ಶೃಂಗೇರಿ ಮತ ಎಣಿಕೆಯ ವೀಡಿಯೋ ನಾಪತ್ತೆ | ‘ಸಬೂಬುಗಳನ್ನು ಒಪ್ಪುವುದಿಲ್ಲ, ದಾಖಲೆಗಳನ್ನು ಹಾಜರುಪಡಿಸಿ’: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಚಾಟಿ
ದಾಖಲೆಗಳನ್ನು ಸಲ್ಲಿಸದಿದ್ದರೆ ಪ್ರತಿಕೂಲ ತೀರ್ಮಾನದ ಎಚ್ಚರಿಕೆ
Photo Credit: PTI
ಹೊಸದಿಲ್ಲಿ: ‘ಚುನಾವಣೆ ನಡೆಸುವುದೇ ನಿಮ್ಮ ಮುಖ್ಯ ಉದ್ದೇಶ. ಹಾಗಿರುವಾಗ ದಾಖಲೆಗಳು ಎಲ್ಲಿ ಹೋದವು? ಇಂತಹ ಸಬೂಬುಗಳನ್ನು ನಾವು ಒಪ್ಪುವುದಿಲ್ಲ’ — 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಶೃಂಗೇರಿ ಕ್ಷೇತ್ರದ ಮತ ಎಣಿಕೆಯ ವಿಡಿಯೋ ಪತ್ತೆಯಾಗಿಲ್ಲ ಎಂದು ಹೇಳಿದ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸುಪ್ರೀಂ ಕೋರ್ಟ್ ಬುಧವಾರ ಹೀಗೆ ಚಾಟಿ ಬೀಸಿತು. ಮುಂದಿನ ವಿಚಾರಣೆಯ ದಿನದಂದು ಲಭ್ಯವಿರುವ ಎಲ್ಲ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ ನ್ಯಾಯಪೀಠ, ತಪ್ಪಿದರೆ ಆಯೋಗದ ವಿರುದ್ಧ ಪ್ರತಿಕೂಲ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿತು ಎಂದು Barandbench ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ದೇವ ಅವರಿದ್ದ ಪೀಠವು, ಚುನಾವಣೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನೇ ಪತ್ತೆಹಚ್ಚಲು ಸಾಧ್ಯವಾಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
‘ನಿಮ್ಮ ಬಳಿ ದಾಖಲೆ ಇರಲೇಬೇಕು. “ನಾವು ಅದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳುವ ಪ್ರಶ್ನೆಯೇ ಎಲ್ಲಿ ಬರುತ್ತದೆ? ನೀವು ಅದನ್ನು ಆಯ್ಕೆಯಾದ ಅಭ್ಯರ್ಥಿಗೆ ನೀಡಿದ್ದೀರಿ. ದಾಖಲೆಗಳ ರಕ್ಷಣೆಯೇ ಇಲ್ಲದಂತಾಗಿದೆ. ನಿಮ್ಮ ಬಳಿ ಏನೇ ಇದ್ದರೂ ಮುಂದಿನ ವಿಚಾರಣೆಯ ದಿನದಂದು ಹಾಜರುಪಡಿಸಿ. ಇಲ್ಲದಿದ್ದರೆ, ನಿಮ್ಮ ವಿರುದ್ಧ ಪ್ರತಿಕೂಲ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಂತಹ ಸಬೂಬುಗಳನ್ನು ನಾವು ಒಪ್ಪುವುದಿಲ್ಲ’ ಎಂದು ನ್ಯಾಯಪೀಠ ಖಡಕ್ಕಾಗಿ ಹೇಳಿತು.
ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ನಡುವಿನ ಚುನಾವಣಾ ವಿವಾದದ ವಿಚಾರಣೆ ವೇಳೆ ಈ ಬೆಳವಣಿಗೆ ನಡೆಯಿತು.
2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಶೃಂಗೇರಿ ಕ್ಷೇತ್ರದಿಂದ 201 ಮತಗಳ ಅಲ್ಪ ಅಂತರದಲ್ಲಿ ಗೆದ್ದಿದ್ದರು. ಆದರೆ, ಮರುಎಣಿಕೆಯ ಬಳಿಕ ಜೀವರಾಜ್ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ಘೋಷಿಸಲಾಯಿತು. ಇದರ ಬೆನ್ನಲ್ಲೇ ರಾಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿತ್ತು.
ಮೇ ತಿಂಗಳಲ್ಲಿ ರಾಜೇಗೌಡ ಅವರ ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಅವರು ಶಾಸಕರಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರ ನೀಡಿತ್ತು.
ವಿಡಿಯೋ ಎಲ್ಲಿ ಹೋಯಿತು?
ಮೂಲ ಮತ ಎಣಿಕೆ ಮತ್ತು ಇತ್ತೀಚಿನ ಮರುಎಣಿಕೆಗೆ ಸಂಬಂಧಿಸಿದ ವೀಕ್ಷಕರ ವರದಿ ಹಾಗೂ ವಿಡಿಯೋ ರೆಕಾರ್ಡಿಂಗ್ಗಳನ್ನು ಪರಿಶೀಲಿಸಲು ರಾಜೇಗೌಡ ಬಯಸಿದ್ದಾರೆ ಎಂದು ನ್ಯಾಯಾಲಯ ಉಲ್ಲೇಖಿಸಿತು. ಈ ದಾಖಲೆಗಳನ್ನು ಹಾಜರುಪಡಿಸುವಂತೆ ECIಗೆ ಸೂಚಿಸಿದಾಗ, ಆಯೋಗದ ಪರ ಹಿರಿಯ ವಕೀಲ ಶೇಷಾದ್ರಿ ನಾಯ್ಡು ಅವರು 2023ರ ಮತ ಎಣಿಕೆಯ ವಿಡಿಯೋವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಆದರೆ, ಈ ವಿವರಣೆಯಿಂದ ನ್ಯಾಯಪೀಠಕ್ಕೆ ಸಮಾಧಾನವಾಗಲಿಲ್ಲ. ದಾಖಲೆಗಳನ್ನು ಸಲ್ಲಿಸದಿದ್ದರೆ ಆಯೋಗದ ವಿರುದ್ಧ ಪ್ರತಿಕೂಲ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಮತ್ತೊಮ್ಮೆ ಎಚ್ಚರಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು 2027ರ ಫೆಬ್ರವರಿ 15ಕ್ಕೆ ಮುಂದೂಡಿತು.
ಮರುಎಣಿಕೆಯಲ್ಲಿ ಬದಲಾದ ಫಲಿತಾಂಶ
ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿ, ರಾಜೇಗೌಡ ಅವರ ಗೆಲುವನ್ನು ಪ್ರಶ್ನಿಸಿದ್ದರು.
ಎಪ್ರಿಲ್ 6ರಂದು ಹೈಕೋರ್ಟ್ ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳ ಮರುಪರಿಶೀಲನೆಯೂ ಸೇರಿದಂತೆ ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು. 2026ರ ಮೇ 3ರಂದು ಚುನಾವಣಾಧಿಕಾರಿ ಪರಿಷ್ಕೃತ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದರು. ಈ ವೇಳೆ ರಾಜೇಗೌಡ ಅವರ ಮತಗಳ ಸಂಖ್ಯೆ 255ರಷ್ಟು ಕಡಿಮೆಯಾಯಿತು. ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು.
ಈ ಫಲಿತಾಂಶವನ್ನು ರಾಜೇಗೌಡ ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದರು. ಹೈಕೋರ್ಟ್ ಕೇವಲ ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಆದೇಶಿಸಿತ್ತು. ಆದರೆ, ಚುನಾವಣಾಧಿಕಾರಿ ತಮ್ಮ ಪರವಾಗಿದ್ದ 562 ಮಾನ್ಯ ಅಂಚೆ ಮತಪತ್ರಗಳನ್ನು ಕಾನೂನುಬಾಹಿರವಾಗಿ ಮರುಪರಿಶೀಲನೆಗೆ ಒಳಪಡಿಸಿದರು ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜೀವರಾಜ್ ಅವರು ತಮ್ಮ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅನುಕೂಲಕರ ತೀರ್ಮಾನ ನೀಡಿದ್ದರೂ, ಮರುಎಣಿಕೆಯ ಅಗತ್ಯವೇನಿತ್ತು ಎಂದು ರಾಜೇಗೌಡ ಪ್ರಶ್ನಿಸಿದ್ದಾರೆ.
ಗಮನಾರ್ಹವಾಗಿ, ಅಂಚೆ ಮತಪತ್ರಗಳನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ಜೀವರಾಜ್ ಎದುರಿಸುತ್ತಿದ್ದಾರೆ. ಆದರೆ, ಕರ್ನಾಟಕ ಹೈಕೋರ್ಟ್ ಈ ವರ್ಷದ ಮೇ ತಿಂಗಳಲ್ಲಿ ಅವರ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ.