ರಾಜ್ಯದ 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಚು.ಆಯೋಗ ಸಜ್ಜು

Update: 2026-08-21 16:35 IST

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಒಟ್ಟು 4,46,35,899 ಮತದಾರರ ಎನ್ಯುಮರೇಷನ್ ಫಾರಂಗಳು ಡಿಜಿಟಲೀಕರಣಗೊಂಡಿವೆ. ಈ ಪೈಕಿ 43,80,740 ಮತದಾರರಿಗೆ ಭಾರತ ಚುನಾವಣಾ ಆಯೋಗವು ಆ.24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ನೋಟಿಸ್ ನೀಡಲು ಸಜ್ಜಾಗಿದೆ. ಇದು ಒಟ್ಟು ಮತದಾರರ ಶೇ.9.81ರಷ್ಟಿದೆ.

ಆ.24ರಿಂದ ಅ.22ರ ವರೆಗೆ ನೋಟಿಸ್ ಹಂತ, ಆಕ್ಷೇಪಗಳು ಹಾಗೂ ಕ್ಲೇಮುಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಲು ಅವಧಿ ನಿಗದಿಪಡಿಸಲಾಗಿದೆ. 20,35,312 ಮತದಾರರು ಸಲ್ಲಿಸಿರುವ ವಿವರಗಳಲ್ಲಿ ವೈಪರೀತ್ಯಗಳು ಕಂಡುಬಂದಿವೆ. 23,45,428 ಮತದಾರರದ್ದು ಮ್ಯಾಪಿಂಗ್ ಆಗಿಲ್ಲ. ಈ ಎರಡು ವರ್ಗಗಳ 43,80,740 ಮತದಾರರಿಗೆ ಚುನಾವಣಾ ನೋಂದಣಾಧಿಕಾರಿಗಳು ಬಿಎಲ್‌ಒಗಳ ಮೂಲಕ ನೋಟಿಸ್ ತಲುಪಿಸಲಿದ್ದಾರೆ.

ಇಡೀ ರಾಜ್ಯದ 43,80,740 ಮತದಾರರ ಪೈಕಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲೆ 24,05,990(ಶೇ.42.21)ಮತದಾರರು ನೋಟಿಸ್ ಪಡೆಯಲಿದ್ದಾರೆ. ಅದರಂತೆ, ಬಿಬಿಎಂಪಿ ಉತ್ತರ ಜಿಲ್ಲೆಯಲ್ಲಿ ಒಟ್ಟು 12,80,085 ಮತದಾರರ ಪೈಕಿ 6,13,003(ಶೇ.47.89), ಬಿಬಿಎಂಪಿ ಕೇಂದ್ರ ಜಿಲ್ಲೆಯಲ್ಲಿ 10,29,190 ಮತದಾರರ ಪೈಕಿ 4,29,364(ಶೇ.41.72), ಬೆಂಗಳೂರು ನಗರ ಜಿಲ್ಲೆಯಲ್ಲಿ 23,03,594 ಮತದಾರರ ಪೈಕಿ 9,45,998(ಶೇ.41.07) ಹಾಗೂ ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ 10,86,750 ಮತದಾರರ ಪೈಕಿ 4,17,625(ಶೇ.38.43) ಮತದಾರರಿಗೆ ನೋಟಿಸ್ ಸಿಗಲಿದೆ.

ನೋಟಿಸ್ ಪಡೆದ ಮತದಾರರು ಏನು ಮಾಡಬೇಕು?: ಚುನಾವಣಾ ನೋಂದಣಾಧಿಕಾರಿ(ಇಆರ್‌ಒ) ಬಿಎಲ್‌ಒ ಮೂಲಕ ನೀಡುವ ನೋಟಿಸ್ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಅದರಲ್ಲಿ ಭಾರತ ಚುನಾವಣಾ ಆಯೋಗ ಮಾನ್ಯ ಮಾಡಿರುವ ಯಾವ ದಾಖಲೆಯೊಂದಿಗೆ(ಆಧಾರ್ ಜೊತೆಗೆ ಇನ್ನೆರೆಡು) ಮತದಾರರು ಯಾವ ದಾಖಲೆಯೊಂದಿಗೆ ಯಾವಾಗ? ಎಲ್ಲಿಗೆ? ಎಷ್ಟು ಸಮಯಕ್ಕೆ ಹಾಜರಾಗಬೇಕು ಎಂಬ ವಿವರಗಳು ಇರುತ್ತವೆ.ಎನ್ಯುಮರೇಷನ್ ಫಾರಂ ಮಾದರಿಯಲ್ಲೆ ಅದರಲ್ಲಿ ಕ್ಯೂಆರ್ ಕೋಡ್ ಇರಲಿದೆ. ಮತದಾರರು ಅದನ್ನು ಸ್ಕ್ಯಾನ್ ಮಾಡಿ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಆದರೆ, ಭೌತಿಕವಾಗಿ ಚುನಾವಣಾ ನೋಂದಣಾಧಿಕಾರಿ ಎದುರು ಹಾಜರಾಗುವುದು ಕಡ್ಡಾಯ. ಮತದಾರರ ಅನುಕೂಲಕ್ಕಾಗಿ ಹೆಚ್ಚುವರಿ ಚುನಾವಣಾ ನೋಂದಣಾಧಿಕಾರಿ (ಎಇಆರ್‌ಒ) ಗಳನ್ನು ನೇಮಕ ಮಾಡಿಕೊಳ್ಳಲು ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದಾಗಿದೆ.

ಒಮ್ಮೆ ಮಾತ್ರ ಕಾಲಾವಕಾಶ: ಅಲ್ಲದೆ, ಗ್ರಾಪಂ ಕಚೇರಿ, ವಾರ್ಡ್ ಕಚೇರಿ ಅಥವಾ ಸಮೀಪದ ಮತಗಟ್ಟೆಯಲ್ಲೆ ಮತದಾರರಿಂದ ದಾಖಲೆ ಪಡೆಯುವಂತೆ ಇಆರ್‌ಒ, ಎಇಆರ್‌ಒಗಳಿಗೆ ಸೂಚಿಸಲಾಗಿದೆ. ನೋಟಿಸ್‌ನಲ್ಲಿ ನಿಗದಿಪಡಿಸಿರುವ ದಿನಾಂಕದಂದು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಒಮ್ಮೆ ಮಾತ್ರ ಕಾಲಾವಕಾಶ ಪಡೆಯಲು ಮತದಾರರಿಗೆ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಮತದಾರರು ಹಾಜರಾಗದಿದ್ದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲಾಗುತ್ತದೆ. ಒಬ್ಬ ಚುನಾವಣಾ ನೋಂದಣಾಧಿಕಾರಿ ಒಂದು ದಿನಕ್ಕೆ ಕೆಲಸದ 8 ಗಂಟೆಗಳ ಅವಧಿಯಲ್ಲಿ 150 ನೋಟಿಸ್‌ಗಳನ್ನು ವಿಚಾರಣೆ ನಡೆಸಬೇಕು. ಪ್ರತೀ ನೋಟಿಸ್‌ಗೆ 2.08 ನಿಮಿಷ ವಿನಿಯೋಗಿಸಬೇಕಿದೆ.

ಮೇಲ್ಮನವಿಗೆ ಅವಕಾಶ: ಮತದಾರರು ಸಲ್ಲಿಸಿರುವ ದಾಖಲೆಗಳನ್ನು ಇಆರ್‌ಒ ಅಥವಾ ಎಇಆರ್‌ಒ ಜಿಲ್ಲಾ ಚುನಾವಣಾಧಿಕಾರಿ(ಡಿಇಒ)ಗೆ ಕಳುಹಿಸುತ್ತಾರೆ. ಡಿಇಒ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಇಆರ್‌ಒ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಆರ್‌ಒ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಆಕ್ಷೇಪ ಇದ್ದಲ್ಲಿ ಮತದಾರ ಡಿಇಒಗೆ 15 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. ಡಿಇಒ ನಿರ್ಧಾರದ ಬಗ್ಗೆ ಆಕ್ಷೇಪ ಇದ್ದರೆ 30 ದಿನಗಳ ಒಳಗೆ ಮುಖ್ಯ ಚುನಾವಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕು.

ಎಎಸ್‌ಡಿಡಿಒ: ರಾಜ್ಯದಲ್ಲಿರುವ ಒಟ್ಟು 59,050 ಮತಗಟ್ಟೆಗಳ ಪೈಕಿ ಶೇ.90ಕ್ಕಿಂತ ಹೆಚ್ಚಿನ ಮತಗಳನ್ನು ಎಎಸ್‌ಡಿಡಿಒ ಎಂದು ಗುರುತಿಸಿರುವ ಬಿಬಿಎಂಪಿ ಉತ್ತರ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ತಲಾ ಒಂದು ಮತಗಟ್ಟೆಗಳಿವೆ. ಶೇ.80 ರಿಂದ 90ರಷ್ಟು ಮತದಾರರನ್ನು ಗುರುತಿಸಿರುವ 11, ಶೇ.70 ರಿಂದ 80ರಷ್ಟು ಮತದಾರರನ್ನು ಗುರುತಿಸಿರುವ 101, ಶೇ.60 ರಿಂದ 70ರಷ್ಟು ಮತದಾರರನ್ನು ಗುರುತಿಸಿರುವ 457 ಹಾಗೂ ಶೇ.50 ರಿಂದ 60ರಷ್ಟು ಮತದಾರರನ್ನು ಗುರುತಿಸಿರುವ 2,288 ಮತಗಟ್ಟೆಗಳಿವೆ.

1,875 ಹೊಸ ಮತಗಟ್ಟೆಗಳ ಸೇರ್ಪಡೆ: ಚುನಾವಣಾ ಆಯೋಗದ ನಿರ್ದೇಶನದಂತೆ ಗರಿಷ್ಠ 1,200 ಮತದಾರರಿಗೆ ಸೀಮಿತಗೊಳಿಸಿ, ಮತಗಟ್ಟೆಗಳನ್ನು ತರ್ಕಬದ್ಧಗೊಳಿಸಲಾಗಿದೆ. ಇದರಿಂದಾಗಿ, ಹೊಸದಾಗಿ 1,875 ಮತಗಟ್ಟೆಗಳನ್ನು ಸೇರ್ಪಡೆ ಮಾಡಲಾಗಿದೆ. 15 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ.‌



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಅಮ್ಜದ್‍ ಖಾನ್ ಎಂ.

contributor

Similar News