Photo Credit : NDTV 

ಹೊಸದಿಲ್ಲಿ: ‘ನಕ್ಷೆಯನ್ನು ಸರಿಪಡಿಸಿ’ ಎಂಬ ಭಾರತದ ನಿರ್ಣಯವನ್ನು ಆಧರಿಸಿ ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ನಕ್ಷೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಅರುಣಾಚಲ ಪ್ರದೇಶ ಮತ್ತು ಅಕ್ಸೈ ಚಿನ್ ಗಳು ಲಡಾಖ್ ನ ಭಾಗ ಎಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ. ಆದರೆ, ವಿಶ್ವ ಸಂಸ್ಥೆಯ ನೂತನ ನಕ್ಷೆಯಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸೈ ಚಿನ್ ಗಳನ್ನು ಭಾರತ–ಚೀನಾ ಗಡಿಯ ನಡುವಿನ ಪ್ರತ್ಯೇಕ ಪ್ರದೇಶಗಳಾಗಿ ತೋರಿಸಲಾಗಿದೆ.

ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದ ನಿರ್ಣಯಕ್ಕೆ ಸಂಬಂಧಿಸಿದಂತೆ ಜುಲೈ 1ರಂದು ಈ ನಕ್ಷೆಯನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿತ್ತು. ನಕ್ಷೆಯಲ್ಲಿ ನಾಗಾಲ್ಯಾಂಡ್ ನೊಂದಿಗೆ ಅರುಣಾಚಲ ಪ್ರದೇಶ ಹೊಂದಿರುವ ಗಡಿಯನ್ನು ತೆಗೆದುಹಾಕಲಾಗಿದೆ. ಅರುಣಾಚಲ ಪ್ರದೇಶವನ್ನು ಅಸ್ಸಾಂ ಮತ್ತು ಚೀನಾ ನಡುವಿನ ಪ್ರತ್ಯೇಕ ಪ್ರದೇಶವಾಗಿ ಬಿಂಬಿಸಲಾಗಿದೆ.

ಅದೇ ರೀತಿ, ಅಕ್ಸೈ ಚಿನ್ ಪ್ರದೇಶವನ್ನೂ ಪ್ರತ್ಯೇಕ ಪ್ರದೇಶವಾಗಿ ನಕ್ಷೆಯಲ್ಲಿ ತೋರಿಸಲಾಗಿದೆ. ಅಕ್ಸೈ ಚಿನ್ ಭಾರತದ ಪಶ್ಚಿಮ ಗಡಿ ಹಾಗೂ ಚೀನಾದ ಪೂರ್ವ ಗಡಿಯೊಂದಿಗೆ ಗಡಿ ಹಂಚಿಕೊಂಡಿರುವಂತೆ ನಕ್ಷೆಯಲ್ಲಿ ಬಿಂಬಿಸಲಾಗಿದೆ.

ಈ ಬದಲಾವಣೆಗಳಿಗೆ ಕಾರಣವೇನು ಎಂಬುದನ್ನು ವಿಶ್ವ ಸಂಸ್ಥೆ ಈವರೆಗೆ ವಿವರಿಸಿಲ್ಲ.

►ನಿಯಂತ್ರಣ ರೇಖೆಗೂ ಚುಕ್ಕಿ ಗೆರೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವ ಗಡಿ ನಿಯಂತ್ರಣ ರೇಖೆಯನ್ನು ವಿಶ್ವ ಸಂಸ್ಥೆಯ ನಕ್ಷೆಯಲ್ಲಿ ಚುಕ್ಕಿ ಗೆರೆಯ ಮೂಲಕ ತೋರಿಸಲಾಗಿದೆ.

ನಕ್ಷೆಯ ಅಡಿಟಿಪ್ಪಣಿಯಲ್ಲಿ, ‘ಚುಕ್ಕಿ ಗೆರೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಮತ್ತು ಪಾಕಿಸ್ತಾನದ ಸಮ್ಮತಿಯ ಮೇರೆಗೆ ನಿರ್ಮಾಣವಾಗಿರುವ ಗಡಿ ನಿಯಂತ್ರಣ ರೇಖೆಯನ್ನು ಅಂದಾಜಿನ ಮೇರೆಗೆ ಪ್ರತಿನಿಧಿಸುತ್ತದೆ’ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor