ಲಡಾಕ್‌ಗೆ ರಾಜ್ಯದ ಸ್ಥಾನಮಾನ, 6ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ಆಗ್ರಹಿಸಿ ಸೆಪ್ಟಂಬರ್‌ನಲ್ಲಿ 2 ವಾರಗಳ ಪಾದಯಾತ್ರೆ

Update: 2026-08-22 22:15 IST

Photo Credit : PTI

ಲಡಾಖ್: ಹಿಂಸಾಚಾರಕ್ಕೆ ಸಾಕ್ಷಿಯಾದ 2025 ಸೆಪ್ಟಂಬರ್‌ನ ಪ್ರತಿಭಟನೆಯ ಮೊದಲ ವರ್ಷಾಚರಣೆಯ ಹಿನ್ನೆಲೆಯಲ್ಲಿ ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಆರನೇ ಪರಿಚ್ಚೇದದ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಎರಡು ವಾರಗಳ ಕಾಲ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.

ಸೋಷಿಯಲಿಸ್ಟ್ ಪಾರ್ಟಿ (ಇಂಡಿಯಾ) ನೇತೃತ್ವದ ‘‘ಲಡಾಖ್ ಶಾಂತಿ ಮತ್ತು ನ್ಯಾಯ ಯಾತ್ರೆ’’ ಎಂದು ಕರೆಯಲಾಗುವ ಈ ಪಾದಯಾತ್ರೆ ಸೆಪ್ಟಂಬರ್ 10ರಂದು ಕಾರ್ಗಿಲ್ ಜಿಲ್ಲೆಯಿಂದ ಪ್ರಾರಂಭವಾಗಲಿದೆ. ಇದು ಲೇಹ್ ಹೆದ್ದಾರಿಯ ಮೂಲಕ ಹಾದು ಸೆಪ್ಟಂಬರ್ 24ರಂದು ಲೇಹ್ ನಗರದಲ್ಲಿ ಸಮಾಪನೆಗೊಳ್ಳಲಿದೆ.

ಕಳೆದ ವರ್ಷ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸೋನಮ್ ವಾಗ್ಚುಕ್ ಅವರು ನಡೆಸಿದ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸಾಚಾರದ ಹಿನ್ನೆಲೆಯಲ್ಲಿ ಸೋನಮ್ ವಾಂಗ್ಚುಕ್ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿತ್ತು. ಅಲ್ಲದೆ ಸುಮಾರು 87 ಜನರ ವಿರುದ್ಧ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿತ್ತು.

‘‘ಪಾದ ಯಾತ್ರೆಯು ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೆದದ ಸೇರ್ಪಡೆಗೆ ಒತ್ತಾಯಿಸುವ ಉದ್ದೇಶವನ್ನು ಹೊಂದಿದೆ. ಸೆಪ್ಟಂಬರ್ 24ರಂದು ನಡೆಯುವ ಪ್ರತಿಭಟನೆಯ ಮೊದಲ ವರ್ಷಾಚರಣೆಯ ಸಾರ್ವಜನಿಕ ಸಭೆಯಲ್ಲಿ ನಾವು ಜನರೊಂದಿಗೆ ಮಾತುಕತೆ ನಡೆಸಲಿದ್ದೇವೆ’’ ಎಂದು ಯಾತ್ರೆಯ ಭಾಗವಾಗಿರುವ ಸಾಮಾಜಿಕ ಹೋರಾಟಗಾರ್ತಿ ಗುಂಜನ್ ಸಿಂಗ್ ಹೇಳಿದ್ದಾರೆ.

ಯಾತ್ರೆಯ ಸಂದರ್ಭ ಜನರು ದಿನಕ್ಕೆ ಸುಮಾರು 12ರಿಂದ 15 ಕಿಲೋಮೀಟರ್ ದೂರ ಕ್ರಮಿಸಲಿದ್ದಾರೆ. ರಾತ್ರಿ ತಂಗಲಿದ್ದಾರೆ ಎಂದು ಅವರು ಹೇಳಿದರು. ವರ್ಷಗಳಿಂದ ಲಡಾಖ್ ನಾಯಕತ್ವ ಮತ್ತು ಕೇಂದ್ರ ನಡುವೆ ಮಾತುಕತೆ ನಡೆಯುತ್ತಿದ್ದರೂ ಇದುವರೆಗೆ ಬೇಡಿಕೆಗಳನ್ನು ಏಕೆ ಅಂಗೀಕರಿಸುತ್ತಿಲ್ಲ ಎಂದು ಸಿಂಗ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News