ರಾಹುಲ್ ಗಾಂಧಿ | Photo Credit : PTI 

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ವೇಳೆ ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಬಳಸದಂತೆ ನಿರ್ಬಂಧಿಸಿರುವ ಚುನಾವಣಾ ಆಯೋಗದ ನಿರ್ಧರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದು, ಮತ ಕಳ್ಳತನ, ಸರಕಾರದ ಕಳ್ಳತನ, ಪಕ್ಷ ಕಳ್ಳತನ ನಮ್ಮ ಪ್ರಜಾಪ್ರಭುತ್ವದ ಅವನತಿಯ ಸಂಕೇತಗಳಾಗಿವೆ ಎಂದು ಹೇಳಿದರು.

ಜನಾದೇಶವನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿದೆ. ಚುನಾವಣಾ ತೀರ್ಪುಗಳನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದ ಶಕ್ತಿಗಳಿಗೆ ಚುನಾವಣಾ ಆಯೋಗ ನೆರವಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

“ಮೊದಲು ಶಿವಸೇನೆ, ನಂತರ ಎನ್‌ಸಿಪಿ, ಇದೀಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ. ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಒಂದು ಪಕ್ಷವನ್ನು ವಿಭಜಿಸುತ್ತವೆ. ಬಳಿಕ ಅದರ ಚುನಾವಣಾ ಚಿಹ್ನೆಯನ್ನು ಕಸಿದುಕೊಳ್ಳಲಾಗುತ್ತದೆ” ಎಂದು ರಾಹುಲ್ ಗಾಂಧಿ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇಡೀ ರಾಜಕೀಯ ಪಕ್ಷವನ್ನೇ “ಕದಿಯಲು” ಸಾಧ್ಯವಾಗಿದ್ದರೆ, ಕೋಟ್ಯಂತರ ಭಾರತೀಯರ ಮತಗಳನ್ನೂ ಕಳ್ಳತನ ಮಾಡಬಹುದು ಎಂಬುದು ಅಚ್ಚರಿಯ ಸಂಗತಿಯಲ್ಲ. ಮತ ಕಳ್ಳತನ, ಸರಕಾರದ ಕಳ್ಳತನ, ಇದೀಗ ಪಕ್ಷ ಕಳ್ಳತನ, ಇವೆಲ್ಲವೂ ನಮ್ಮ ಪ್ರಜಾಪ್ರಭುತ್ವದ ಅವನತಿಯ ಸಂಕೇತಗಳಾಗಿವೆ. ಈ ಹೋರಾಟ ಕೇವಲ ಮಮತಾ ಬ್ಯಾನರ್ಜಿಯವರದ್ದಲ್ಲ. ಇದು ಪ್ರತಿ ರಾಜಕೀಯ ಪಕ್ಷಗಳ ಹೋರಾಟವಾಗಿದೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ಮತದಾರರ ಹೋರಾಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರನ್ನು ಬಳಸದಂತೆ ಮಮತಾ ಬ್ಯಾನರ್ಜಿ ಹಾಗೂ ಅರೂಪ್ ರಾಯ್ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗ ನಿರ್ಬಂಧಿಸಿದೆ. ಅದೇ ರೀತಿ ಪಕ್ಷಕ್ಕೆ ಮೀಸಲಾಗಿರುವ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನೂ ಬಳಸುವಂತಿಲ್ಲ ಎಂದು ತಿಳಿಸಿದೆ.

ಈ ಮೊದಲು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಬಿಜೆಪಿ ಸಂವಿಧಾನಬಾಹಿರವಾಗಿ ಪಕ್ಷವನ್ನು ಹೈಜಾಕ್ ಮಾಡಿದ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿರ್ಬಂಧಿಸಿರುವುದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮೋದಿಗೆ ನೀಡಿರುವ ತಡರಾತ್ರಿಯ ಹುಟ್ಟುಹಬ್ಬದ ಉಡುಗೊರೆಯಾಗಿದೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor