×
Ad

ಪೊಲೀಸ್ ಹುದ್ದೆಯಲ್ಲಿದ್ದೇ ‘ಇತಿಹಾಸ’ ಬರೆದ ಶಕೀಲ್ ಐ.ಎಸ್.

ಸಾಹಿತ್ಯ ಕ್ಷೇತ್ರದಲ್ಲಿ ಖಾಕಿ ಖದರ್

Update: 2026-04-01 14:48 IST

ಬೀದರ್: ಇತಿಹಾಸ, ಸಾಹಿತ್ಯದ ಕಡೆಗೆ ಒಲವು ಹೊಂದಿರುವ ಶಕೀಲ್ ಐ.ಎಸ್ ಅವರು ಪೊಲೀಸ್ ಹುದ್ದೆಯಲ್ಲಿದ್ದುಕೊಂಡೇ ಬೀದರ್ ಜಿಲ್ಲೆಯಲ್ಲಿನ ಸೂಫಿಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. ಹಾಗೆಯೇ ಬೀದರ್ ಜಿಲ್ಲೆಯ ಇತಿಹಾಸದ ಬಗ್ಗೆ ಎರಡು ಸಂಪುಟಗಳು ರಚಿಸಿದ್ದು, ಇನ್ನು ಈ ಜಿಲ್ಲೆಯ ಇತಿಹಾಸದ ಬಗ್ಗೆ ಬರವಣಿಗೆ ಮುಂದುವರೆಸಿದ್ದಾರೆ.

ಬಹುತೇಕ ಜನರು ಯಾವುದೇ ಹುದ್ದೆಗೆ ಸೇರಿದ ನಂತರ ಓದು, ಬರಹ ಬಿಟ್ಟು ತಮ್ಮ ಹುದ್ದೆ ಮತ್ತು ಕುಟುಂಬಕ್ಕಷ್ಟೇ ಸೀಮಿತವಾಗುವ ಈ ಸಂದರ್ಭದಲ್ಲಿ ಶಕೀಲ್ ತಮ್ಮ ಹವ್ಯಾಸದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬೀದರ್ ಜಿಲ್ಲೆಯ ಇತಿಹಾಸದ ಸಂಶೋಧನೆ ಕೈಗೊಂಡು ಬೀದರ್ ಜಿಲ್ಲೆಯ ಅದೆಷ್ಟೋ ಮರೆತಿರುವ ಇತಿಹಾಸ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಬೀದರ್ ಜಿಲ್ಲೆಯ ಇತಿಹಾಸದ ಬಗ್ಗೆ ಎರಡು ಸಂಪುಟಗಳು ಹೊರ ತಂದಿದ್ದಾರೆ. ಬೀದರ ಜಿಲ್ಲೆಯ ಇತಿಹಾಸದ 12 ಸಂಪುಟಗಳು ಹೊರತರುವ ಗುರಿ ಅವರದಾಗಿದೆ.

ಶಕೀಲ್ ಅವರ ಜೀವನ: ಶಕೀಲ್ ಐ.ಎಸ್ ಅವರು ಇಕ್ಬಾಲ್ ಸಾಬ್ ಸಿದ್ದೇಸೂರವಾಲೆ ಹಾಗೂ ಶಹನಾಜ್ ಬೇಗಂ ದಂಪತಿಗಳ ಮೊದಲನೇ ಸುಪುತ್ರನಾಗಿ ಬೀದರ್ ಜಿಲ್ಲೆಯ ಖೇಣಿ ರಂಜೋಳ ಗ್ರಾಮದಲ್ಲಿ 1982ರಲ್ಲಿ ಜನಿಸಿದರು. ರುಬೀನಾ ಬೇಗಂ ರನ್ನು ಮದುವೆಯಾದ ಅವರಿಗೆ ಮಹಮ್ಮದ್ ಫೈಸಲ್, ಝುನೇರಾ ನುರೈನ್ ಮಹಮ್ಮದ್ ಫುಜೈಲ್ ಎಂಬ ಮೂವರು ಮಕ್ಕಳಿದ್ದಾರೆ.

ತಮ್ಮ ಬಡತನದ ಕುಟುಂಬದಲ್ಲಿಯೇ ಬಿ.ಎ ಪದವಿ ಮುಗಿಸಿದ ಶಕೀಲ್ ಅವರು, 2005ನೇ ವರ್ಷದಲ್ಲಿ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದರು. ಬೀದರ್ ಜಿಲ್ಲೆಯ ಮನ್ನಾ ಏಖೇಳ್ಳಿ, ಚಿಟಗುಪ್ಪಾ, ಮುಡಬಿ ಹಾಗೂ ಹುಮನಾಬಾದ್ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಹುಮನಾಬಾದ್ ಪೊಲೀಸ್ ಠಾಣೆಯ ಉಪ ವಿಭಾಗ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ಅಭಿವೃಧ್ಧಿ ಪಥ ಲೇಖನಗಳ ಸಂಗ್ರಹ, ಹೈದ್ರಾಬಾದ್ ಕರ್ನಾಟಕ ಇತಿಹಾಸ, ಹುಮನಾಬಾದ ತಾಲೂಕು ಇತಿಹಾಸ, ದೇಶ ಮತ್ತು ಪ್ರಗತಿ ಲೇಖನಗಳ ಸಂಗ್ರಹ, ಬೀದರ ಜಿಲ್ಲೆಯ ಸೂಫಿಗಳು (ಸೂಫಿಗಳ ಕುರಿತು ಸಂಶೋಧನಾತ್ಮಕ ಗ್ರಂಥ), ನಳ ದಮಯಂತಿ (ಪೌರಾಣಿಕ ಕಥೆ), ಬೀದರ ಜಿಲ್ಲೆಯ ಇತಿಹಾಸ ಸಂಪುಟ-1 (ಆದಿ ಶಿಲಾಯುಗದಿಂದ ರಾಷ್ಟ್ರಕೂಟರವರೆಗೆ), ಬೀದರ ಜಿಲ್ಲೆಯ ಇತಿಹಾಸ ಸಂಪುಟ-2 (ಕಲ್ಯಾಣ ಚಾಲುಕ್ಯರು ಕ್ರಿ.ಶ 973ರಿಂದ 1189ರ ವರೆಗೆ), ಅಟ್ಟಳೆಯ ಗೊಂಕನೃಪ (ಐತಿಹಾಸಿಕ ಕಾಂದಬರಿ), ಕರ್ನಾಟಕವನ್ನಾಳಿದ ರಾಣಿಯರು, ಡಕ್ಕನ ಮುಸ್ಲಿಮ್ ಪ್ರಭುತ್ವದಲ್ಲಿ ಸೌಹಾರ್ದತೆ ಎಂಬ ಪ್ರಮುಖ ಕೃತಿಗಳನ್ನು ಶಕೀಲ್ ಅವರು ರಚಿಸಿದ್ದಾರೆ. ಹಾಗೆಯೇ ಭ್ರಷ್ಟಾಚಾರ ದೇಹಕ್ಕೂ ಮಾರಕ, ರೈತನ ಮಗ ಹಾಗೂ ಹಳ್ಳಿ ಹುಡಗಿ ಭತ್ತ ಎಂಬ ಮೂರು ನಾಟಕಗಳು ಬರೆದಿದ್ದಾರೆ. ಭ್ರಷ್ಟಾಚಾರ ದೇಹಕ್ಕೂ ಮಾರಕ ಎನ್ನುವ ಕಿರುಚಿತ್ರ ಕೂಡ ರಚಿಸಿದ್ದಾರೆ. ಅದೇ ರೀತಿ ಶಕೀಲ್ ಅವರಿಂದ ಮಹಮೂದ್ ಗವಾನ (ಕಾದಂಬರಿ), ಶವಗಳ ಸುತ್ತಮುತ್ತ (ಸಣ್ಣ ಕಥೆಗಳ ಸಂಕಲನ) ಹಾಗೂ ಬೀದರ ಜಿಲ್ಲೆಯ ಇತಿಹಾಸ ಸಂಪುಟ-3 ಪುಸ್ತಕಗಳು ಬಿಡುಗಡೆಗೆ ತಯಾರಾಗಿ ನಿಂತಿದೆ.

ಇದಷ್ಟೇ ಅಲ್ಲದೇ ಹಲವಾರು ಪುಸ್ತಕ, ಪತ್ರಿಕೆಗಳಲ್ಲಿ ಶಕೀಲ್ ಅವರು ಲೇಖನಗಳು ಬರೆದಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆಗಳನ್ನು ವಾಚಿಸಿದ್ದಾರೆ. ಹಾಗೆಯೇ ಪ್ರಮುಖ ಕಾರ್ಯಕ್ರಮಗಳಲ್ಲಿ ಉಪನ್ಯಾಸಕ ಕೂಡ ನೀಡಿದ್ದಾರೆ.

ಪ್ರಶಸ್ತಿಗಳು: ಕನ್ನಡ ರತ್ನ ಪ್ರಶಸ್ತಿ, ಕಲ್ಯಾಣ ಚನ್ನಶ್ರೀ ಪ್ರಶಸ್ತಿ, ಸಿದ್ದಾರ್ಥ ಪ್ರಶಸ್ತಿ, ಕನ್ನಡ ಸೇವಾ ರತ್ನ, ಯುವಶಕ್ತಿ ರತ್ನಶ್ರೀ ಪ್ರಶಸ್ತಿ, ಧರಿ ರತ್ನ ಪ್ರಶಸ್ತಿ, ಕನ್ನಡ ಕಂಠೀರವ ಪ್ರಶಸ್ತಿ, ಸಾಹಿತ್ಯ ಚೂಡಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೀದರ್ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಗಣೇಶ ರತ್ನ ಪ್ರಶಸ್ತಿ, ರಾಜಾ ನಾಲ್ವಡಿ ವೆಂಕಟಪ್ಪ ನಾಯ್ಕ ಪ್ರಶಸ್ತಿ ಹಾಗೂ ಸಂಸ್ಕಾರ ಸಿರಿ ಪ್ರಶಸ್ತಿಗಳು ಶಕೀಲ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಒಂದು ಸರಕಾರಿ ಹುದ್ದೆಯಲ್ಲಿದ್ದುಕೊಂಡು ಬಿಡುವಿನ ವೇಳೆಯಲ್ಲಿ ಸಾಹಿತ್ಯ, ಇತಿಹಾಸ, ಸಂಶೋಧನೆಯಲ್ಲಿ ತೊಡಗಿರುವ ಶಕೀಲ್ ಅವರು ಇಂದಿನ ಯುವಪೀಳಿಗೆಗೆ, ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಬೀದರ್ ಜಿಲ್ಲೆಯ ಇತಿಹಾಸವನ್ನು ಇಂಚಿಂಚಾಗಿ ಬಿಚ್ಚಿಟ್ಟ ಅವರನ್ನು ಇತಿಹಾಸಕಾರ ಪೊಲೀಸಪ್ಪ ಎಂದರೆ ತಪ್ಪಾಗಲಾರದು. ಬಹುತೇಕ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಓದುಗರು, ಪತ್ರಕರ್ತರು ಶಕೀಲ್ ಅವರ ಮುಂಬರುವ ಪುಸ್ತಕಗಳ ಬಿಡುಗಡೆಗೆ ಕಾದು ಕುಳಿತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News