ಉತ್ತರ ಪ್ರದೇಶ: ಮದುವೆ ಸಂಭ್ರಮಾಚರಣೆಯಲ್ಲಿ ಗುಂಡು ಹಾರಾಟಕ್ಕೆ ಇಬ್ಬರು ಬಾಲಕರು ಬಲಿ
ಸಾಂದರ್ಭಿಕ ಚಿತ್ರ
ಎಟಾ: ಉತ್ತರ ಪ್ರದೇಶದ ಎಟಾ ಜಿಲ್ಲೆಯ ಉಮೈ ಅಸದ್ನಗರ ಗ್ರಾಮದಲ್ಲಿ ಶನಿವಾರ ರಾತ್ರಿ ವಿವಾಹ ಪೂರ್ವ ಸಂಭ್ರಮಾಚರಣೆಯ ಸಂದರ್ಭ ಬಂದೂಕಿನಿಂದ ಹಾರಿದ ಗುಂಡುಗಳು ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರನ್ನು ಬಲಿ ತೆಗೆದುಕೊಂಡಿವೆ.
ಪೋಲಿಸರ ಪ್ರಕಾರ ಸಂಗೀತ ಮತ್ತು ನೃತ್ಯದೊಂದಿಗೆ ಸಂಭ್ರಮಾಚರಣೆ ನಡೆಯುತ್ತಿದ್ದಾಗ ಗುಂಡಿನ ಶಬ್ದಗಳು ಕೇಳಿ ಬಂದಿದ್ದವು. ಅಸದುದ್ದೀನ್ ಎನ್ನುವವರ ಪುತ್ರ ಸುಹೈಲ್(12) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಮುನ್ನಾ ಖಾನ್ ಎಂಬವರ ಪುತ್ರ ಶಾಖಾದ್ (17) ತೀವ್ರವಾಗಿ ಗಾಯಗೊಂಡಿದ್ದ. ಇಬ್ಬರನ್ನೂ ತಕ್ಷಣ ಅಲಿಗಂಜ್ ನಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ಸುಹೈಲ್ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ವೈದ್ಯರ ಸಲಹೆಯ ಮೇರೆಗೆ ಶಾಖಾದ್ ನನ್ನು ಹೆಚ್ಚಿನ ಚಿಕಿತ್ಸೆಗೆ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತನೂ ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹೆಚ್ಚುವರಿ ಎಸ್ಪಿ ಶ್ವೇತಾಂಭ ಪಾಂಡೆ ಅವರು,ಘಟನೆಯು ಸಂಭ್ರಮಾಚರಣೆಯ ಗುಂಡು ಹಾರಾಟಕ್ಕೆ ಸಂಬಂಧಿಸಿರಬಹುದು ಎನ್ನುವುದನ್ನು ಪ್ರಾಥಮಿಕ ಮಾಹಿತಿಗಳು ಸೂಚಿಸಿವೆ,ಆದರೆ ತನಿಖೆಯ ಬಳಿಕವೇ ನಿಖರವಾದ ಕಾರಣ ಮತ್ತು ಗುಂಡು ಹಾರಿಸಿದವರು ಯಾರು ಎನ್ನುವುದು ದೃಢಪಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.