ತೇಜಸ್ ಯುದ್ಧ ವಿಮಾನ ಪತನ: ತವರಿಗೆ ತಲುಪಿದ ಪೈಲಟ್ ನಮಾಂಶ್ ಅವರ ಪಾರ್ಥಿವ ಶರೀರ
Screengrab: X/ANI
ಹೊಸದಿಲ್ಲಿ,ನ.23: ದುಬೈ ಏರ್ ಶೋನಲ್ಲಿ ಕಳೆದ ಶುಕ್ರವಾರ ನ.21ರಂದು ಸಂಭವಿಸಿದ ತೇಜಸ್ ಫೈಟರ್ ಜೆಟ್ ಅವಘಡದಲ್ಲಿ ಮೃತಪಟ್ಟ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ರ ರವಿವಾರ ಅಂತಿಮ ವಿದಾಯ ಕೋರಲಾಯಿತು.
ಪೂರ್ವಿಕರ ಊರಾದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಾಟಿಯಾಲ್ಕರ್ ಗ್ರಾಮದಲ್ಲಿ ಅವರ ಪಾರ್ಥಿವ ಶರೀರದ ಅವಶೇಷಗಳ ಅಂತ್ಯಕ್ರಿಯೆ ನೆರವೇರಿತು. ಸೋದರಸಂಬಂಧಿ ನಿಶಾಂತ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ನಮಾಂಶ್ ಅವರ ಪಾರ್ಥಿವಶರೀರದ ಅವಶೇಷಗಳು ರವಿವಾರ ಮಧ್ಯಾಹ್ನ ಪಾಟಿಯಾಲ್ಕರ್ ಗ್ರಾಮವನ್ನು ತಲುಪಿದ್ದವು. ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿರುವ ಪತ್ನಿ ಅಫ್ಸಾನಾ ಅವರು ಸಮವಸ್ತ್ರದಲ್ಲಿ ಆಗಮಿಸಿ ಪತಿಗೆ ಅಂತಿಮ ನಮನ ಸಲ್ಲಿಸಿದರು. ವಾಯುಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಗಾಗ್ಗಲ್ ವಿಮಾನನಿಲ್ದಾಣಕ್ಕೆ ಆಗಮಿಸಿದ ನಮಾಂಶ್ ಅವರ ಪಾರ್ಥಿವ ಶರೀರದ ಅವಶೇಷಗಳಿಗೆ ಸಂಪುಟ ಸಚಿವ ಯದುವೇಂದ್ರ ಗೋಮಾ, ನಾಗ್ರೋಟಾ ಭಗ್ವಾನ್ನ ಶಾಸಕ ಆರ್.ಎಸ್.ಬಲಿ ಹಾಗೂ ಶಾಪುರ ಶಾಸಕ ಕೇವಲ್ಸಿಂಗ್ ಪಥಾನಿಯಾ ಶ್ರದ್ಧಾಂಜಲಿ ಅರ್ಪಿಸಿದರು.