×
Ad

Los Angeles | ಮೇಯರ್ ಚುನಾವಣೆಯ ಅಂತಿಮ ಹಂತಕ್ಕೆ ಭಾರತೀಯ ಮೂಲದ ನಿತ್ಯಾ ರಾಮನ್

ಝೊಹ್ರಾನ್ ಮಮ್ದಾನಿಯವರೊಂದಿಗೆ ಹೋಲಿಸಲಾಗುತ್ತಿರುವ ಈ ಪ್ರಗತಿಪರ ನಾಯಕಿ ಯಾರು?

Update: 2026-06-09 21:36 IST

ನಿತ್ಯಾ ರಾಮನ್ | Photo Credit : Instagram 

ಲಾಸ್ ಏಂಜಲೀಸ್: ಭಾರತೀಯ ಮೂಲದ ಡೆಮೋಕ್ರಾಟ್ ನಾಯಕಿ ನಿತ್ಯಾ ರಾಮನ್ ಅವರು ಲಾಸ್ ಏಂಜಲೀಸ್ ಮೇಯರ್ ಚುನಾವಣೆಯ ಅಂತಿಮ ಹಂತಕ್ಕೆ ಪ್ರವೇಶಿಸಿದ್ದಾರೆ. ಜೂನ್ 2ರಂದು ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಅವರು, ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ಎದುರಿಸಲಿದ್ದಾರೆ.

CNN ಹಾಗೂ AP ಸುದ್ದಿ ಸಂಸ್ಥೆಯ ಪ್ರಕಾರ, ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್ ಸದಸ್ಯೆಯಾಗಿರುವ ರಾಮನ್ 28.5% ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ. ರಿಪಬ್ಲಿಕನ್ ಬೆಂಬಲಿತ ಟೆಲಿವಿಷನ್ ತಾರೆ ಸ್ಪೆನ್ಸರ್ ಪ್ರಾಟ್ 25.8% ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಹೀಗಾಗಿ ಬಾಸ್ ಮತ್ತು ರಾಮನ್ ನಡುವೆಯೇ ನವೆಂಬರ್ನಲ್ಲಿ ಮೇಯರ್ ಹುದ್ದೆಗೆ ಹಣಾಹಣಿ ನಡೆಯಲಿದೆ.

44 ವರ್ಷದ ರಾಮನ್ ಅವರು 2020ರಿಂದ ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್ ನ ನಾಲ್ಕನೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಸಿಟಿ ಕೌನ್ಸಿಲ್‌ ಗೆ ಆಯ್ಕೆಯಾದ ಮೊದಲ ಏಷ್ಯನ್–ಅಮೆರಿಕನ್ ಮಹಿಳೆ ಹಾಗೂ ಮೊದಲ ದಕ್ಷಿಣ ಏಷ್ಯಾ ಮೂಲದ ಸದಸ್ಯೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಕೇರಳ ಮೂಲದ ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿದ ರಾಮನ್, ಆರು ವರ್ಷದವರಿದ್ದಾಗ ಕುಟುಂಬದೊಂದಿಗೆ ಅಮೆರಿಕದ ಲೂಸಿಯಾನಾಗೆ ತೆರಳಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೊಲಿಟಿಕಲ್‌ ಥಿಯರಿ ವಿಷಯದಲ್ಲಿ ಪದವಿ ಪಡೆದ ಅವರು, ಬಳಿಕ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ಅರ್ಬನ್‌ ಪ್ಲಾನಿಂಗ್‌ ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

ಲಾಸ್ ಏಂಜಲೀಸ್‌ ಗೆ ತೆರಳುವ ಮೊದಲು ಅವರು ಭಾರತದಲ್ಲಿಯೂ ಕೆಲಸ ಮಾಡಿದ್ದರು. ಚೆನ್ನೈನಲ್ಲಿ ಹಿಂದುಳಿದ ಸಮುದಾಯಗಳ ಪರವಾಗಿ ಕಾರ್ಯನಿರ್ವಹಿಸುವ ‘ಟ್ರಾನ್ಸ್ಪರಂಟ್ ಚೆನ್ನೈ’ ಎಂಬ ಲಾಭರಹಿತ ಸಂಶೋಧನಾ ಸಂಸ್ಥೆಯನ್ನು ಅವರು ಸ್ಥಾಪಿಸಿದ್ದರು. ಬಳಿಕ ಲಾಸ್ ಏಂಜಲೀಸ್‌ ಗೆ ಸ್ಥಳಾಂತರಗೊಂಡ ಅವರು ನಗರ ಆಡಳಿತದಲ್ಲಿ ಕೆಲಸ ಮಾಡಿದ್ದು, 2017ರಲ್ಲಿ ನಿರಾಶ್ರಿತರಿಗೆ ನೆರವಾಗುವ ‘ಸೆಲಾ ನೆಬರ್ಹುಡ್ ಹೋಮ್ಲೆಸ್ ಕೋಅಲಿಷನ್’ ಸಂಸ್ಥೆಯನ್ನು ಆರಂಭಿಸಿದ್ದರು.

ನಿರಾಶ್ರಿತರ ಸಮಸ್ಯೆಯನ್ನು ಪ್ರಚಾರದ ಪ್ರಮುಖ ವಿಚಾರವನ್ನು ಮಾಡಿಕೊಂಡು 2020ರಲ್ಲಿ ರಾಜಕೀಯ ಪ್ರವೇಶಿಸಿದ ರಾಮನ್, ಆ ವೇಳೆ ನ್ಯಾನ್ಸಿ ಪೆಲೋಸಿ ಹಾಗೂ ಹಿಲರಿ ಕ್ಲಿಂಟನ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿ ಸಿಟಿ ಕೌನ್ಸಿಲ್‌ ಗೆ ಆಯ್ಕೆಯಾಗಿದ್ದರು.

ರಾಮನ್ ಅವರ ಮೇಯರ್ ಸ್ಪರ್ಧೆ ಲಾಸ್ ಏಂಜಲೀಸ್ ರಾಜಕೀಯದಲ್ಲಿ ಗಮನ ಸೆಳೆದಿದೆ. ಕೆಲವೇ ವಾರಗಳ ಹಿಂದೆ ಹಾಲಿ ಮೇಯರ್ ಕರೆನ್ ಬಾಸ್ ಅವರಿಗೆ ಬೆಂಬಲ ಸೂಚಿಸಿದ್ದ ಅವರು, ಬಳಿಕ ಸ್ವತಃ ಸ್ಪರ್ಧೆಗೆ ಇಳಿದಿರುವುದು ಚರ್ಚೆಗೆ ಕಾರಣವಾಗಿತ್ತು.

ರಾಮನ್ ಅವರನ್ನು ನ್ಯೂಯಾರ್ಕ್ ನ ಪ್ರಗತಿಪರ ನಾಯಕ ಝೊಹ್ರಾನ್ ಮಮ್ದಾನಿಯವರೊಂದಿಗೆ ಹೋಲಿಸಲಾಗುತ್ತಿದೆ. ಇಬ್ಬರೂ ಅಮೆರಿಕದ ಡೆಮೋಕ್ರಾಟಿಕ್ ಸೋಷಿಯಲಿಸ್ಟ್ ಗಳೊಂದಿಗೆ ನಂಟು ಹೊಂದಿದ್ದು, ವಸತಿ, ಸಾಮಾಜಿಕ ನ್ಯಾಯ ಹಾಗೂ ಸಾರ್ವಜನಿಕ ಸೇವೆಗಳ ವಿಸ್ತರಣೆಗೆ ಒತ್ತು ನೀಡುತ್ತಿದ್ದಾರೆ.

×
Ad

ಮತ ಎಣಿಕೆಯ ಆರಂಭಿಕ ಹಂತದಲ್ಲಿ ಸ್ಪೆನ್ಸರ್ ಪ್ರಾಟ್ ಅವರಿಗಿಂತ ಹಿಂದುಳಿದಿದ್ದ ರಾಮನ್, ನಂತರ ಎಣಿಕೆಯಾದ ಮತಗಳಲ್ಲಿ ಮುನ್ನಡೆ ಸಾಧಿಸಿದರು. ರವಿವಾರದ ವೇಳೆಗೆ ಅವರು ಪ್ರಾಟ್ಗಿಂತ ಸುಮಾರು 43,000 ಹೆಚ್ಚು ಮತಗಳನ್ನು ಪಡೆದಿದ್ದರು. ಇದರಿಂದ ಅವರ ಮತಗಳ ಪ್ರಮಾಣವು ಸುಮಾರು ಐದು ಶೇಕಡಾ ಅಂಕಗಳಷ್ಟು ಹೆಚ್ಚಾಯಿತು.

ಫಲಿತಾಂಶದ ಬಳಿಕ ಪ್ರತಿಕ್ರಿಯಿಸಿದ ರಾಮನ್, ‘‘ಲಾಸ್ ಏಂಜಲೀಸ್ ಮೇಯರ್ ಸಾರ್ವತ್ರಿಕ ಚುನಾವಣೆಗೆ ಮುನ್ನಡೆಯಲು ಮತದಾರರು ಅವಕಾಶ ನೀಡಿರುವುದು ನನಗೆ ಗೌರವದ ವಿಷಯ. ನಮ್ಮ ಪ್ರಚಾರಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು’’ ಎಂದು ಹೇಳಿದ್ದಾರೆ.

ರಾಮನ್ ಅವರ ಚುನಾವಣಾ ಪ್ರಚಾರದಲ್ಲಿ ನಿರಾಶ್ರಿತರ ಸಮಸ್ಯೆಯೇ ಪ್ರಮುಖ ವಿಷಯವಾಗಿದೆ. 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿರುವ ಲಾಸ್ ಏಂಜಲೀಸ್ ನಲ್ಲಿ ರಸ್ತೆ ಬದಿಯ ಡೇರೆಗಳು ಮತ್ತು ಶಿಬಿರಗಳಲ್ಲಿ ವಾಸಿಸುವವರ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ನಗರವು ವಸತಿ ಕೊರತೆ ಮತ್ತು ನಿರಾಶ್ರಿತರ ಸಮಸ್ಯೆಯಿಂದ ತೀವ್ರ ಸವಾಲು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಹಿಡಿಯುವುದಾಗಿ ರಾಮನ್ ಹೇಳಿದ್ದಾರೆ.

ರಾಮನ್ ಅವರು ತಮ್ಮ ಪತಿ ವಾಲಿ ಚಂದ್ರಶೇಖರನ್ ಹಾಗೂ ಅವಳಿ ಮಕ್ಕಳಾದ ಕರ್ಣ ಮತ್ತು ಕಾವೇರಿ ಅವರೊಂದಿಗೆ ಲಾಸ್ ಏಂಜಲೀಸ್ನ ಸಿಲ್ವರ್ ಲೇಕ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News