ಪಶ್ಚಿಮ ಏಶ್ಯಾ ಸಂಘರ್ಷ | ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ : ಇಂಧನ ಭದ್ರತೆ ಮತ್ತು ನಾವಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲು ನಿರ್ದೇಶನ
ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ,ಜು.30: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಸ್ಥಿತಿಯ ಮೌಲ್ಯಮಾಪನಕ್ಕಾಗಿ ಮತ್ತು ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಸನ್ನದ್ಧತೆಯನ್ನು ಪರಿಶೀಲಿಸಲು ಭದ್ರತೆ ಕುರಿತು ಸಂಪುಟ ಸಮಿತಿಯ (ಸಿಸಿಎಸ್) ನಾಲ್ಕನೇ ವಿಶೇಷ ಸಭೆಯು ಗುರುವಾರ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಸರ್ಬಾನಂದ ಸೋನೊವಾಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಸಹ ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಘರ್ಷವು ಬಹು ವಲಯಗಳಲ್ಲಿ ಸವಾಲುಗಳನ್ನೊಡ್ಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಮಗ್ರ ಕಾರ್ಯತಂತ್ರದ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ನಾಗರಿಕರಿಗೆ ರಕ್ಷಣಾ ಕ್ರಮಗಳನ್ನು ತ್ವರಿತಗೊಳಿಸಲು ಮತ್ತು ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗಳ ಭದ್ರತೆಗಾಗಿ ಏಕೀಕೃತ ಮತ್ತು ಸಂಘಟಿತ ಮೇಲ್ವಿಚಾರಣಾ ಕಾರ್ಯವಿಧಾನವನ್ನು ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಸ್ತುತ ಭೌಗೋಳಿಕ-ರಾಜಕೀಯ ಸ್ಥಿತಿಯ ಕುರಿತು ಸಂಪುಟ ಕಾರ್ಯದರ್ಶಿಗಳು ಸಭೆಗೆ ಮಾಹಿತಿ ನೀಡಿದರು.
ಕಚ್ಚಾ ತೈಲದ ಸ್ಥಿರ ಲಭ್ಯತೆಯಿಂದಾಗಿ ತೈಲ ಶುದ್ಧೀಕರಣ ಘಟಕಗಳು ಶೇ.100ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಮೂಲಗಳನ್ನು ವೈವಿಧ್ಯಗೊಳಿಸಿರುವುದು ಮತ್ತು ಪೈಪ್‌ಡ್ ನೈಸರ್ಗಿಕ ಅನಿಲ (ಪಿಎನ್‌ಜಿ) ಜಾಲಗಳನ್ನು ವಿಸ್ತರಿಸಿರುವುದು ಪ್ರಾದೇಶಿಕ ಹಡಗು ಸಾರಿಗೆಯ ಅಡೆತಡೆಗಳಿಂದ ದೇಶೀಯ ಪೂರೈಕೆಯನ್ನು ಸುರಕ್ಷಿತವಾಗಿರಿಸಿದೆ ಎಂದು ಅವರು ತಿಳಿಸಿದರು.
ಮುಂಬರುವ ಹಿಂಗಾರು ಬಿತ್ತನೆ ಋತುವಿಗಾಗಿ ರಸಗೊಬ್ಬರಗಳ ಅಗತ್ಯ ಮತ್ತು ರಸಗೊಬ್ಬರಗಳಿಗೆ ಪರ್ಯಾಯ ಮೂಲಗಳ ಬಗ್ಗೆಯೂ ಸಭೆಯು ಚರ್ಚಿಸಿತು.
ರಸಗೊಬ್ಬರಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ಸೂಚಿಸಿದರು.
ಸಂಘರ್ಷ ವಲಯಗಳಲ್ಲಿ ದೇಶಿ ಮತ್ತು ವಿದೇಶಿ ಧ್ವಜವನ್ನು ಹೊತ್ತಿರುವ ಹಡಗುಗಳಲ್ಲಿಯ ಭಾರತೀಯ ನಾವಿಕರ ಸ್ಥಿತಿಯ ಕುರಿತೂ ಸಭೆಯು ಚರ್ಚಿಸಿತು. ಸಕಾಲಿಕ ಮಾಹಿತಿ,ತುರ್ತು ನೆರವು ಮತ್ತು ನಾವಿಕರು ಮತ್ತು ಅವರ ಕುಟುಂಬಗಳೊಂದಿಗೆ ಸಮಾಲೋಚನೆಗಾಗಿ ಕಾರ್ಯವಿಧಾನವನ್ನು ಸ್ಥಾಪಿಸುವಂತೆ ಮೋದಿ ನಿರ್ದೇಶನ ನೀಡಿದರು.