ಫೋಟೊಶೂಟ್‌ಗೆ ಆಲಮಟ್ಟಿ ಹೊಸ ಹಾಟ್‌ಸ್ಪಾಟ್
ಕೃಷ್ಣಾ ನದಿ ತೀರದ ಸೌಂದರ್ಯ, ರಾತ್ರಿಯ ಅಲಂಕಾರ ಪ್ರವಾಸಿಗರನ್ನು ಸೆಳೆಯುತ್ತಿರುವ ಆಕರ್ಷಕ ತಾಣ
ಆಲಮಟ್ಟಿ: ಫೋಟೊಶೂಟ್‌ಗೆ ಆಲಮಟ್ಟಿ ನೆಚ್ಚಿನ ತಾಣವಾಗಿಹೊರಹೊಮ್ಮಿದೆ. ಬೃಹತ್ ಜಲಾಶಯ, ಸುಂದರ ಉದ್ಯಾನಗಳು, ಮ್ಯೂಸಿಕಲ್ ಫೌಂಟೇನ್,ಲೇಸರ್ ಶೋ ಹಾಗೂ ಹಸಿರು ಪರಿಸರ ಪ್ರವಾಸಿಗರನ್ನು ಸೆಳೆಯುತ್ತಿವೆ.
ಈ ಹಿಂದೆ ಕರಾವಳಿ ಪ್ರದೇಶಗಳನ್ನು ಆಯ್ಕೆ ಮಾಡುತ್ತಿದ್ದ ನವಜೋಡಿಗಳು ಇದೀಗ ಕೃಷ್ಣಾ ನದಿಯ ತೀರದ ಆಲಮಟ್ಟಿಯತ್ತ ಮುಖ ಮಾಡುತ್ತಿದ್ದಾರೆ. ನಿತ್ಯ ಸುಮಾರು 70ಕ್ಕೂ ಹೆಚ್ಚು ಜೋಡಿಗಳು ಇಲ್ಲಿ ಫೋಟೊಶೂಟ್ ನಡೆಸುತ್ತಿರುವುದು ವಿಶೇಷ.
ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಡ್ಯಾಂ ಸರ್ಕಲ್‌ವರೆಗೆ ಇರುವ ಸುಂದರ ರಸ್ತೆ, ಸಾಲು ಸಾಲು ಮರಗಳು ಹಾಗೂ ರಾತ್ರಿ ವೇಳೆ ಬೆಳಕಿನ ಅಲಂಕಾರ ಫೋಟೊಶೂಟ್‌ಗೆ ಮತ್ತಷ್ಟು ಮೆರುಗು ನೀಡುತ್ತಿವೆ. ಮದುವೆ ಉಡುಪಿನಲ್ಲಿ ನವಜೋಡಿಗಳು ವಿಭಿನ್ನ ಭಂಗಿಗಳಲ್ಲಿ ಪೋಸ್ ನೀಡುತ್ತಿದ್ದರೆ, ಛಾಯಾಗ್ರಾಹಕರು ಆ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಾರೆ.
ಇದರ ಜೊತೆಗೆ ಆಲಮಟ್ಟಿ ಸಮೀಪದ ಮುದ್ದು ಮಣಿಕಂಠ ಪೈಯರ್ ಕ್ಯಾಂಪ್ ಕೂಡ ಹೊಸ ಜೋಡಿಗಳ ಮದುವೆ ಹಾಗೂ ಪ್ರೀ ವೆಡ್ಡಿಂಗ್ ಫೋಟೊಶೂಟ್‌ಗೆ ಹೇಳಿ ಮಾಡಿಸಿದ ತಾಣವಾಗಿದೆ.
ಪ್ರಕೃತಿ ಸೌಂದರ್ಯ, ವಿಶೇಷ ಅಲಂಕಾರ, ಬಣ್ಣ ಬಣ್ಣದ ಬೆಳಕುಗಳು ಹಾಗೂ ಆಕರ್ಷಕ ಸೆಟ್ಟಿಂಗ್‌ಗಳು ನವಜೋಡಿಗಳ ಫೋಟೊಗಳಿಗೆ ಹೊಸ ಮೆರುಗು ನೀಡುತ್ತಿವೆ. ಸಂಜೆ ವೇಳೆಯಲ್ಲಿ ಇಲ್ಲಿ ನಡೆಯುವ ಫೋಟೊಶೂಟ್‌ಗಳು ವಿಶೇಷ ಆಕರ್ಷಣೆಯಾಗಿವೆ. ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜೋಡಿಗಳು ಆಗಮಿಸುತ್ತಿದ್ದು, ಸ್ಥಳೀಯ ವ್ಯಾಪಾರ ಹಾಗೂ ಉದ್ಯೋಗಕ್ಕೂ ಉತ್ತೇಜನ ದೊರೆತಿದೆ.
ನಿತ್ಯ ನವಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಕ್ಕೂ ಅನುಕೂಲವಾಗಿದೆ.
-ಶೇಖರ್ ಬಳ್ಳಾರಿ, ವ್ಯಾಪಾರಿ
ಆಲಮಟ್ಟಿಯ ಹಸಿರು ಪರಿಸರ ಹಾಗೂ ಮುದ್ದು ಮಣಿಕಂಠ ಪೈಯರ್ ಕ್ಯಾಂಪ್‌ನ ಸುಂದರ ವಾತಾವರಣ ಫೋಟೊಶೂಟ್‌ಗೆ ಅತ್ಯಂತ ಸೂಕ್ತವಾಗಿದೆ.
-ಮಲ್ಲನಗೌಡ ಮತ್ತು ಮಂಜುಳಾ
ದಾವಣಗೆರೆ ನವಜೋಡಿ