ತಿದ್ದೆ ಎಂದು ಉಮರ್ ನೆನಪಿಸಿಕೊಳ್ಳುತ್ತಾರೆ. ಬಳಿಕ ಕಮಲೇಶ್ ಅವರ ರೂಮ್ಮೇಟ್ ಮೂಲಕ ಸವಧನ್ಭಾಯ್ ಅವರ ದೂರವಾಣಿ ಸಂಖ್ಯೆ ಪಡೆದು ಕರೆ ಮಾಡಿದ್ದರು. ಅದಾದ ನಂತರ ಕರೆಗಳು ನಿಲ್ಲಲಿಲ್ಲ. ಆರಂಭದಲ್ಲಿ ಕೆಲವೇ ನಿಮಿಷಗಳ ಮಾತುಕತೆ ನಡೆಯುತ್ತಿತ್ತು. ಬಳಿಕ ಸಂಬಂಧ ಗಟ್ಟಿಯಾಯಿತು. ಈಗ ಇಬ್ಬರೂ ತಮ್ಮ ಕುಟುಂಬದ ಪ್ರತಿಯೊಂದು ವಿಷಯವನ್ನೂ ಹಂಚಿಕೊಳ್ಳುತ್ತಾರೆ. ಉಮರ್ ತಮ್ಮ ಪತ್ನಿ ಸಮೀನಾ ಮತ್ತು ಇಬ್ಬರು ಮಕ್ಕಳ ಫೋಟೊಗಳನ್ನು ಕಳುಹಿಸುತ್ತಾರೆ. ಸವಧನ್ಭಾಯ್ ತಮ್ಮ ಹೊಲಗಳಲ್ಲಿ ಬೆಳೆದ ಕಸ್ತೂರಿ ಕಲ್ಲಂಗಡಿ, ಮೆಣಸಿನಕಾಯಿ, ಬೆಂಡೆಕಾಯಿ ಬೆಳೆಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

2022ರಲ್ಲಿ ಒಂದೇ ತಿಂಗಳ ಅಂತರದಲ್ಲಿ ತಮ್ಮ ತಂದೆ ಮತ್ತು ಸಹೋದರರನ್ನು ಕಳೆದುಕೊಂಡಿದ್ದ ಉಮರ್, ಬಳಿಕ ತಾಯಿಯನ್ನೂ ಕಳೆದುಕೊಂಡಿದ್ದರು. ಆ ನೋವನ್ನು ಅನುಭವಿಸಿದ್ದ ಕಾರಣ, ಸವಧನ್ಭಾಯ್ ಅವರ ದುಃಖವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳುತ್ತಾರೆ.

ಒಂದು ದಿನ ಊಟಕ್ಕೆ ಗೌರ್ ಸಬ್ಜಿ ತಿಂದಿದ್ದೇನೆ ಎಂದು ಸವಧನ್ಭಾಯ್ ಹೇಳಿದಾಗ, "ಗೌರ್ ಎಂದರೇನು?" ಎಂದು ಉಮರ್ ಕೇಳಿದ್ದರು. ಆಗ ಸವಧನ್ಭಾಯ್ ಆ ತರಕಾರಿಯ ಫೋಟೊ ತೆಗೆದು ಅವರಿಗೆ ಕಳುಹಿಸಿದ್ದರು.

ಮಾರ್ಚ್ ನಲ್ಲಿ ಗಡ್ಡ ಬೋಳಿಸಿಕೊಂಡ ಬಳಿಕ ಉಮರ್ ವೀಡಿಯೋ ಕರೆ ಮಾಡಿದಾಗ, ‘ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ; ಯಾರ ಕಣ್ಣೂ ಬೀಳದಿರಲಿ’ ಎಂದು ಸವಧನ್ಭಾಯ್ ಆಶೀರ್ವದಿಸಿದ್ದಾರಂತೆ.

►ಪರಿಹಾರದ ಹಣ, ಬದುಕು ಕಟ್ಟಿಕೊಳ್ಳುವ ಪ್ರಯತ್ನ

ಕಮಲೇಶ್ ಸಾವಿನ ನಂತರ ಕುಟುಂಬಕ್ಕೆ ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂ., ಟಾಟಾ ಟ್ರಸ್ಟ್ನಿಂದ 1 ಕೋಟಿ ರೂ. ಹಾಗೂ ಗುಜರಾತ್ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ದೊರೆತಿದೆ. ಅದರ ಒಂದು ಭಾಗವನ್ನು ಕಮಲೇಶ್ ಅವರನ್ನು ಲಂಡನ್ ಗೆ ಕಳುಹಿಸಲು ಪಡೆದಿದ್ದ 55 ಲಕ್ಷ ರೂ. ಸಾಲ ಮರುಪಾವತಿಸಲು ಬಳಸಲಾಗಿದೆ.

ದೀಪಾವಳಿಗೆ ಕಾರು ಕೊಡುತ್ತೇನೆ ಎಂದು ಕಮಲೇಶ್ ಭರವಸೆ ನೀಡಿದ್ದರು. ಆ ಆಸೆಯನ್ನು ನೆನಪಿಸಿಕೊಂಡು ಕುಟುಂಬವು ಪರಿಹಾರದ ಹಣದಿಂದ ಬಿಳಿ ಬಣ್ಣದ SUV ಖರೀದಿಸಿದೆ.

►ಕೃಷಿಯಲ್ಲಿ ಹೊಸ ಪ್ರಯೋಗ

ಕಮಲೇಶ್ ಯಾವಾಗಲೂ ಹೊಸದಾಗಿ ಯೋಚಿಸಬೇಕು ಎಂದು ಹೇಳುತ್ತಿದ್ದರು ಎಂದು ಸವಧನ್ಭಾಯ್ ನೆನಪಿಸಿಕೊಳ್ಳುತ್ತಾರೆ. ಅದರಿಂದ ಪ್ರೇರಿತರಾಗಿ ಅವರು ಕಸ್ತೂರಿ ಕಲ್ಲಂಗಡಿ, ಕೆಂಪು ಮೆಣಸಿನಕಾಯಿ ಸೇರಿದಂತೆ ಹೊಸ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಐದು ಎಮ್ಮೆಗಳಲ್ಲಿ ಮೂರು ಮತ್ತು ಹತ್ತು ಹಸುಗಳಲ್ಲಿ ಒಂಭತ್ತು ಹಸುಗಳನ್ನು ಮಾರಾಟ ಮಾಡಿದ್ದಾರೆ.

ಪ್ರತಿಯೊಂದು ನಿರ್ಧಾರವನ್ನೂ ಮೊದಲು ಉಮರ್ ಅವರೊಂದಿಗೆ ಚರ್ಚಿಸುತ್ತಾರೆ. ‘ಕೃಷಿಯ ಬಗ್ಗೆ ಅವರಿಗೆ ಹೆಚ್ಚು ತಿಳಿದಿಲ್ಲ. ಆದರೂ “ಮುಂದುವರಿಯಿರಿ, ದೇವರು ಒಳಿತು ಮಾಡುತ್ತಾನೆ” ಎಂದು ಧೈರ್ಯ ತುಂಬುತ್ತಾರೆ’ ಎಂದು ಸವಧನ್ಭಾಯ್ ಹೇಳುತ್ತಾರೆ.

►ಗಡಿ ದಾಟಿದ ಮನುಷ್ಯತ್ವ

ಕಳೆದ ತಿಂಗಳು ಸವಧನ್ಭಾಯ್ ಲಂಡನ್ ನಲ್ಲಿರುವ ಉಮರ್ ಕುಟುಂಬಕ್ಕೆ ಮನೆಯಲ್ಲಿ ತಯಾರಿಸಿದ ತುಪ್ಪ, ಚೂರ್ಣ ಹಾಗೂ ಒಣ ಕಚೋರಿ ಕಳುಹಿಸಿದ್ದರು. ಅದರ ಒಟ್ಟು ತೂಕ 10 ಕೆ.ಜಿ. ಆಗಿತ್ತು. ‘ಕೊರಿಯರ್ಗೆ ಎಷ್ಟು ಖರ್ಚಾಯಿತು?’ ಎಂದು ಉಮರ್ ಕೇಳಿದಾಗ, ‘ನಮ್ಮ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ?’ ಎಂದು ಸವಧನ್ಭಾಯ್ ಉತ್ತರಿಸಿದರು.

ಉಮರ್ ಕೂಡ ಹಿತೇಶ್ ಗೆ ಬ್ಲೇಸರ್ ಮತ್ತು ಶರ್ಟ್, ರತ್ನಿಬೆನ್ ಅವರಿಗೆ ಸ್ವೆಟರ್ ಕಳುಹಿಸಿದ್ದರು. ಇದಕ್ಕೂ ಮೀರಿ, ಕಮಲೇಶ್ ಅವರ ಉದ್ಯೋಗದಾತ ತನ್ನಿಭಾಯ್ ಕಳೆದ 12 ತಿಂಗಳಿಂದ ಪ್ರತಿ ತಿಂಗಳು 50 ಸಾವಿರ ರೂ.ವನ್ನು ಸವಧನ್ಭಾಯ್ ಅವರ ಖಾತೆಗೆ ಜಮೆ ಮಾಡುತ್ತಿದ್ದಾರೆ. ಕುಟುಂಬ ಮತ್ತು ಸ್ನೇಹಿತರಿಂದ 3,57,191 ರೂ.ಸಂಗ್ರಹಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. ಈ ಹಣವನ್ನು ಹಿತೇಶ್‌ ಮದುವೆಗೆ ಬಳಸುವುದಾಗಿ ಸವಧನ್ಭಾಯ್ ಹೇಳುತ್ತಾರೆ.

11ನೇ ತರಗತಿಯ ನಂತರ ವಿದ್ಯಾಭ್ಯಾಸ ನಿಲ್ಲಿಸಿದ್ದ ಸವಧನ್ಭಾಯ್ ಈಗ ಇಂಗ್ಲಿಷ್ ನಲ್ಲಿಯೂ ಸಂದೇಶ ಕಳುಹಿಸುತ್ತಾರೆ. "ಮೊದಲು ಗುಜರಾತಿಯಲ್ಲಿ ಬರೆಯುತ್ತೇನೆ. ನಂತರ ಅದನ್ನು ಇಂಗ್ಲೀಷ್‌ ಗೆ ಅನುವಾದಿಸುತ್ತೇನೆ. ದೋಷಗಳಿಲ್ಲವೇ ಎಂದು ನೋಡಲು ಮತ್ತೆ ಗುಜರಾತಿಗೆ ಅನುವಾದಿಸುತ್ತೇನೆ. ನಂತರವೇ ಕಳುಹಿಸುತ್ತೇನೆ," ಎಂದು ಅವರು ಹೇಳುತ್ತಾರೆ.

ಜೂನ್ 12ರಂದು ದುರಂತಕ್ಕೆ ಮೊದಲ ವರ್ಷವಾಗುತ್ತಿರುವುದರಿಂದ ಸವಧನ್ಭಾಯ್ ಕುಟುಂಬ ಅಹಮದಾಬಾದ್ ನ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದೆ.

‘ಕೆಲವೊಮ್ಮೆ ಮಧ್ಯರಾತ್ರಿ ಎಚ್ಚರಗೊಂಡು ಕಮಲೇಶ್ ಮತ್ತು ಧಾಪುಬೆನ್ ಬಗ್ಗೆ ಯೋಚಿಸುತ್ತೇನೆ. ನಾವು ರೈತರು. ನಮ್ಮ ಮಗ ವಿದೇಶಕ್ಕೆ ಹೋಗುತ್ತಾನೆ ಎಂದು ಎಂದಿಗೂ ಭಾವಿಸಿರಲಿಲ್ಲ. ನಮ್ಮನ್ನು ಒಮ್ಮೆ ಲಂಡನೆ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ. ಈಗ ಆ ಕನಸುಗಳು ಮುರಿದು ಬಿದ್ದಿವೆ’ ಎಂದು ಸವಧನ್ಭಾಯ್ ಹೇಳುತ್ತಾರೆ. ಆದರೆ ಆ ಮುರಿದ ಕನಸುಗಳ ನಡುವೆ, ಲಂಡನ್ ನಿಂದ ಪ್ರತಿದಿನ ಬರುವ ಒಂದು ಕರೆ ಅವರಿಗೆ ಬದುಕನ್ನು ಮುಂದುವರಿಸುವ ಧೈರ್ಯ ನೀಡುತ್ತಿದೆ.

ಒಂದು ವರ್ಷದ ಹಿಂದೆ ಆರಂಭವಾದ ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆ ಸುಮಾರಿಗೆ ಉಮರ್ ಅವರ ಕರೆ ಬರುತ್ತದೆ ಎಂಬ ನಿರೀಕ್ಷೆಯಲ್ಲೇ ಸವಧನ್ಭಾಯ್ ಮತ್ತು ರತ್ನಿಬೆನ್ ಕಾಯುತ್ತಿರುತ್ತಾರೆ.

‘ಕೈಸೆ ಹೋ ಆಪ್... ಟೀಕ್ ಹೋ?’

ಸೌಜನ್ಯ : indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News