ಈರುಳ್ಳಿ ಬೆಲೆಗೆ ಸರ್ಕಾರಗಳು ಬೀಳುವುದಾದರೆ, ವಿದ್ಯಾರ್ಥಿಗಳ ಕಾರಣಕ್ಕೆ ಯಾಕೆ ಬೀಳಬಾರದು?: ಸೋನಂ ವಾಂಗ್ಚುಕ್ ಪ್ರಶ್ನೆ
NEET ಅಕ್ರಮದ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 21 ದಿನಗಳಿಂದ ಆಮರಣಾಂತ ಉಪವಾಸ
ಸೋನಂ ವಾಂಗ್ಚುಕ್ | Photo Credit : PTI
ಹೊಸದಿಲ್ಲಿ: "ಈರುಳ್ಳಿ ಬೆಲೆ ಏರಿಕೆಯಿಂದ ಸರ್ಕಾರಗಳು ಬಿದ್ದು ಹೋಗುವುದಾದರೆ, ವಿದ್ಯಾರ್ಥಿಗಳ ಕಾರಣಕ್ಕೆ ಯಾಕೆ ಬೀಳಬಾರದು?" ಎಂದು ಶಿಕ್ಷಣ ತಜ್ಞ ಹಾಗೂ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಪ್ರಶ್ನಿಸಿದ್ದಾರೆ.
ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಕಳೆದ 21 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಾಂಗ್ಚುಕ್, ತಮ್ಮ ದೇಹದ ಶೇ. 20ರಷ್ಟು ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳೂ ರಾಜಕೀಯ ಪರಿವರ್ತನೆ ತರಬಲ್ಲರು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹದ 20ನೇ ದಿನದ ಅಂತ್ಯದಲ್ಲಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ, ಜುಲೈ 20ರಂದು 'ಕಾಕ್ರೋಚ್ ಜನತಾ ಪಾರ್ಟಿ' ಆಯೋಜಿಸಿರುವ 'ಸಂಸತ್ ಚಲೋ' ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯೇ ಈ ಹೋರಾಟದ ಅತಿದೊಡ್ಡ ಶಕ್ತಿ ಎಂದು ಹೇಳಿದ್ದಾರೆ.
"ಹೌದು, ನಾನೀಗಲೂ ಜೀವಂತವಾಗಿದ್ದೇನೆ. ನಾನು ನನ್ನ ದೇಹದ ಶೇ. 20ರಷ್ಟು ತೂಕವನ್ನು ಕಳೆದುಕೊಂಡಿದ್ದೇನೆ. ಮೊದಲು ದೇಹದಲ್ಲಿನ ಕೊಬ್ಬು ಕರಗುತ್ತದೆ. ಬಳಿಕ ಮಾಂಸಖಂಡಗಳು ದುರ್ಬಲಗೊಳ್ಳುತ್ತವೆ. ಅದರ ನಂತರ ಅಂಗಾಂಗಗಳು ವಿಫಲಗೊಳ್ಳಲು ಆರಂಭಿಸುತ್ತವೆ. ಅಂತಿಮವಾಗಿ ಮೆದುಳು ನಿಷ್ಕ್ರಿಯವಾಗುತ್ತದೆ. ಆದರೆ, ಆ ಹಂತ ಇನ್ನೂ ಬಂದಿಲ್ಲ," ಎಂದು ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
"ನನ್ನ ಉಪವಾಸದ 20ನೇ ದಿನ ಅಂತ್ಯಗೊಳ್ಳುತ್ತಿದೆ. ಆದರೆ, ನನ್ನ ಮನಸ್ಸು ಈಗಲೂ ಚೆನ್ನಾಗಿದೆ ಎಂಬುದನ್ನು ಸಾಬೀತುಪಡಿಸಲು ಅವಕಾಶ ನೀಡಿ," ಎಂದು ಹೇಳುವ ಮೂಲಕ ತಮ್ಮ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂಬ ಭರವಸೆಯನ್ನು ಬೆಂಬಲಿಗರಿಗೆ ನೀಡಿದ್ದಾರೆ.
ಈ ಹೋರಾಟದಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಜನರು ಪದೇ ಪದೇ ಸಾರ್ವಜನಿಕ ಹೋರಾಟಗಳ ಶಕ್ತಿಯನ್ನು ಅನುಮಾನಿಸುತ್ತಾರೆ. ಈರುಳ್ಳಿ ಬೆಲೆ ಏರಿಕೆಯಿಂದ ಸರ್ಕಾರಗಳು ಬಿದ್ದು ಹೋಗಿರುವ ಉದಾಹರಣೆಗಳಿವೆ. ಹಾಗಿದ್ದರೆ, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಲ್ಲೂ ಜನಾಂದೋಲನಗಳು ರಾಜಕೀಯ ಬದಲಾವಣೆ ತರಲು ಸಾಧ್ಯವಿದೆ," ಎಂದು ಹೇಳಿದ್ದಾರೆ.