West Bengal | ಪತ್ನಿ, ಪುತ್ರರಿಗೆ ED ಸಮನ್ಸ್ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಬಣ ತೊರೆದು ಬಂಡಾಯ ಬಣ ಸೇರಿದ TMC ಶಾಸಕ ಮದನ್ ಮಿತ್ರಾ
ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ
ಮದನ್ ಮಿತ್ರಾ | Photo Credit : X
ಕೋಲ್ಕತ್ತಾ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಸಮನ್ಸ್ ಜಾರಿಗೊಳಿಸಿದ ಮರುದಿನವೇ ತೃಣಮೂಲ ಕಾಂಗ್ರೆಸ್ (TMC) ಶಾಸಕ ಹಾಗೂ ಮಾಜಿ ಸಚಿವ ಮದನ್ ಮಿತ್ರಾ ಬುಧವಾರ ಮಮತಾ ಬ್ಯಾನರ್ಜಿ ಬಣವನ್ನು ತೊರೆದು ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಸೇರ್ಪಡೆಯಾದರು.
ಆದರೆ, "ನಾನು ವಿಧಾನಸಭೆಯಲ್ಲಿನ ನನ್ನ ಕೊಠಡಿಯನ್ನು ಮಾತ್ರ ಬದಲಾಯಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಮದನ್ ಮಿತ್ರಾ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಟಿಎಂಸಿಯಲ್ಲಿನ ವಿಭಜನೆಗೆ ಅಭಿಷೇಕ್ ಕಾರಣ ಎಂದು ಹಲವು ಬಂಡಾಯ ನಾಯಕರು ಆರೋಪಿಸುತ್ತಿರುವ ನಡುವೆಯೇ, "ಆರು ತಿಂಗಳು ಪಕ್ಷದಿಂದ ದೂರ ಉಳಿಯುವಂತೆ ನಾನು ಅಭಿಷೇಕ್‌ಗೆ ಸಲಹೆ ನೀಡಿದ್ದೆ. ಮೊದಲು ಪಕ್ಷವನ್ನು ಮರುನಿರ್ಮಿಸೋಣ. ನಂತರ ನೀವು ಹಿಂದಿರುಗಿ ನಿಮ್ಮ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದ್ದೆ. ಆದರೆ ಅವರು ಅದನ್ನು ನಿರಾಕರಿಸಿದರು. 'ನಾನು ಪಕ್ಷವನ್ನು ಬಿಡುವುದಿಲ್ಲ' ಎಂದರು" ಎಂದು ಮಿತ್ರಾ ಹೇಳಿದರು.
ಋತಬ್ರತಾ ಬ್ಯಾನರ್ಜಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪಕ್ಷ ಮುಳುಗುತ್ತಿದೆ. ದೋಣಿ ಮುಳುಗಿದೆ. ಜನರು ಸಾಯುತ್ತಿದ್ದಾರೆ. ಆದರೂ ಉಳಿದವರೆಲ್ಲರೂ ಮುಳುಗಿದರೂ ಪರವಾಗಿಲ್ಲ, ಅಭಿಷೇಕ್ ಅವರನ್ನು ಮಾತ್ರ ಉಳಿಸಬೇಕು ಎಂಬ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿದೆ ಅಥವಾ ಅದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿದೆ. ಇದು ಅತ್ಯಂತ ದುಃಖಕರ" ಎಂದು ಹೇಳಿದರು.
ಮೇ ತಿಂಗಳ ವಿಧಾನಸಭೆ ಚುನಾವಣೆಯಲ್ಲಿ 15 ವರ್ಷಗಳ ಆಡಳಿತದ ಬಳಿಕ ಬಿಜೆಪಿ ಕೈಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ನಂತರ ಪಕ್ಷದಲ್ಲಿ ಭಿನ್ನಮತ ತೀವ್ರಗೊಂಡಿದೆ. ಹೆಚ್ಚಿನ ಶಾಸಕರು ಮತ್ತು ಸಂಸದರು ಬಂಡಾಯ ಬಣಕ್ಕೆ ಸೇರಿದ್ದಾರೆ ಅಥವಾ ತಾಂತ್ರಿಕವಾಗಿ ತ್ರಿಪುರಾದ ಸಣ್ಣ ಪಕ್ಷದಲ್ಲಿ ವಿಲೀನಗೊಂಡಿದ್ದಾರೆ. ಮೂಲ ಟಿಎಂಸಿ ಯಾರಿಗೆ ಸೇರಿದೆ ಎಂಬ ವಿಚಾರ ಚುನಾವಣಾ ಆಯೋಗದ ಮುಂದೆ ವಿಚಾರಣೆಯಲ್ಲಿದೆ.
"ಪಕ್ಷ ಎಲ್ಲರದ್ದಾಗಿರಬೇಕು. ಆದರೆ ಈಗ ಅದು ಅಭಿಷೇಕ್‌ಗೆ ಮಾತ್ರ ಸೇವೆ ಸಲ್ಲಿಸುವ ಪಕ್ಷವಾಗಿ ಬದಲಾಗಿದೆ. ಮಮತಾ ಬ್ಯಾನರ್ಜಿ ಅವರು ಮರಳಿ ಬಂದು ಪರಿಸ್ಥಿತಿಯನ್ನು ಮರುಪರಿಶೀಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಇದು ಮ್ಯಾರಥಾನ್ ಓಟದಂತಿದೆ. ಕೊನೆಯಲ್ಲಿ ಯಾರು ಮುಂದೆ ಇರುತ್ತಾರೆ ಎಂಬುದು ಗೊತ್ತಾಗುತ್ತದೆ. ನಾನು ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಿ ಮುಂದುವರಿದಿದ್ದರೂ, ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳನ್ನೂ ತೊರೆದಿದ್ದೇನೆ. ಹೀಗಾಗಿ ಕಾರ್ಯಾತ್ಮಕವಾಗಿ ನಾನು ಇನ್ನು ಟಿಎಂಸಿ ಶಾಸಕನಲ್ಲ" ಎಂದು ಮಿತ್ರಾ ಹೇಳಿದರು.
ಇನ್ನೊಂದೆಡೆ, ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಹಾಗೂ ಪಕ್ಷದಲ್ಲೇ ಉಳಿದಿರುವ ಮಹುವಾ ಮೊಯಿತ್ರಾ ಸೇರಿದಂತೆ ಇತರ ನಾಯಕರು, ಪಕ್ಷದಲ್ಲಿನ ಬಂಡಾಯಕ್ಕೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಒತ್ತಡ, ಪ್ರಲೋಭನೆ ಮತ್ತು ಭಯವೇ ಕಾರಣ ಎಂದು ಆರೋಪಿಸಿದ್ದಾರೆ.
ED ಸಮನ್ಸ್:
ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಪುರಸಭೆ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಮದನ್ ಮಿತ್ರಾ ಅವರ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ED ಸಮನ್ಸ್ ಜಾರಿಗೊಳಿಸಿದೆ.
"ತನಿಖೆಯ ವೇಳೆ ಶಾಸಕರ ಪತ್ನಿ ಮತ್ತು ಇಬ್ಬರು ಪುತ್ರರ ಹೆಸರುಗಳು ಬೆಳಕಿಗೆ ಬಂದಿವೆ. ಅವರ ಹೇಳಿಕೆಗಳನ್ನು ದಾಖಲಿಸಲು ಮುಂದಿನ ವಾರ ವಿಚಾರಣೆಗೆ ಕರೆಯಲಾಗಿದೆ" ಎಂದು EDಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.
ಆರೋಪಿತ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮದನ್ ಮಿತ್ರಾ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ED ಇತ್ತೀಚೆಗೆ ಏಕಕಾಲದಲ್ಲಿ ಶೋಧ ನಡೆಸಿತ್ತು. ಜೂನ್ ನಲ್ಲಿ ಭವಾನಿಪುರ ಮತ್ತು ಕಾಲಿಘಾಟ್ ನಲ್ಲಿರುವ ಅವರ ನಿವಾಸಗಳು ಸೇರಿದಂತೆ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಏಳು ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ದಕ್ಷಿಣೇಶ್ವರ, ಸಂತೋಷಪುರ, ಜೋಕಾ ಹಾಗೂ ಬೆಲೆಘಾಟಾದ ಆವರಣಗಳನ್ನೂ ಶೋಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ 2025ರ ಅಕ್ಟೋಬರ್‌ನಲ್ಲಿ ಸಿಬಿಐ ಕೂಡ ಮದನ್ ಮಿತ್ರಾ ಅವರ ನಿವಾಸದ ಮೇಲೆ ಶೋಧ ನಡೆಸಿ ಸುಮಾರು ಐದು ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲಿಸಿತ್ತು.
ಪಶ್ಚಿಮ ಬಂಗಾಳದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ನೇಮಕಾತಿಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಿಬಿಐ ದಾಖಲಿಸಿರುವ ಮೂಲ ಪ್ರಕರಣಗಳ ಆಧಾರದಲ್ಲಿ, ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ED ಪ್ರತ್ಯೇಕ ತನಿಖೆ ನಡೆಸುತ್ತಿದೆ.