ಗಾಂಧಿ ಮಾರ್ಗ ಹಿಡಿದ ‘ಜೆನ್ ಝಿ’ಗಳು
ಸರಕಾರ ಚಳವಳಿಯನ್ನು ಹತ್ತಿಕ್ಕಿದಷ್ಟು ಬಲವಾಗುತ್ತಿದೆ. ದಿಲ್ಲಿ, ಮುಂಬೈಗೆ ಬೇರೆ ಬೇರೆ ರಾಜ್ಯಗಳಿಂದಲೂ ಪ್ರತಿಭಟನಾಕಾರರು ಬಂದು ಬೆಂಬಲ ಕೊಟ್ಟಿದ್ದಾರೆ. ಮನೆಯವರಿಗೆ ಹೇಳದೆ, ಕೇಳದೆ ಉಟ್ಟ ಬಟ್ಟೆಯಲ್ಲಿ ಬಂದವರು ಬೇಕಾದಷ್ಟು ಹುಡುಗರಿದ್ದಾರೆ. ಅವರು ಯಾವ ಪಕ್ಷ ಅಥವಾ ಸಂಘಟನೆಗೆ ಸೇರಿದವರಲ್ಲ. ಸ್ವಇಚ್ಛೆಯಿಂದ ಬಂದವರು. ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ’ ಎಂಬುದು ಅವರ ಘೋಷಣೆ.
ಗಾಂಧಿ ಬದುಕಿದ್ದಾರೆ, ಮುಂದೆಯೂ ಬದುಕಿರುತ್ತಾರೆ. ಮಹಾತ್ಮಾ ದೈಹಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಅವರ ಚಿಂತನೆ, ಹೋರಾಟ ಕಣ್ಣ ಮುಂದಿವೆ. ‘18ರಿಂದ 25 ವರ್ಷದವರಿಗೆ ಸ್ವಾತಂತ್ರ್ಯ ಚಳವಳಿ ಪರಿಕಲ್ಪನೆ ಇಲ್ಲ. ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಅರಿವಿಲ್ಲ’ ಎಂದು ಭಾವಿಸಿದರೆ ತಪ್ಪಾದೀತು. ಎಲ್ಲರ ಬಗ್ಗೆ ಓದಿದ್ದಾರೆ. ತಿಳಿದಿದ್ದಾರೆ. ಇದರಿಂದಾಗಿ ‘ಜೆನ್‌ಝಿ’ಗಳ ಪ್ರತಿಭಟನೆಯಲ್ಲಿ ಅವರು ಇಣುಕುತ್ತಿದ್ದಾರೆ.
ಕಳೆದ 12 ವರ್ಷಗಳಿಂದ ಗಾಂಧಿ, ನೆಹರೂ ಅವರನ್ನು ಗೌರವಿಸಿದ್ದಕ್ಕಿಂತ ಅವಮಾನಿಸಿರುವುದೇ ಹೆಚ್ಚು. ಬಲಪಂಥೀಯರಿಗೆ ಇದು ‘ಪೊಲಿಟಿಕಲ್ ಅಜೆಂಡಾ’. ಅಲ್ಲದೆ, ನೆಹರೂ ಅವರನ್ನೇ ಎಲ್ಲ ಸಮಸ್ಯೆಗಳಿಗೂ ಹೊಣೆ ಮಾಡಲಾಗುತ್ತಿದೆ. ಯಾರನ್ನಾದರೂ ಟೀಕಿಸುವ ಮುನ್ನ ಅವರೇನು ಮಾಡಿದ್ದಾರೆಂದು ವಿಮರ್ಶೆಗೆ ಒಳಪಡಿಸದಿದ್ದರೆ ಅಪಚಾರವಾಗುತ್ತದೆ.
ಗಾಂಧಿ, ನೆಹರೂ, ಅಂಬೇಡ್ಕರ್ ಜನರ ಹೃದಯಗಳಲ್ಲಿ ಉಳಿದಿದ್ದಾರೆ. ಜೆನ್ ಝಿಗಳಿಗೂ ಅವರು ಸ್ಫೂರ್ತಿ. ಹೀಗಾಗಿ, ಪ್ರಧಾನ್ ‘ತಲೆದಂಡ’ ಪಡೆದ ಪ್ರತಿಭಟನೆ-ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮೂವರನ್ನು ‘ಸೆಂಟರ್ ಸ್ಟೇಜ್’ಗೆ ತಂದಿದ್ದಾರೆ. ಅವರನ್ನು ಅವಮಾನಿಸಿದವರಿಗೆ ತಿರುಗೇಟು ಕೊಡುತ್ತಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಮುಖಂಡ ಅಭಿಜೀತ್ ದೀಪ್ಕೆ ಮುಂಬೈಯಲ್ಲಿ, ‘‘ಗಾಂಧಿ ಭಾರತದ ಆತ್ಮ, ನೆಹರೂ ಮೆದುಳು, ಅಂಬೇಡ್ಕರ್ ಬೆನ್ನೆಲುಬು’’ ಎಂದಿದ್ದಾರೆ. ಸಿಜೆಪಿ ಸಹ ಸಂಚಾಲಕ ಸೌರವ್ ದಾಸ್, ‘‘ಉಪವಾಸ ಸತ್ಯಾಗ್ರಹ ಪ್ರಬಲ ಅಸ್ತ್ರ. ಅದಕ್ಕೆ ದೊಡ್ಡ ಇತಿಹಾಸವಿದೆ. ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಗಾಂಧಿ ಸತ್ಯಾಗ್ರಹ ಅಸ್ತ್ರ ಬಳಸಿದ್ದರು. ಈಗ ನಾವೂ ಬಳಸುತ್ತಿದ್ದೇವೆ’’ ಎಂದು ಹೇಳಿದ್ದಾರೆ. ‘ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್’ (ಎಐಎಸ್‌ಎ) ಮುಖ್ಯಸ್ಥೆ ನೇಹಾ ಬೋರಾ ತಮ್ಮ ಭಾಷಣಗಳಲ್ಲಿ ಸಾವಿತ್ರಿಬಾಯಿ ಫುಲೆ, ಭಗತ್‌ಸಿಂಗ್ ಅವರನ್ನು ನೆನಪು ಮಾಡಿದ್ದಾರೆ. ಇವು ಅವರ ಗಟ್ಟಿ ವೈಚಾರಿಕ ಚಿಂತನೆ.
ಮುಂಬೈಯಲ್ಲಿ ಸಿಜೆಪಿ ಪ್ರತಿಭಟನೆ ನಡೆಯುತ್ತಿದ್ದಾಗ, ದಿಲ್ಲಿಯಲ್ಲಿ ಎಡಪಕ್ಷಗಳ ವಿದ್ಯಾರ್ಥಿ- ಯುವ ಘಟಕಗಳ ಚಳವಳಿ ನಡೆದಿತ್ತು. ಎಲ್ಲಿಯೂ ಚಳವಳಿ ಹಳಿ ತಪ್ಪಲಿಲ್ಲ. ಪ್ರತಿಭಟನಾಕಾರರನ್ನು ಎಳೆದಾಡಿದ ಕೆಲವು ಪ್ರಕರಣ ಹೊರತುಪಡಿಸಿದರೆ, ಪೊಲೀಸರೂ ತಾಳ್ಮೆಯಿಂದ ನಡೆದುಕೊಂಡಿದ್ದಾರೆ. ಅಧಿಕಾರಿಯೊಬ್ಬ ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಬಂದಿದೆ. ಇನ್ನು ಶಿವಾಜಿ ಪಾರ್ಕ್ ಬಗ್ಗೆ ಹೇಳುವುದೇ ಬೇಡ. ಹುಡುಗರೇ ಪೊಲೀಸರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ, ‘‘ಸಿಜೆಪಿ ಹೋರಾಟ ಭರವಸೆ ಹುಟ್ಟಿಸಿದೆ. ಆರಂಭದಲ್ಲಿ ಕಾಕ್ರೋಚ್ ಚಳವಳಿಯನ್ನು ಅನುಮಾನದಿಂದ ನೋಡಿದ್ದೆ. ಈ ಹುಡುಗರು ಗಾಂಧಿ ಅವರನ್ನು ಓದಿಕೊಂಡಿದ್ದಾರೆ. ಅದರಿಂದಾಗಿ ಅವರನ್ನು ಅನುಸರಿಸಲು ಸಾಧ್ಯವಾಗಿದೆ’’ ಎಂದು ಮೆಚ್ಚಿಕೊಂಡಿದ್ದಾರೆ.
ದೇಶದಲ್ಲಿ 2010ರ ಬಳಿಕ ಅನೇಕ ಚಳವಳಿ ನಡೆದಿವೆ. ಭ್ರಷ್ಟಾಚಾರ ವಿರೋಧಿ ಆಂದೋಲನ, ಸಿಎಎ-ಎನ್‌ಆರ್‌ಸಿ ಪ್ರತಿಭಟನೆ, ಪಂಜಾಬ್-ಹರ್ಯಾಣ ರೈತರ ಹೋರಾಟಗಳು ಆಗಿವೆ. ಆದರೆ, ಇವು ಜೆನ್‌ಝಿ ಚಳವಳಿಯಷ್ಟು ಪರಿಣಾಮಕಾರಿಯಾಗಲಿಲ್ಲ. ಜೆನ್‌ಝಿಗಳು ಪೊಲೀಸರ ಏಟಿಗೆ ಬಗ್ಗಲಿಲ್ಲ. ಜಗ್ಗಲಿಲ್ಲ. ಪ್ರಧಾನ್ ರಾಜೀನಾಮೆಯಿಂದ ಮತ್ತಷ್ಟು ಉತ್ತೇಜಿತರಾಗಿರುವ ಜೆನ್‌ಝಿಗಳು ‘ಪ್ರಜಾಪ್ರಭುತ್ವದ ದೀವಿಗೆ’ ಹಿಡಿದು ಹೊರಟಿದ್ದಾರೆ. ಪ್ರಜಾಪ್ರಭುತ್ವ ರಕ್ಷಣೆ ಸದ್ಯ ಅವರ ಮುಂದಿರುವ ಗುರಿ. ಹೀಗಾಗಿ, ಮತದಾರರ ಪಟ್ಟಿಯಿಂದ 13ಕೋಟಿ ಹೆಸರು ತೆಗೆದಿರುವುದರ ವಿರುದ್ಧ ದನಿ ಎತ್ತಿದ್ದಾರೆ. ಸಿಇಸಿ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ. ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಟ್ಟರೆ ಹೋರಾಟದ ಗುರಿ ಮುಟ್ಟಿದಂತೆ.
ಸಿಇಸಿ ರಾಜೀನಾಮೆ ಬೇಡಿಕೆ ಮುಂದಿಟ್ಟುಕೊಂಡು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಇಂಡಿಯಾ ಬ್ಲಾಕ್’ ಮಿತ್ರ ಪಕ್ಷಗಳು ಚಳವಳಿ ನಡೆಸುತ್ತಿವೆ. ಇದೊಂದು ರೀತಿ ದಲಿತ ಕವಿ ಸಿದ್ದಲಿಂಗಯ್ಯ ಬರೆದಿರುವ ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಕಾವ್ಯದಂತೆ ಕಂಡರೂ, ಹೋರಾಟದ ಪಥಗಳು ಬದಲಾದರೆ ಸರಕಾರ ಮಂಡಿಯೂರುವುದಿಲ್ಲ. ಸಿಇಸಿ ರಾಜೀನಾಮೆ ಕೊಡುವುದಿಲ್ಲ. ಚಳವಳಿ ತೀವ್ರಗೊಂಡರೆ ಉದ್ದೇಶ ಈಡೇರಬಹುದು. ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಚಳವಳಿ ಗುರಿ ಮತ್ತು ದಾರಿ ಒಂದೇ. ಆದರೂ, ಒಂದೇ ವೇದಿಕೆಗೆ ಬರುತ್ತಿಲ್ಲ. ಬಹುಶಃ ಚಳವಳಿಯ ‘ಕ್ರೆಡಿಟ್’ ಪ್ರಶ್ನೆ ಇರಬಹುದೇನೊ?
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಿದಾಗಲೂ ಜೆನ್ ಝಿಗಳು ಜಂತರ್ ಮಂತರ್ ಕಡೆ ಮುಖ ಮಾಡಿದ್ದರು. ರಾಹುಲ್ ಗಾಂಧಿ ಪ್ರಧಾನಿ ಮನೆ ಮುಂದಿನ ಸ್ಥಳ ಆಯ್ಕೆ ಮಾಡಿಕೊಂಡಿದ್ದರು. ಹೋರಾಟ ತೀವ್ರಗೊಂಡಿದ್ದರಿಂದ ಸರಕಾರ ಸಚಿವರ ರಾಜೀನಾಮೆ ಪಡೆಯುವುದು ಅನಿವಾರ್ಯವಾಯಿತು.
ಈ ಬೆಳವಣಿಗೆಯಿಂದ ಮೋದಿ ಸರಕಾರ ಪೆಟ್ಟು ತಿಂದ ಹುಲಿಯಂತಾಗಿದೆ. ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ. ಅದಕ್ಕಾಗಿ ಎಲ್ಲ ತಂತ್ರಗಳನ್ನು ಅನುಸರಿಸುತ್ತಿದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗಾಗಿ ನಿಯೋಜಿತವಾದ ‘ಜಂತರ್ ಮಂತರ್’ಗೆ ಬ್ಯಾರಿಕೇಡ್ ಹಾಕಲಾಗಿದೆ. ಚಳವಳಿಗೆ ಅನುಮತಿ ನಿರಾಕರಿಸಲಾಗುತ್ತಿದೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ದೂರಕ್ಕೆ ಕರೆದೊಯ್ದು ಬಿಡುಗಡೆ ಮಾಡುತ್ತಿದ್ದಾರೆ. ಮಂಗಳವಾರವೂ ಆಕಾಶವಾಣಿ ಭವನದ ಬಳಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರರನ್ನು ವಶಕ್ಕೆ ಪಡೆದು ಬಿಡಲಾಗಿದೆ. ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವ ಸರಕಾರದ ಮುಖ್ಯಸ್ಥರು ಪ್ರತಿಭಟನೆ ಹತ್ತಿಕ್ಕುತ್ತಿರುವುದು ಜನ ವಿರೋಧಿ ನಡೆ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲದಿರುವುದು ವಿಷಾದದ ಸಂಗತಿ.
ಸಂವಿಧಾನದ 19 (1)(ಎ) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. 19 (1)(ಬಿ) ಶಾಂತಿಯುತವಾಗಿ ಸಭೆ ಸೇರಲು ಅವಕಾಶ ಕೊಟ್ಟಿದೆ. 19 (1) (ಡಿ) ಮುಕ್ತವಾಗಿ ಓಡಾಡುವ ಹಕ್ಕು ನೀಡಿದೆ. 19 (2), 19 (3), ಕಾನೂನು- ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೆಲವು ನಿರ್ಬಂಧಗಳನ್ನು ಹೇರಿದೆ. ಅನೇಕ ಸಂದರ್ಭಗಳಲ್ಲಿ, ‘ಪ್ರತಿಭಟನೆ ಸಾಂವಿಧಾನಿಕ ಹಕ್ಕು’ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ರಾಮಲೀಲಾ ಮೈದಾನ ಮತ್ತು ಗೃಹ ಕಾರ್ಯದರ್ಶಿ ವಿರುದ್ಧದ ಪ್ರಕರಣದಲ್ಲೂ ‘ಪ್ರತಿಭಟನೆ ಸಂವಿಧಾನದ ಹಕ್ಕು’ ಎಂದು ಸರ್ವೋಚ್ಚ ನ್ಯಾಯಾಲಯ ಸಾರಿದೆ. ಶಾಹೀನ್‌ಬಾಗ್ ಪ್ರಕರಣದಲ್ಲಿ, ‘ಜನರಿಗೆ ಪ್ರತಿಭಟಿಸುವ ಹಕ್ಕಿದೆ. ಬೇರೆಯವರ ಹಕ್ಕಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ಬಂದ್ ಮಾಡುವುದು ಸರಿಯಲ್ಲ’ ಎಂದಿದೆ. ಜೆನ್‌ಝಿಗಳು ಬೇರೆಯವರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಅವರನ್ನು ತಡೆಯಲಾಗುತ್ತಿದೆ. ಅಹಿಂಸಾತ್ಮಕ ಹೋರಾಟ ನಡೆಸಿದರೂ ಬಲವಂತವಾಗಿ ಹೊತ್ತೊಯ್ಯಲಾಗುತ್ತಿದೆ. ಆಳುವ ವರ್ಗ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸುತ್ತಿಲ್ಲ. ಈ ಕಡೆಗೂ ಕೋರ್ಟ್ ಗಮನ ಹರಿಸಬೇಕಾದ ಅಗತ್ಯವಿದೆ.
ಸರಕಾರ ಚಳವಳಿಯನ್ನು ಹತ್ತಿಕ್ಕಿದಷ್ಟು ಬಲವಾಗುತ್ತಿದೆ. ದಿಲ್ಲಿ, ಮುಂಬೈಗೆ ಬೇರೆ ಬೇರೆ ರಾಜ್ಯಗಳಿಂದಲೂ ಪ್ರತಿಭಟನಾಕಾರರು ಬಂದು ಬೆಂಬಲ ಕೊಟ್ಟಿದ್ದಾರೆ. ಮನೆಯವರಿಗೆ ಹೇಳದೆ, ಕೇಳದೆ ಉಟ್ಟ ಬಟ್ಟೆಯಲ್ಲಿ ಬಂದವರು ಬೇಕಾದಷ್ಟು ಹುಡುಗರಿದ್ದಾರೆ. ಅವರು ಯಾವ ಪಕ್ಷ ಅಥವಾ ಸಂಘಟನೆಗೆ ಸೇರಿದವರಲ್ಲ. ಸ್ವಇಚ್ಛೆಯಿಂದ ಬಂದವರು. ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ’ ಎಂಬುದು ಅವರ ಘೋಷಣೆ.
ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ (ಎಸ್‌ಐಆರ್) ವಿರುದ್ಧ ರಾಹುಲ್ ಗಾಂಧಿ ಮೊದಲು ದನಿ ಎತ್ತಿದವರು. ಆದರೆ, ಚಳವಳಿಗೆ ಬಲ ಬಂದಿದ್ದು ಕಾಕ್ರೋಚ್ ಜನತಾ ಪಕ್ಷದ ಸದಸ್ಯರು ಮತ್ತಿತರ ಜೆನ್ ಝಿಗಳು ಅಖಾಡಕ್ಕಿಳಿದ ಬಳಿಕ ಎಂಬುದು ನಿರ್ವಿವಾದ. ಇಂಡಿಯಾ ಬ್ಲಾಕ್‌ನಲ್ಲಿ ಬಹುತೇಕ ಒಗ್ಗಟ್ಟಿರುವಂತೆ ಕಂಡರೂ, ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಕ್ಷ’ (ಎಎಪಿ) ಹಾಗೂ ತಮಿಳುನಾಡಿನ ಡಿಎಂಕೆ ಒಕ್ಕೂಟದಲ್ಲಿಲ್ಲ. ಕಾಕ್ರೋಚ್ ಪಾರ್ಟಿಯ ಮುಂಬೈ ಹೋರಾಟದಲ್ಲಿ ಉದ್ಧವ್ ಠಾಕ್ರೆ ಅವರ ನೇತೃತ್ವದ ಶಿವಸೇನೆ ಪಾಲ್ಗೊಂಡಿತ್ತು. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಬೆಂಬಲ ಘೋಷಿಸಿತ್ತು. ಸಿಪಿಎಂ ಕೈಜೋಡಿಸಿತ್ತು. ಇವೆಲ್ಲವೂ ಒಂದು ರೀತಿ ಗೊಂದಲದ ನಡೆಗಳೇ. ಈ ಹಿಂದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿಭಟಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಚಳವಳಿಯಲ್ಲಿ ಮೊದಲು ಕಾಣಿಸಿಕೊಂಡಿದ್ದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್. ಕಾಂಗ್ರೆಸ್ ಮಾತ್ರವೇ ಸಿಜೆಪಿಯಿಂದ ಅಂತರ ಕಾಯ್ದುಕೊಂಡಿದೆ. ಅದಕ್ಕೆ ಕಾರಣ ಹುಡುಕುವ ಅಗತ್ಯವಿದೆ.
ಸಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಪುನಃ ಈ ತಿಂಗಳ 10ರಂದು ದಿಲ್ಲಿಯ ಜಂತರ್ ಮಂತರ್‌ಗೆ ಬರುತ್ತಿದ್ದಾರೆ. ‘‘ಪೊಲೀಸರು ಚಳವಳಿಗಾರರನ್ನು ತಡೆದರೆ ಇಡೀ ದಿಲ್ಲಿಯನ್ನೇ ಜಂತರ್ ಮಂತರ್ ಆಗಿ ಮಾಡುತ್ತೇವೆ’’ ಎಂದು ಸೌರವ್ ದಾಸ್ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಚಳವಳಿ ತೀವ್ರಗೊಂಡರೆ ರಾಜೀನಾಮೆ ಕೊಡುವುದು ಅನಿವಾರ್ಯವಾಗಬಹುದು. ಸರಕಾರ ಚಳವಳಿ ಒಡೆದರೆ ಇಕ್ಕಟ್ಟಿನಿಂದ ಪಾರಾಗಬಹುದು. ಯಾವ ಹಾದಿ ಆಯ್ಕೆ ಮಾಡಿಕೊಳ್ಳಲಿದೆ ನೋಡಬೇಕು.
(ಅಂಕಣಕಾರರು ಹಿರಿಯ ಪತ್ರಕರ್ತರು)