West Bengal | 'ನೈಜ ಮೈತ್ರಿ’ಯಾದರೆ ಬಲವಾದ ಸಂದೇಶ ರವಾನೆ: TMC–ಕಾಂಗ್ರೆಸ್ ಮೈತ್ರಿಗೆ ಬಂಡಾಯ ಸಂಸದೆ ಸಾಯೋನಿ ಘೋಷ್ ಬೆಂಬಲ
ಸಾಯೋನಿ ಘೋಷ್ | Photo Credit : PTI
ಕೋಲ್ಕತಾ, ಸೆ. 19: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟರೆ, ಅದು ಕೇವಲ ಹೆಸರಿಗಷ್ಟೇ ಸೀಮಿತವಾಗದೆ ‘ನೈಜ ಮೈತ್ರಿ’ಯಾಗಿರಬೇಕು. ಅಂತಹ ಮೈತ್ರಿಯು ಬಲವಾದ ರಾಜಕೀಯ ಸಂದೇಶವನ್ನು ರವಾನಿಸಲಿದೆ ಎಂದು ಬಂಡಾಯ ಟಿಎಂಸಿ ಸಂಸದೆ ಸಾಯೋನಿ ಘೋಷ್ ಹೇಳಿದರು.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ. ಹಾಗಾದರೆ, ಈ ಮೈತ್ರಿಯು ನೈಜವಾದುದು, ಕೇವಲ ಹೆಸರಿಗಷ್ಟೇ ಸೀಮಿತವಲ್ಲ, ನೈಜ ಮೈತ್ರಿ ಎಂಬ ಬಲವಾದ ಸಂದೇಶ ರವಾನೆಯಾಗಲಿದೆ” ಎಂದರು.
ಜೂನ್ ನಲ್ಲಿ ಅಷ್ಟಾಗಿ ಪರಿಚಿತವಲ್ಲದ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ವಿಲೀನಗೊಂಡ 20 ಬಂಡಾಯ ಟಿಎಂಸಿ ಸಂಸದರ ಪೈಕಿ ಘೋಷ್ ಕೂಡ ಒಬ್ಬರು.
ಹಳೆಯ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ ಎದ್ದಿರುವ ಸಂದರ್ಭದಲ್ಲೇ ಘೋಷ್ ಅವರ ಹೇಳಿಕೆ ಬಂದಿದೆ.
ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಫುಟ್‌ಬಾಲ್ ಆಟಗಾರ’ನ ಚಿಹ್ನೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಇದರ ಬೆನ್ನಲ್ಲೇ, ಆ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ತಮ್ಮ ನಾಮಪತ್ರ ಹಿಂಪಡೆದರು. ಬಳಿಕ ಮಮತಾ ನೇತೃತ್ವದ ಬಣವು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ಘೋಷಿಸಿತು.
ನಂದಿಗ್ರಾಮ್ ನಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರ ಬಂಧನದ ಕುರಿತು ಮಾತನಾಡಿದ ಘೋಷ್, ಅವರ ವಿರುದ್ಧ ಬಾಕಿ ಇರುವ ಪ್ರಕರಣಗಳ ಬಗ್ಗೆ ತಮಗೆ ಮಾಹಿತಿ ಇದೆ ಎಂದರು. ಆದರೆ, ಇದು ಎರಡು ರಾಜಕೀಯ ಪಕ್ಷಗಳ ನಡುವಿನ ವಿಷಯ ಎಂದು ಹೇಳಿದರು.
“ಕಾಂಗ್ರೆಸ್ ನಾಯಕ ಹಾಗೂ ಅಭ್ಯರ್ಥಿಯ ವಿಚಾರಕ್ಕೆ ಬಂದರೆ, ನಿನ್ನೆಯವರೆಗಿನ ನನ್ನ ಮಾಹಿತಿಯ ಪ್ರಕಾರ ಅವರ ವಿರುದ್ಧ ಕೆಲವು ಪ್ರಕರಣಗಳು ಬಾಕಿ ಇದ್ದವು. ಇದು ರಾಜಕೀಯ. ಚುನಾವಣೆಗೆ ಮುನ್ನ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಅಥವಾ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ರಾಜಕೀಯದಲ್ಲಿ ಪರಿಗಣಿಸಬೇಕಾಗುತ್ತದೆ” ಎಂದರು.
ಪಕ್ಷಗಳು ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದು ಅಥವಾ ಕಾನೂನು ಮಾರ್ಗವನ್ನು ಅನುಸರಿಸಬಹುದು ಎಂದೂ ಅವರು ಹೇಳಿದರು.
“ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಆಗಿರಲಿ, ತೃಣಮೂಲ ಕಾಂಗ್ರೆಸ್ ಆಗಿರಲಿ ಅಥವಾ ಬಿಜೆಪಿ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಸ್ವತಂತ್ರರಾಗಿದ್ದಾರೆ” ಎಂದು ಘೋಷ್ ಹೇಳಿದರು.
ತಮ್ಮದೇ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸುವುದಕ್ಕೆ ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ಅವರಿಗೆ ನಿರ್ಬಂಧ ವಿಧಿಸಿದ ಬಳಿಕ ವಿರೋಧ ಪಕ್ಷಗಳ ನಾಯಕರು ಈ ನಿರ್ಧಾರವನ್ನು ಟೀಕಿಸಿದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಬೆಂಬಲ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧ ಒಟ್ಟಾಗಿ ಹೋರಾಡಲು ಕಾಂಗ್ರೆಸ್ ಮತ್ತು ತಮ್ಮ ಪಕ್ಷ ಸಿದ್ಧವಾಗಿವೆ ಎಂದು ಬ್ಯಾನರ್ಜಿ ಹೇಳಿದ್ದರು.
“ನಾವು ಒಟ್ಟಾಗಿದ್ದೇವೆ. ಬಿಜೆಪಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ನಾವು ಬಯಸುತ್ತೇವೆ” ಎಂದು ಗಾಂಧಿ ಅವರೊಂದಿಗಿನ ಮಾತುಕತೆಯ ಕುರಿತು ಬ್ಯಾನರ್ಜಿ ಹೇಳಿದ್ದರು. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ಘೋಷಿಸಿದ್ದರು.
ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ತಮ್ಮ ಪಕ್ಷ ಸಿದ್ಧವಿದೆ ಎಂದು ಗಾಂಧಿ ಅವರು ಬ್ಯಾನರ್ಜಿ ಅವರಿಗೆ ತಿಳಿಸಿದ್ದರು. ಬಳಿಕ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ನ ವಾಗ್ದಾಳಿಯ ನೇತೃತ್ವವನ್ನೂ ಅವರು ವಹಿಸಿದ್ದರು.
ಮಿಲನ್ ಪ್ರಧಾನ್ ಅವರ ಬಂಧನದ ಬಳಿಕ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಈ ಕ್ರಮವು ರಾಜಕೀಯ ಪ್ರೇರಿತವಾಗಿದ್ದು, “ಯಾದೃಚ್ಛಿಕ ಘಟನೆಯಲ್ಲ” ಎಂದು ಆರೋಪಿಸಿದ್ದರು.
“ನಂದಿಗ್ರಾಮ್ ಉಪಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರ ಬಂಧನವು ಕಾಕತಾಳೀಯವಲ್ಲ. ಇದು ರಾಜಕೀಯ ಸೇಡು ಮತ್ತು ಪ್ರಜಾಪ್ರಭುತ್ವದ ಹತ್ಯೆ” ಎಂದು ಅವರು ಹೇಳಿದ್ದರು.
“ಬಿಜೆಪಿಗೆ ನ್ಯಾಯಯುತ ಚುನಾವಣೆಗಳ ಮೇಲೆ ನಂಬಿಕೆಯಿಲ್ಲ. ಅದಕ್ಕಾಗಿಯೇ ಅದು ಅಧಿಕಾರವನ್ನು ಉಳಿಸಿಕೊಳ್ಳಲು ಬಯಸುತ್ತದೆ. ಕೆಲವೊಮ್ಮೆ ಮತಗಳ ಕಳ್ಳತನದ ಮೂಲಕ, ಕೆಲವೊಮ್ಮೆ ಸರಕಾರಗಳನ್ನು ಕಸಿದುಕೊಳ್ಳುವ ಮೂಲಕ ಮತ್ತು ಕೆಲವೊಮ್ಮೆ ಪಕ್ಷಗಳನ್ನು ಕಬಳಿಸುವ ಮೂಲಕ ಅಧಿಕಾರ ಉಳಿಸಿಕೊಳ್ಳಲು ಅದು ಪ್ರಯತ್ನಿಸುತ್ತದೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ; ಬದಲಿಗೆ ಚುನಾವಣಾ ಹೋರಾಟವನ್ನೇ ಸಂಪೂರ್ಣವಾಗಿ ಕೊನೆಗೊಳಿಸಲು ಬಯಸುತ್ತಾರೆ” ಎಂದು ಗಾಂಧಿ ಆರೋಪಿಸಿದ್ದರು.
ಕಾಂಗ್ರೆಸ್ “ಹೆದರುವುದಿಲ್ಲ ಅಥವಾ ತಲೆಬಾಗುವುದಿಲ್ಲ” ಎಂದು ಹೇಳಿದ್ದ ಅವರು, ಪಕ್ಷವು ಚುನಾವಣಾ ಕಣದಲ್ಲಿ ಹೋರಾಡುತ್ತದೆ ಮತ್ತು ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ್ದರು.