ವಿಶ್ವ ವೇದಿಕೆಯಲ್ಲಿ ಗ್ರಾಮೀಣ ಪ್ರತಿಭೆ ಧನುಷ್ ಎಂ.ಜಿ.ಗೆ ಐತಿಹಾಸಿಕ ಗೌರವ
ಜಿಟಿಟಿಸಿಗೆ ಮೊದಲ ಬಾರಿಗೆ ವರ್ಲ್ಡ್ ಸ್ಕಿಲ್ಸ್ ಏಷ್ಯ ಪದಕ
ಬೆಂಗಳೂರು, ಡಿ.6: ತಾಂತ್ರಿಕ ಕೌಶಲ್ಯದ ಜಾಗತಿಕ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಧನುಷ್ ಒದಗಿಸಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯ ಗ್ರಾಮೀಣ ಯುವ ಪ್ರತಿಭೆ ಧನುಷ್ ಎಂ.ಜಿ ಅವರು ವರ್ಲ್ಡ್ ಸ್ಕಿಲ್ಸ್ ಏಷ್ಯ-2025 (ತೈಪೆ, ತೈವಾನ್ ದೇಶ) ಸ್ಪರ್ಧೆಯಲ್ಲಿ ‘ವಿದ್ಯುತ್ ಅನುಸ್ಥಾಪನೆ’ (ಇಲೆಕ್ಟ್ರಾನಿಕ್ ಇನ್‌ಸ್ಟಾಲೇಷನ್) ವಿಭಾಗದಲ್ಲಿ ‘ಮೆಡಾಲಿಯನ್ ಆಫ್ ಎಕ್ಸಲೆನ್ಸ್’ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಇದು ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಇತಿಹಾಸದಲ್ಲೇ ಮೊದಲ ‘ವರ್ಲ್ಡ್ ಸ್ಕಿಲ್ಸ್ ಏಷ್ಯ’ ಪದಕವಾಗಿದೆ. ಕರ್ನಾಟಕದ ಗ್ರಾಮೀಣ ಭಾಗದಿಂದ ಬಂದ ಯುವಜನರಿಗೆ ದೊಡ್ಡ ಸ್ಫೂರ್ತಿಯಾಗಿದೆ.
ಮಧುಗಿರಿಯ ಗೋವಿಂದರಾಜ್ ಹಾಗೂ ಜಯಲಕ್ಷ್ಮೀ ದಂಪತಿಯ ಪುತ್ರ ಧನುಷ್, ಮಧುಗಿರಿಯ ಎಸ್‌ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರೈಸಿ, ಗೌರಿಬಿದನೂರು ಜಿಟಿಟಿಸಿಯಲ್ಲಿ ಮೆಕಾಟ್ರಾನಿಕ್ಸ್ ಡಿಪ್ಲೊಮಾ ಪಡೆದರು. ಬಳಿಕ ಬೆಂಗಳೂರು ಜಿಟಿಟಿಸಿಯಲ್ಲಿ ಒಂದು ವರ್ಷದ ಇನ್-ಪ್ಲಾಂಟ್ ತರಬೇತಿ ಮತ್ತು ವಿಶೇಷ ಇಲೆಕ್ಟ್ರಾನಿಕ್ ಇನ್‌ಸ್ಟಾಲೇಷನ್ ತರಬೇತಿ ಪಡೆದರು.
2024ರಲ್ಲಿ ‘ಇಂಡಿಯಾ ಸ್ಕಿಲ್’ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ಧನುಷ್, ಭಾರತದ ಅಧಿಕೃತ ಪ್ರತಿನಿಧಿಯಾಗಿ ತೈಪೆಗೆ ಆಯ್ಕೆಯಾಗಿದ್ದರು. ಏಷ್ಯದ ದಿಗ್ಗಜ ದೇಶಗಳ ಕುಶಲಕರ್ಮಿಗಳೊಂದಿಗೆ ನಡೆದ ತೀವ್ರ ಸ್ಪರ್ಧೆಯಲ್ಲಿಯೂ ತಾಂತ್ರಿಕ ನಿಖರತೆ, ಸಮಯ ನಿರ್ವಹಣೆಯಿಂದ ಈ ಪದಕವನ್ನು ಪಡೆದಿದ್ದಾರೆ.
ಧನುಷ್ ಅವರ ಈ ಸಾಧನೆಗೆ ರಾಜ್ಯದ ಯುವಜನತೆ, ಜಿಟಿಟಿಸಿ ಕುಟುಂಬ, ಗ್ರಾಮದ ಜನತೆ ಹಾಗೂ ಶಿಕ್ಷಕ ವರ್ಗ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ. ಕೌಶಲ್ಯಕ್ಕೆ ಗಡಿ-ನಾಡಿಲ್ಲ ಎಂಬ ಸಂದೇಶವನ್ನು ಗ್ರಾಮೀಣ ಯುವ ಪ್ರತಿಭೆ ಧನುಷ್ ಎಂ.ಜಿ. ಈಗ ಪ್ರಪಂಚಕ್ಕೆ ತಲುಪಿಸಿದ್ದಾರೆ.
ಭಾರತವನ್ನು ಪ್ರತಿನಿಧಿಸಿ ವರ್ಲ್ಡ್ ಸ್ಕಿಲ್ಸ್ ಏಷ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. 18 ದೇಶಗಳೊಂದಿಗೆ ಸ್ಪರ್ಧಿಸುವುದು ನಿಜಕ್ಕೂ ಕಠಿಣ ಅನುಭವವಾಗಿತ್ತು.
ನನ್ನ ಪರಿಪೂರ್ಣತೆ ಮತ್ತು ಸಮಯಪ್ರಜ್ಞೆಯಿಂದ ನಾನು ಪದಕವನ್ನು ಗೆಲ್ಲಲು ಸಾಧ್ಯವಾಯಿತು. ಈ ಗೆಲುವನ್ನು ನನ್ನ ಎಲ್ಲ ತರಬೇತುದಾರರು, ಜಿಟಿಟಿಸಿ ಮತ್ತು ಕುಟುಂಬಕ್ಕೆ ಅರ್ಪಿಸುತ್ತೇನೆ.
-ಧನುಷ್ ಎಂ.ಜಿ., ಪದಕ ಪುರಸ್ಕೃತ