Photo Credit : altnews.in

ವಾರಣಾಸಿ: ಬಾಬಾ ಲಟ್ ಭೈರವ ಮೆರವಣಿಗೆಯ ಸಂದರ್ಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳಾ ಕಲಾವಿದರನ್ನು ಪೊಲೀಸ್ ಸಿಬ್ಬಂದಿ ವೀಕ್ಷಿಸುತ್ತಿರುವ ಹಾಗೂ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿರುವ ದೃಶ್ಯಗಳಿರುವ ವೈರಲ್ ವೀಡಿಯೋವನ್ನು AI ಮೂಲಕ ಸೃಷ್ಟಿಸಲಾಗಿದೆ ಎಂದು ವಾರಣಾಸಿ ಪೊಲೀಸರು ನೀಡಿದ್ದ ಹೇಳಿಕೆ ಪ್ರಶ್ನಾರ್ಹವಾಗಿದೆ.

ಸೆ.29ರಂದು ಪತ್ರಕರ್ತ ಪಿಯೂಷ್ ರಾಯ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿ, ಬಾಬಾ ಲಟ್ ಭೈರವ ಮೆರವಣಿಗೆಯ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಮಹಿಳಾ ಕಲಾವಿದರನ್ನು ಹಲವು ಪೊಲೀಸ್ ಅಧಿಕಾರಿಗಳು ವೀಕ್ಷಿಸುತ್ತಿರುವುದು ಹಾಗೂ ಕೆಲವರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿರುವುದು ಕಂಡುಬಂದಿತ್ತು.

ವೀಡಿಯೋ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪೊಲೀಸ್ ಸಿಬ್ಬಂದಿಯ ವರ್ತನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಲಪಂಥೀಯ ಬೆಂಬಲಿಗರೂ ಪ್ರದರ್ಶನವನ್ನು ‘ಅಶ್ಲೀಲ ಮತ್ತು ವಿಕೃತ’ ಎಂದು ಹೇಳಿದ್ದರು. ಇದು ‘ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುವಂತಿದೆ’ ಎಂದೂ ಟೀಕಿಸಿದ್ದರು.

ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ರಾಯ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಕಾಶಿ ಪೊಲೀಸ್ ಉಪ ಆಯುಕ್ತರ (DCP) ‘ಎಕ್ಸ್’ ಖಾತೆ, ಪೊಲೀಸರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ವೀಡಿಯೋವನ್ನು AI ಮೂಲಕ ಸೃಷ್ಟಿಸಿ ಹರಡಲಾಗಿದೆ ಎಂದು ಹೇಳಿತ್ತು. ದಾರಿತಪ್ಪಿಸುವ ವೀಡಿಯೋ ಹರಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.

“ಪೊಲೀಸರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ವೀಡಿಯೋ ಹರಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ ವೀಡಿಯೋಗಳಲ್ಲಿ ಹಿಂಭಾಗದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಕಾಣಿಸುವುದಿಲ್ಲ. ದಾರಿತಪ್ಪಿಸುವ ವೀಡಿಯೋ ಹರಡಿದ ಅಪರಾಧಕ್ಕಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು DCP ಅವರ ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಲಾಗಿತ್ತು.

ಪ್ರತ್ಯೇಕ ವೀಡಿಯೋ ಹೇಳಿಕೆಯಲ್ಲಿ ಉಪ ಆಯುಕ್ತ ಗೌರವ್ ಬನ್ಸ್ ವಾಲ್ ಅವರು, ‘ದಾರಿತಪ್ಪಿಸುವ ವೀಡಿಯೋ’ ವೈರಲ್‌ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಈ ಸಂಬಂಧ ಆದಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಹೇಳಿದ್ದರು.

►ಹಲವು ವೀಡಿಯೋಗಳಲ್ಲಿ ಒಂದೇ ದೃಶ್ಯ

ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡ್ಯಾನ್ಸರ್‌ ಗಳು ಹಾಗೂ ಇತರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೋಗಳು ಪೊಲೀಸರ ಹೇಳಿಕೆಗೆ ವಿರುದ್ಧವಾಗಿವೆ ಎಂದು ‘altnews.in’ ನಡೆಸಿದ fact check ತಿಳಿಸಿದೆ.

Full View

ವೈರಲ್ ಕ್ಲಿಪ್ ನಲ್ಲಿರುವ ಡ್ಯಾನ್ಸರ್ ಗಳಲ್ಲಿ ಒಬ್ಬರು ಕಾರ್ಯಕ್ರಮದ ಹಲವು ವೀಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ @queen_juhi_002_ ನಲ್ಲಿ ಪೋಸ್ಟ್ ಮಾಡಿದ್ದರು. ಈ ವರದಿ ಬರೆಯುವ ವೇಳೆಗೆ ಆ ಖಾತೆಯನ್ನು ಡಿಲೀಟ್‌ ಮಾಡಲಾಗಿತ್ತು.

 

ಅವರು ಹಂಚಿಕೊಂಡಿದ್ದ ಕನಿಷ್ಠ ನಾಲ್ಕು ವೀಡಿಯೋಗಳಲ್ಲಿ ರಾಯ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿರುವಂತೆಯೇ ಡ್ಯಾನ್ಸರ್ ಗಳು ಅದೇ ರೀತಿಯ ವೇಷಭೂಷಣ ಧರಿಸಿರುವುದು ಕಂಡುಬರುತ್ತದೆ. ಈ ವೀಡಿಯೋಗಳಲ್ಲೆಲ್ಲ ಡ್ಯಾನ್ಸರ್ ಗಳ ಸುತ್ತಮುತ್ತ ಪೊಲೀಸ್ ಸಿಬ್ಬಂದಿ ಇರುವುದು, ಅವರು ಪ್ರದರ್ಶನ ವೀಕ್ಷಿಸುತ್ತಿರುವುದು ಹಾಗೂ ಕೆಲವರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿರುವುದು ಗೋಚರಿಸುತ್ತದೆ.

 

ಡ್ಯಾನ್ಸರ್ ಒಬ್ಬರು ಹಂಚಿಕೊಂಡಿದ್ದ ವೀಡಿಯೋದ ಸ್ಕ್ರೀನ್ ರೆಕಾರ್ಡಿಂಗ್ ನಲ್ಲಿಯೂ ಡ್ಯಾನ್ಸರ್ ಗಳು ರಾಯ್ ಅವರ ಪೋಸ್ಟ್ ನಲ್ಲಿರುವಂತೆಯೇ ಅದೇ ವೇಷಭೂಷಣ ಧರಿಸಿರುವುದು ಕಾಣಿಸುತ್ತದೆ. ವೇದಿಕೆಯ ಮೇಲೆ ಹಾಗೂ ವೇದಿಕೆಯ ಕೆಳಗೆ ಪೊಲೀಸ್ ಸಿಬ್ಬಂದಿ ಇರುವುದೂ ಸ್ಪಷ್ಟವಾಗಿ ಗೋಚರಿಸುತ್ತದೆ.

ವೀಡಿಯೋದಲ್ಲಿನ ಪ್ರಮುಖ ದೃಶ್ಯವೊಂದರಲ್ಲಿ ಪ್ರೇಕ್ಷಕರಲ್ಲೊಬ್ಬರು ವೀಡಿಯೋ ಕರೆಯಲ್ಲಿ ಮಾತನಾಡುತ್ತಿರುವುದೂ ಕಾಣಿಸುತ್ತದೆ.

ಡ್ಯಾನ್ಸರ್ ಮತ್ತು ರಾಯ್ ಅವರು ಹಂಚಿಕೊಂಡಿರುವ ವೀಡಿಯೋಗಳ ಹಿನ್ನೆಲೆ ಹಾಗೂ ಸನ್ನಿವೇಶವೂ ಒಂದೇ ಆಗಿದೆ. ಎರಡೂ ವೀಡಿಯೋಗಳ ದೃಶ್ಯಗಳನ್ನು ಹೋಲಿಸಿದಾಗ ಒಂದೇ ಸ್ಥಳ ಮತ್ತು ಒಂದೇ ರೀತಿಯ ಪರಿಸರ ಕಂಡುಬರುತ್ತದೆ.

►ಮತ್ತೊಂದು ಕೋನದಿಂದಲೂ ಚಿತ್ರೀಕರಣ

ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರ @aman_bhu_2427 ಅವರು ಹಂಚಿಕೊಂಡ ವೀಡಿಯೋದಲ್ಲಿ ಇದೇ ಪ್ರದರ್ಶನದಲ್ಲಿ ಭಾಗವಹಿಸಿದ್ದ ಅದೇ ಡ್ಯಾನ್ಸರ್‌ ಗಳನ್ನು ಮತ್ತೊಂದು ಕೋನದಿಂದ ಚಿತ್ರೀಕರಿಸಿರುವುದು ಕಂಡುಬರುತ್ತದೆ. ವೀಡಿಯೋದಲ್ಲಿರುವ ಬರಹದ ಪ್ರಕಾರ, ಅದನ್ನು ‘ಲಾಟ್ ಭೈರವ ಮಂದಿರ’ದಲ್ಲಿ ಚಿತ್ರೀಕರಿಸಲಾಗಿದೆ.

Full View

ಈ ವೀಡಿಯೋದಲ್ಲೂ ವೇದಿಕೆಯ ಮೇಲೆ ಡ್ಯಾನ್ಸರ್ ಗಳ ಸುತ್ತ ಹಲವು ಪೊಲೀಸ್ ಸಿಬ್ಬಂದಿ ಜಮಾಯಿಸಿರುವುದು ಕಂಡುಬರುತ್ತದೆ. ಅವರಲ್ಲಿ ಕೆಲವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಪ್ರದರ್ಶನವನ್ನು ರೆಕಾರ್ಡ್ ಮಾಡುತ್ತಿರುವುದೂ ಸ್ಪಷ್ಟವಾಗಿದೆ.

ಸುಶೀಲಾ ಸೇಠ್ ಎಂಬ ಮತ್ತೊಬ್ಬ ಇನ್ಸ್ಟಾಗ್ರಾಮ್ ಬಳಕೆದಾರರೂ ಸಮವಸ್ತ್ರ ಧರಿಸಿರುವ ಹಲವು ಪೊಲೀಸ್ ಸಿಬ್ಬಂದಿಯ ನಡುವೆ ಡ್ಯಾನ್ಸರ್ ಗಳು ಇರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ಫೇಸ್ಬುಕ್ ನಲ್ಲಿಯೂ ಮತ್ತೊಂದು ವೀಡಿಯೋ ಲಭ್ಯವಾಗಿದ್ದು, ಅದರಲ್ಲಿ ವೇದಿಕೆಯ ರಚನೆ ಸ್ಪಷ್ಟವಾಗಿ ಕಾಣಿಸುತ್ತದೆ. ವೇದಿಕೆಯ ಹಿಂಭಾಗದಲ್ಲಿ ಕೆಂಪು ಬಣ್ಣದ ದೇವಾಲಯವೊಂದು ಇರುವುದೂ ಗೋಚರಿಸುತ್ತದೆ.

 

ಕಾರ್ಯಕ್ರಮದ ಸಂಪೂರ್ಣ ವೀಡಿಯೋ AI ಮೂಲಕ ಸೃಷ್ಟಿಯಾಗಿದೆಯೇ ಅಥವಾ ಪೊಲೀಸರು ಪ್ರದರ್ಶನ ವೀಕ್ಷಿಸುತ್ತಿರುವ ಹಾಗೂ ಚಿತ್ರೀಕರಿಸುತ್ತಿರುವ ಭಾಗ ಮಾತ್ರ AI ಮೂಲಕ ಸೃಷ್ಟಿಯಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಡ್ಯಾನ್ಸರ್ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಹಂಚಿಕೊಂಡಿರುವ ವೀಡಿಯೋಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಮೂರು ಅಂಶಗಳು ಸ್ಪಷ್ಟವಾಗುತ್ತವೆ.

• ಮೊದಲನೆಯದು: ಘಟನೆ ‘ಬಾಬಾ ಲಾಟ್ ಭೈರವ ಬಾರಾತ್ ಮೆರವಣಿಗೆ’ಯ ಸಂದರ್ಭದಲ್ಲೇ ನಡೆದಿದೆ. ಇದೇ ಕಾರ್ಯಕ್ರಮದ ವಿವಿಧ ಕೋನಗಳಿಂದ ಚಿತ್ರೀಕರಿಸಿದ ವೀಡಿಯೋಗಳನ್ನು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ.

• ಎರಡನೆಯದು: ಡ್ಯಾನ್ಸ್ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸಮವಸ್ತ್ರ ಧರಿಸಿದ್ದ ಪೊಲೀಸ್ ಸಿಬ್ಬಂದಿ ವೇದಿಕೆಯ ಮೇಲೆ ಹಾಗೂ ವೇದಿಕೆಯ ಕೆಳಗೆ ನಿಂತು ಡ್ಯಾನ್ಸರ್‌ ಗಳನ್ನು ವೀಕ್ಷಿಸುತ್ತಿದ್ದರು.

• ಮೂರನೆಯದು: ಒಂದಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ ಪ್ರದರ್ಶನವನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ಚಿತ್ರೀಕರಿಸುತ್ತಿರುವುದು ವಿವಿಧ ವೀಡಿಯೋಗಳಲ್ಲಿ ಕಾಣಿಸುತ್ತದೆ.

ಹೀಗಾಗಿ, ವೈರಲ್ ವೀಡಿಯೋ AI ಅಥವಾ ಕೃತಕ ಬುದ್ಧಿಮತ್ತೆ ಮೂಲಕ ಸೃಷ್ಟಿಸಲಾಗಿದೆ ಎಂಬ ಕಾಶಿ DCP ಅವರ ಹೇಳಿಕೆಯು ಲಭ್ಯವಿರುವ ಹಲವು ವೀಡಿಯೋಗಳ ದೃಶ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ವಿವಿಧ ವ್ಯಕ್ತಿಗಳು ಪ್ರತ್ಯೇಕವಾಗಿ ಹಂಚಿಕೊಂಡಿರುವ ವೀಡಿಯೋಗಳಲ್ಲಿ ಅದೇ ಡ್ಯಾನ್ಸರ್ ಗಳು, ಅದೇ ವೇಷಭೂಷಣ, ಒಂದೇ ರೀತಿಯ ಹಿನ್ನೆಲೆ ಹಾಗೂ ಪೊಲೀಸ್ ಸಿಬ್ಬಂದಿಯ ಉಪಸ್ಥಿತಿ ಕಾಣಿಸುತ್ತಿರುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಹೇಳಿಕೆಯ ಸತ್ಯಾಸತ್ಯತೆ ಪ್ರಶ್ನಾರ್ಹವಾಗಿದೆ.

ಸೌಜನ್ಯ: Altnews.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor