ಬರಗಾಲದಲ್ಲೂ ಹರಿಯುತ್ತಿರುವ ಐತಿಹಾಸಿಕ ಕರೇಜ್ ನೀರು
ಬೀದರ್ ರೈತರಿಗೆ ಆಸರೆಯಾಗುತ್ತಿರುವ ಪರ್ಷಿಯಾದ ತಂತ್ರಜ್ಞಾನ!
ಬೀದರ್, ನ.12: ಮಳೆಯಿಲ್ಲದೆ ಬರಗಾಲ ಆವರಿಸಿದ್ದು, ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ನಗರದ ಸಮೀಪದ ನೌಬಾದ್ನಲ್ಲಿರುವ ಐತಿಹಾಸಿಕ ಕರೇಜ್ ಮಾತ್ರ ಬರಗಾಲದಲ್ಲೂ ನಿರಂತರವಾಗಿ ನೀರು ಹರಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಆಸರೆಯಾಗಿದೆ.
ನೌಬಾದ್ನಲ್ಲಿರುವ ಈ ಕರೇಜ್ನಲ್ಲಿ ಎಲ್ಲ ಋತುಗಳಲ್ಲೂ ನೀರು ಹರಿಯುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೆ, ಬೇಸಿಗೆ ಮತ್ತು ಚಳಿಗಾಲದಲ್ಲಿ ಸ್ವಲ್ಪ ಕಡಿಮೆಯಾಗುತ್ತದೆ. ಆದರೂ ಪ್ರತಿದಿನ ಲಕ್ಷಾಂತರ ಲೀಟರ್ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಗೆ ನೀರಿನ ಆಸರೆಯಾಗಿದೆ. ಈ ನೀರನ್ನು ಬಳಸಿಕೊಂಡು ರೈತರು ಕಬ್ಬು, ಗೋಧಿ, ತೊಗರಿ, ಅವರೆ, ಜೋಳ, ಸೋಯಾ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೈನುಗಾರಿಕೆಗೆ ಅಗತ್ಯವಾದ ಹುಲ್ಲನ್ನೂ ಬೆಳೆಸುತ್ತಿದ್ದಾರೆ.
ನೌಬಾದ್ನ ಸಿದ್ಧೇಶ್ವರ ಮಂದಿರದ ಸಮೀಪ ಕರೇಜ್ ಅಂತ್ಯಗೊಳ್ಳುತ್ತದೆ. ಇಲ್ಲಿಂದ ಹೊರಬರುವ ನೀರು ಬಯಲು ಪ್ರದೇಶಕ್ಕೆ ಹರಿಯುತ್ತದೆ. ಆದರೆ, ಈ ನೀರನ್ನು ಸಂರಕ್ಷಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ಇದೇ ಸ್ಥಳದಲ್ಲಿ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು ಹಾಗೂ ವಾಹನಗಳನ್ನು ಸ್ವಚ್ಛಗೊಳಿಸುವುದು ಸಾಮಾನ್ಯವಾಗಿದೆ.
ಇದರಿಂದ ಸೋಪಿನ ಅಂಶ ಸೇರಿದಂತೆ ಇತರ ಕಲ್ಮಶಗಳು ನೀರಿಗೆ ಸೇರುತ್ತಿವೆ. ಈ ನೀರನ್ನು ಕೃಷಿಗೆ ಬಳಸುವುದರಿಂದ ತರಕಾರಿ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ತರಕಾರಿ ಬೆಳೆದರೂ ಬೆಳೆ ಸುಟ್ಟುಹೋಗುತ್ತಿದೆ. ಹೀಗಾಗಿ ಕರೇಜಿನಿಂದ ಹೊರಬರುವ ನೀರನ್ನು ಸಂರಕ್ಷಿಸಿ, ಕೃಷಿಗೆ ಯೋಗ್ಯವಾಗಿ ಬಳಸುವ ವ್ಯವಸ್ಥೆ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕರೇಜ್ ಪತ್ತೆಯಾಗುವ ಮೊದಲೇ ಅದರ ಮೇಲ್ಭಾಗದಲ್ಲಿ ಕಟ್ಟಡಗಳು ಮತ್ತು ಅಂಗಡಿಗಳು ನಿರ್ಮಾಣವಾಗಿವೆ. ಇತ್ತೀಚೆಗೆ ಕರೇಜ್ನ ಬಾವಿಯೊಂದರೊಳಗೆ ವಿದ್ಯುತ್ ಕಂಬ ಬಿದ್ದಿದ್ದ ಘಟನೆಯೂ ನಡೆದಿತ್ತು. ಬಳಿಕ ಆ ಸ್ಥಳಕ್ಕೆ ಕಬ್ಬಿಣದ ಜಾಲಿ ಅಳವಡಿಸಿ ರಕ್ಷಣೆ ಮಾಡಲಾಗಿದೆ. ಇಂತಹ ಘಟನೆಗಳು ಕರೇಜ್ನ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ.
ಏನಿದು ಕರೇಜ್?
ಬೀದರ್ ಎತ್ತರದ ಪ್ರದೇಶದಲ್ಲಿದ್ದು, ಇಲ್ಲಿನ ಭೂಮಿಯ ಮೇಲ್ಭಾಗದಲ್ಲಿ ಲ್ಯಾಟರೈಟ್ ಮಣ್ಣಿನ ಪದವಿದೆ. ಇದರ ಕೆಳಭಾಗದಲ್ಲಿ ರಂಧ್ರಗಳಿಂದ ಕೂಡಿದ ಕಲ್ಲಿನ ಪದರ ಗಳಿವೆ. ಮಳೆಗಾಲದಲ್ಲಿ ಈ ಕಲ್ಲುಪದರಗಳು ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಬಳಿಕ ಭೂಮಿಯೊಳಗಿನ ನೀರು ಸುತ್ತಮುತ್ತಲಿನ ಪ್ರದೇಶಗಳಿಂದ ಬುಗ್ಗೆಗಳ ರೂಪದಲ್ಲಿ ಹರಿದು ಸುರಂಗವನ್ನು ಸೇರುತ್ತದೆ. ಹೀಗೆ ಸಂಗ್ರಹವಾದ ನೀರು ಕರೇಜ್ ಮೂಲಕ ನಿರಂತರವಾಗಿ ಹೊರಬರುತ್ತದೆ.
ಕರೇಜ್ನ ಇತಿಹಾಸ
ಕರೇಜ್ ಪರ್ಷಿಯಾದಲ್ಲಿ ಬಳಕೆಯಲ್ಲಿದ್ದ ಪುರಾತನ ಜಲಸಂಗ್ರಹ ಮತ್ತು ನೀರು ಪೂರೈಕೆ ತಂತ್ರಜ್ಞಾನವಾಗಿದೆ. ಸುಮಾರು 15ನೇ ಶತಮಾನದಲ್ಲಿ ಬಹಮನಿ ಅರಸರು ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕದ ಕಲಬುರಗಿ, ವಿಜಯಪುರ ಮತ್ತು ಬೀದರ್ನಲ್ಲಿಯೂ ಕರೇಜ್ ವ್ಯವಸ್ಥೆಗಳಿವೆ ಎಂದು ಹೇಳಲಾಗುತ್ತದೆ.
ಬೀದರ್ನ ಭೌಗೋಳಿಕ ರಚನೆಗೆ ಅನುಗುಣವಾಗಿ ಈ ಸುರಂಗ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಹಲವು ಕರೇಜ್ಗಳು ಇರಬಹುದು ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಆದರೆ, ಇಲ್ಲಿಯವರೆಗೆ ನೌಬಾದ್ನ ಕರೇಜ್ ಮಾತ್ರ ಪತ್ತೆಯಾಗಿದೆ.
ಭೂಮಿಯ ಸುಮಾರು 60 ಅಡಿಗೂ ಹೆಚ್ಚು ಆಳದಲ್ಲಿ ಈ ಕರೇಜ್ ನಿರ್ಮಿಸಲಾಗಿದೆ. ಕೋಳಾರ್ ಪ್ರದೇಶದಿಂದ ನೌಬಾದ್ನ ಸಿದ್ಧೇಶ್ವರ ಮಂದಿರದವರೆಗೆ ಸುಮಾರು 3 ಕಿ.ಮೀ. ಉದ್ದಕ್ಕೆ ಹರಡಿದೆ ಎಂದು ಅಂದಾಜಿಸಲಾಗಿದೆ. ಸುರಂಗದ ಉದ್ದಕ್ಕೂ ಹತ್ತಾರು ತೆರೆದ ಬಾವಿಗಳನ್ನು ನಿರ್ಮಿಸಲಾಗಿದ್ದು, ಇವುಗಳ ಮೂಲಕ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಭಾಗದ ರೈತರಿಗೆ ಕರೇಜ್ ನೀರು ತುಂಬಾ ಉಪಯುಕ್ತವಾಗಿದೆ. ನಾವು ಹಲವು ವರ್ಷಗಳಿಂದ ಬೇರೆಯವರ ಎಂಟು ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಕೃಷಿ ಮಾಡುತ್ತಿದ್ದೇವೆ. ಕರೇಜ್ ನೀರನ್ನೇ ಅವಲಂಬಿಸಿ ಕಬ್ಬು, ತೊಗರಿ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇವೆ.
-ಶಾಬುದ್ದಿನ್, ರೈತ
ತ್ಯಾಜ್ಯದಿಂದ ಕಲುಷಿತವಾಗುತ್ತಿರುವ ನೀರು
ಸಿದ್ಧೇಶ್ವರ ಮಂದಿರದ ಸಮೀಪ ಕರೇಜ್ ನೀರಿಗೆ ಸಾರ್ವಜನಿಕರು ಕಸ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಸುತ್ತಮುತ್ತ ಗಿಡಗಂಟಿಗಳೂ ಬೆಳೆದಿವೆ. ಇದರಿಂದ ನೀರು ಕಲುಷಿತಗೊಳ್ಳುವುದಲ್ಲದೆ, ಕರೇಜ್ ವೀಕ್ಷಣೆಗೆ ಬರುವವರಿಗೂ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸದೆ ಸ್ವಚ್ಛತೆ, ಸುರಕ್ಷತೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಕರೇಜ್ನ ನೀರನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ, ವ್ಯವಸ್ಥಿತವಾಗಿ ಬಳಸಿಕೊಂಡರೆ ಬರಗಾಲದ ಸಂದರ್ಭದಲ್ಲಿಯೂ ಬೀದರ್ ನಗರದ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಲು ನೆರವಾಗಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕರೇಜ್ನತ್ತ ಗಮನಹರಿಸಿ, ಅದರ ರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ.
ಸಿದ್ಧೇಶ್ವರ ಮಂದಿರದ ಸಮೀಪ ಸಾರ್ವಜನಿಕರು ಬಟ್ಟೆ ತೊಳೆಯುವುದರಿಂದ ನೀರಿಗೆ ಸೋಪಿನ ಅಂಶ ಸೇರುತ್ತಿದೆ. ಇದರಿಂದ ತರಕಾರಿ ಬೆಳೆ ಬೆಳೆಯಲು ತೊಂದರೆಯಾಗುತ್ತಿದೆ. ಕರೇಜ್ ನೀರನ್ನು ಸುರಕ್ಷಿತವಾಗಿ ಸಂರಕ್ಷಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ನೀರು ಕುಡಿಯಲು ಕೂಡ ಸೂಕ್ತವಾಗಿದ್ದು, ಇದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.
-ಸಿದ್ದು, ರೈತನ ಮಗ