Uttarakhand | ಸುರಂಗದಲ್ಲಿ ಭೂಕುಸಿತದಿಂದ ಗುಂಡಿ ನಿರ್ಮಾಣ: ನೀರು ನುಗ್ಗಿ 7 ಕಾರ್ಮಿಕರು ಮೃತ್ಯು

Update: 2026-08-14 07:20 IST

Photo credit : timesofindia

ಡೆಹ್ರಾಡೂನ್: ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಭೂಕುಸಿತದಿಂದಾಗಿ ಗುಂಡಿ ಉಂಟಾಗಿದ್ದು, ಗುರುವಾರ ಸಂಜೆ ಸುರಂಗದೊಳಗೆ ಏಕಾಏಕಿ ನೀರು ಮತ್ತು ಅವಶೇಷಗಳು ನುಗ್ಗಿದ ಪರಿಣಾಮ ಏಳು ಕಾರ್ಮಿಕರು ಮೃತಪಟ್ಟಿರುವ ಘಟನೆ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಪ್ರದೇಶದ ಮಾಯಾಪುರದಲ್ಲಿ ನಡೆದಿದೆ. 

ನಂತರ ನಡೆದ ರಕ್ಷಣಾ ಕಾರ್ಯಚರಣೆಯಲ್ಲಿ 14 ಮಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.

ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್‌ ಕಂಪನಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ 2 ಕಿ.ಮೀ ಉದ್ದದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಟೈಲ್ ರೇಸ್ ಸುರಂಗದಲ್ಲಿ ಗುರುವಾರ ಸಂಜೆ 7.05ರ ಸುಮಾರಿಗೆ ಘಟನೆ ನಡೆದಿದೆ.

ನಿರ್ಮಾಣ ಹಂತದಲ್ಲಿದ್ದ ಟಿಎಚ್‌ಡಿಸಿ ಸುರಂಗದಲ್ಲಿ ಭೂಕುಸಿತ ಸಂಭವಿಸಿದ್ದು, ಸುರಂಗದೊಳಗೆ ಸುಮಾರು 1.4 ಕಿ.ಮೀ ದೂರದಲ್ಲಿ ಗುಂಡಿ ಉಂಟಾಗಿದೆ. ಬಳಿಕ ಏಕಾಏಕಿ ನೀರು ಮತ್ತು ಅವಶೇಷಗಳು ಸುರಂಗದೊಳಗೆ ನುಗ್ಗಿವೆ. ಈ ವೇಳೆ ಸುರಂಗದೊಳಗಿದ್ದ 22 ಕಾರ್ಮಿಕರು ಸಿಲುಕಿಕೊಂಡಿದ್ದರು. ಇವರು ಮಧ್ಯಾಹ್ನ 2ರಿಂದ ರಾತ್ರಿ 10ರವರೆಗಿನ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಘಟನೆ ವರದಿಯಾಗುತ್ತಿದ್ದಂತೆ ಜಿಲ್ಲಾ ಘಟನಾ ಸ್ಪಂದನಾ ಪಡೆ, ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸುರಂಗದಲ್ಲಿ ಸಿಲುಕಿದ್ದ 22 ಕಾರ್ಮಿಕರ ಪೈಕಿ 14 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದು, ಅವರಿಗಾಗಿ ಗುರುವಾರ ತಡರಾತ್ರಿಯವರೆಗೂ ಶೋಧ ಕಾರ್ಯ ಮುಂದುವರಿದಿತ್ತು.

ಘಟನೆಯ ಗಂಭೀರತೆ ಅರಿತ ಬಳಿಕ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಟಿಎಚ್ಡಿಸಿಯ ಹಿರಿಯ ಅಧಿಕಾರಿಯೊಬ್ಬರು, ಸುರಂಗದ ಮೇಲ್ಭಾಗದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಗುಂಡಿ ಉಂಟಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಸುರಂಗದೊಳಗೆ ನುಗ್ಗಿದ ನೀರನ್ನು ಹೊರಹಾಕಲು ಪಂಪ್ ಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News